ಸಾರಾಂಶ
೬,೭೬೩ ಮನೆಗಳಿಗೆ ನೀರು ಪೂರೈಸಲು ನಗರದ ೯೦ ಕಿ.ಮೀ ರಸ್ತೆ ಅಗೆದು ಪೈಪ್‌ಲೈನ್ ಅಳವಡಿಸಲಾಗಿದೆ. ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ತರಾತುರಿಯಲ್ಲಿ ಕಾಮಗಾರಿ ಮುಗಿಸಿ ಹಸ್ತಾಂತರಿಸಿದೆ.
ಶಿವಾನಂದ ಪಿ.ಮಹಾಬಲಶೆಟ್ಟಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಬರೋಬ್ಬರಿ ೫ ವರ್ಷಗಳ ಹಿಂದೆ ಕರ್ನಾಟಕ ನೀರು ಸರಬರಾಜು ಮಂಡಳಿ ಅಧೀನದಲ್ಲಿ ನಗರೋತ್ಥಾನ ಯೋಜನೆಯಡಿ ರಬಕವಿ-ಬನಹಟ್ಟಿ ನಗರಸಭೆಯು ಬನಹಟ್ಟಿಯಲ್ಲಿ ಆರಂಭಿಸಿದ್ದ ₹೩೦ ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆ ಕಳಪೆ ಕಾಮಗಾರಿಯಿಂದ ಸಂಪೂರ್ಣ ಹಳ್ಳ ಹಿಡಿದಿದ್ದು, ಕೋಟ್ಯಂತರ ರು. ಖರ್ಚಾದರೂ ನಗರದ ಜನರಿಗೆ ನಯಾಪೈಸೆ ಅನುಕೂಲವಾಗಿಲ್ಲ. ಯಾರದೋ ದುಡ್ಡು ಯಲ್ಲಮ್ಮ ಜಾತ್ರೆ ಎಂಬಂತಾಗಿದೆ.
೬,೭೬೩ ಮನೆಗಳಿಗೆ ನೀರು ಪೂರೈಸಲು ನಗರದ ೯೦ ಕಿ.ಮೀ ರಸ್ತೆ ಅಗೆದು ಪೈಪ್‌ಲೈನ್ ಅಳವಡಿಸಲಾಗಿದೆ. ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ತರಾತುರಿಯಲ್ಲಿ ಕಾಮಗಾರಿ ಮುಗಿಸಿ ಹಸ್ತಾಂತರಿಸಿದೆ. ಕಳಪೆ ಕಾಮಗಾರಿ ಹಾಗೂ ತಾಂತ್ರಿಕ ಕಾರಣಗಳಿಂದ ಕಾಮಗಾರಿ ಮುಗಿದು ನಾಲ್ಕು ವರ್ಷ ಗತಿಸಿದರೂ ಒಂದು ಹನಿ ನೀರು ಬಂದಿಲ್ಲ. ಹಳೆಯ ಕಾಲದ ಪೈಪ್‌ಲೈನ್ ಮೂಲಕವೇ ನಗರಸಭೆ ನೀರು ಸರಬರಾಜು ಮುಂದುವರಿಸಿದೆ.ಮೀಟರ್‌ಗಳು ಕಣ್ಣರೆ:
ಬನಹಟ್ಟಿಯ ಎಲ್ಲ ೬,೭೬೩ ಮನೆಗಳ ಮುಂದೆ ನೀರು ಬಳಕೆಯ ಮೀಟರ್ ಅಳವಡಿಕೆ ಮಾಡಲಾಗಿತ್ತು. ಆದರೆ, ಈಗ ಒಂದು ಮನೆಯ ಮುಂದೆಯೂ ಆ ಮೀಟರ್ ಕಂಡುಬರಲ್ಲ. ಕಳಪೆ ಮೀಟರ್ ಅಳವಡಿಕೆಯಿಂದ ಅವು ನೀರುಬರುವ ಮುನ್ನವೇ ಕಿತ್ತು ಹೋಗಿವೆ.ನಗರಸಭೆ ಹಸ್ತಾಂತರ ವಿವಾದ:
ಪೂರ್ಣ ಕಾಮಗಾರಿ ನಡೆಸದೆ ನೀರು ಸರಬರಾಜು ಮಂಡಳಿ ಆತುರವಾಗಿ ನಗರಸಭೆಗೆ ಹಸ್ತಾಂತರಿಸಿದೆ ಎಂಬುದು ನಗರಸಭೆ ಅಧಿಕಾರಿಗಳ ಆರೋಪ. ತಜ್ಞರಿಂದ ಪರಿಶೀಲನೆ ನಡೆಸಿ ಪ್ರಾಯೋಗಿಕವಾಗಿ ನೀರು ಸರಬರಾಜು ನಡೆಸಿ ಹಸ್ತಾಂತರಕ್ಕೆ ತೆಗೆದುಕೊಳ್ಳಬೇಕಿದ್ದ ನಗರಸಭೆಯೂ ಸಹ ಅಷ್ಟೇ ತರಾತುರಿಯಲ್ಲಿ ಹಸ್ತಾಂತರ ಮಾಡಿಕೊಂಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಜೊತೆಗೆ ಜನರಿಂದ ಕುಡಿಯುವ ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಕಾರಣ ನಗರಸಭೆ ಕೋಟ್ಯಂತರ ಹಾನಿ ಅನುಭವಿಸುವಂತಾಗಿದೆ.ಈಗ ರಬಕವಿಯಲ್ಲಿ ಕಾಮಗಾರಿ:
ಬನಹಟ್ಟಿಯಲ್ಲಿ ಕೋಟ್ಯಂತರ ವೆಚ್ಚದ ಕುಡಿಯುವ ನೀರಿನ ಯೋಜನೆ ಹಳ್ಳಹಿಡಿದಿರುವ ಮಧ್ಯೆ ಇತ್ತ ಬಕವಿಯ ೪೬೫೦ ಮನೆಗಳಿಗೆ ನೀರು ಪೂರೈಸಲು ಅಮೃತ-೨.೦ ಯೋಜನೆಯಡಿ ₹೩೪.೪೭ ಕೋಟಿ ವೆಚ್ಚದಲ್ಲಿ ೯೦ ಕಿ.ಮೀ.ನಷ್ಟು ಪೈಪ್‌ಲೈನ್ ಕಾಮಗಾರಿ ಶುರುವಾಗಿದೆ.ಸದ್ಬಳಕೆಯಾಗದ ಯೋಜನೆಗಳು
ನಗರಸಭೆಯಾಗಿರುವ ರಬಕವಿ-ಬನಹಟ್ಟಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಅನೇಕ ಯೋಜನೆಗಳು ಬರುತ್ತವೆ. ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡುವಲ್ಲಿ ಸ್ಥಳೀಯ ಆಡಳಿತ ಮತ್ತು ಜನಪ್ರತಿನಿಧಿಗಳು ಸಂಪೂರ್ಣ ವಿಫಲವಾಗಿದ್ದಾರೆ. ಹತ್ತಾರು ಯೋಜನೆಗಳು ಕಣ್ಣು ಬಿಡುವ ಮುನ್ನವೇ ಸತ್ತು ಹೋದ ನಿದರ್ಶನಗಳಿವೆ ಎಂಬುದು ಸ್ಥಳೀಯರ ಅಳಲು.ಈ ಕುರಿತು ಶಾಸಕ ಸಿದ್ದು ಸವದಿ ನೇತೃತ್ವ ವಹಿಸಿ, ನಗರಸಭೆ ಅಧಿಕಾರಿಗಳು, ಸದಸ್ಯರು ಮುತುವರ್ಜಿ ವಹಿಸಿ ಸಾರ್ವಜನಿಕರಿಗೆ ದೊರಕಬೇಕಾದ ಸೌಲಭ್ಯ ಹಾಗೂ ಯೋಜನೆಗಳನ್ನು ಪ್ರಾಮಾಣಿಕವಾಗಿ ತಲುಪಿಸಲು ಮುತುವರ್ಜಿ ವಹಿಸಬೇಕಿದೆ.
ನಗರೋತ್ಥಾನ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿಯನ್ನು ಈ ಹಿಂದಿದ್ದ ಅಧಿಕಾರಿಗಳ ಅವಧಿಯಲ್ಲಿ ಹಸ್ತಾಂತರಗೊಂಡಿದೆ. ಈ ಕುರಿತು ಪರಾಮರ್ಶಿಸಿ ಪ್ರಗತಿ ಪರಿಶೀಲಿಸಲಾಗುವುದು. ಅಮೃತ-೨ ಯೋಜನೆಯಡಿ ರಬಕವಿಗೆ ಕುಡಿಯುವ ನೀರು ಪೂರೈಕೆ ಯೋಜನೆಯ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಶೀಘ್ರ ನಗರದಲ್ಲಿ ಕಾಮಗಾರಿ ಆರಂಭವಾಗಲಿದೆ.ಜಗದೀಶ ಈಟಿ, ಪೌರಾಯುಕ್ತರು, ರಬಕವಿ-ಬನಹಟ್ಟಿ
ಈ ಕುರಿತು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯಿಂದ ಸೂಕ್ತ ಮಾಹಿತಿ ಪಡೆದು ಯೋಜನೆ ಜಾರಿ ಕುರಿತು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿಗೆ ನ್ಯಾಯ ಒದಗಿಸುವೆ.ವಿದ್ಯಾ ಪ್ರವೀಣ ದಭಾಡಿ, ಅಧ್ಯಕ್ಷರು, ನಗರಸಭೆ, ರಬಕವಿ-ಬನಹಟ್ಟಿ
ಬನಹಟ್ಟಿಯಲ್ಲಿ ನಡೆದ ಕಾಮಗಾರಿ ಸಂಪೂರ್ಣ ವಿಫಲವಾಗಿದೆ. ರಬಕವಿಯಲ್ಲಿಯೂ ಯಾವುದೇ ಅಧಿಕಾರಿ ಅಥವಾ ಸದಸ್ಯರಿಗೆ ಮಾಹಿತಿಯಿಲ್ಲದೆ ಕೆಲಸ ಪ್ರಾರಂಭಗೊಂಡಿದೆ. ನಾಗರಿಕರಿಗೆ ಸಂಪೂರ್ಣ ಮಾಹಿತಿ ನೀಡಿ ಇಲಾಖೆ ಕೆಲಸ ಪ್ರಾರಂಭೀಸಬೇಕು.ಯಲ್ಲಪ್ಪ ಕಟಗಿ, ನಗರಸಭಾ ಸದಸ್ಯ