ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ವಿಜ್ಞಾನ, ತಂತ್ರಜ್ಞಾನ ಎಷ್ಟೇ ಎತ್ತರ ಬೆಳೆದರೂ ಆಧ್ಯಾತ್ಮಿಕತೆ ಇನ್ನು ನಮ್ಮ ಹೃದಯದಲ್ಲಿದೆ ಎಂದರೆ ಅದಕ್ಕೆ ಜನರಲ್ಲಿ ಆಧ್ಯಾತ್ಮಿಕ ಚಿಂತನೆಯೇ ಕಾರಣ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಮಠದ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿ ತಿಳಿಸಿದರು.ಹಂಡನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಗಣಪತಿ ಪ್ರತಿಷ್ಠಾಪನೆ ಹಾಗೂ ನಾಗದೇವತೆಗಳ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ಶೀಘ್ರ ಸಿದ್ಧಿ ದಯಪಾಲಿಸುವವನು ಸಿದ್ಧಿ ವಿನಾಯಕ. ಇತರೆ ದೇವತೆಗಳು ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಾರೆ. ನಮ್ಮ ಬಾಳಿನ ಪಥದಲ್ಲಿ ಎಷ್ಟೇ ದುರ್ಗಮ ಕಷ್ಟಗಳು ಎದುರಾದರೂ ವಿಚಾಲಿತರಾಗದೆ ಪಯಣ ಮುಂದುವರಿಸಲು ಸಿದ್ಧಿ ವಿನಾಯಕ ಸಾಕಷ್ಟು ಸಿದ್ಧಿ ಬುದ್ಧಿ ಜ್ಞಾನ ನೀಡುತ್ತಾರೆ ಎಂದರು.
ನಾವು ವಿಚಲರಾಗದೆ ಒಳ್ಳೆಯ ಮಾರ್ಗದಲ್ಲೇ ನಡೆಯಬೇಕು. ಒಳ್ಳೆಯ ಕೆಲಸಗಳನ್ನು ಮಾಡಿದರೆ ಮಾತ್ರ ನಮಗೆ ದೇವರ ಅನುಗ್ರಹ ಸಿಗುತ್ತದೆ. ದೇವತೆಗಳು ಬಂದು ನಾವು ವಾಸಿಸುವ ಭೂಮಿಯಲ್ಲಿ ಇರಲು ಬಯಸುತ್ತಾರೆ. ನಾವು ಇಂತಹ ಪವಿತ್ರ ಭೂಮಿಯಲ್ಲಿ ಜನಿಸಿರುವುದು ನಮ್ಮ ತಂದೆ ತಾಯಿ ಪೂರ್ವಜರು ಮಾಡಿದ ಪುಣ್ಯ ಎಂದರು.ಭೂಮಿಯಲ್ಲಿ ಜೀವಿಸಲು ಮನುಷ್ಯ ನಿಷ್ಠೆ, ಶಿಸ್ತಿನಿಂದ ಇರುವುದು ಮುಖ್ಯ. ಒಳ್ಳೆಯ ರೀತಿಯಲ್ಲಿ ಬದುಕಲು ಅವಕಾಶವಿದೆ. ಭಕ್ತಿ ಮುಖಾಂತರ ಜ್ಞಾನವನ್ನು ಕೊಟ್ಟರೆ ಬುದ್ಧಿವಂತಿಕೆ ಹೃದಯವಂತಿಕೆ ನೀವು ಬಳಸಕೊಳ್ಳಬೇಕು. ಆಗ ನಿಮಗೆ ಗೌರವ ಸಿಗುತ್ತದೆ ನಿಮ್ಮ ಸ್ವಾಭಿಮಾನವು ಉಳಿಯುತ್ತದೆ ಎಂದರು.
ವಿಜ್ಞಾನ, ತಂತ್ರಜ್ಞಾನ ಸಾಕಷ್ಟು ಮುಗಿಲೆತ್ತರ ಬೆಳೆಯುತ್ತಿದೆ. ಜನರಲ್ಲಿರುವ ದೇವರ ಬಗೆಗಿನ ಭಕ್ತಿ, ಆಚಾರ ವಿಚಾರ, ಆಧ್ಯಾತ್ಮಿಕತೆ ಚಿಂತನೆಗಳನ್ನು ತೋರಿಸುವುದಕ್ಕಾಗಿ ಇಲ್ಲಿ ನೀವು ಸಿದ್ಧಿ ವಿನಾಯಕ ದೇವಸ್ಥಾನವನ್ನು ನಿರ್ಮಿಸಿದ್ದೀರಿ. ಒಳ್ಳೆಯತನಕ್ಕೆ ಶ್ರೇಷ್ಠತೆ ಬರಬೇಕಾದರೆ ಜ್ಞಾನವು ಇರಬೇಕು ಎಂದರು.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಇಂಗ್ಲಿಷ್ ಭಾಷೆ ಪಟ್ಟಣಿಗರಿಗೆ ಮಾತ್ರ ಏಕೆ ಬೇಕು ಎಂದು ನಮ್ಮ ಹಳ್ಳಿ ಮಕ್ಕಳಿಗೂ ಇಂಗ್ಲಿಷ್ ಭಾಷೆ ಕಲಿಸಲು ಮಾತೃಭಾಷೆ ಉಳಿಸಲು ಹಲವು ಯೋಜನೆಗಳನ್ನು ಹಾಕಿಕೊಂಡು ಪಬ್ಲಿಕ್ ಶಾಲೆಗಳನ್ನು ಆರಂಭಿಸಿದರು ಎಂದರು.
ಕೇಂದ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಅವರಿಗೆ ಸಿಕ್ಕಿರುವ ಹುದ್ದೆ ಒಳ್ಳೆಯ ಹುದ್ದೆಯಾಗಿದೆ. ಇದರಿಂದ ಸಾವಿರಾರು ಜನಕ್ಕೆ ಉದ್ಯೋಗ ನೀಡುವುದರ ಮುಖಾಂತರ ಇನ್ನೂ ಉತ್ತಮ ಕೆಲಸಗಳನ್ನು ಮಾಡಲಿ. ಅವರಿಗೆ ದೇವರು ಇನ್ನೂ ಆಯಸ್ಸು ಆರೋಗ್ಯ ನೀಡಲಿ ಎಂದು ಹಾರೈಸಿದರು.ಇದೇ ವೇಳೆ ಸಿದ್ಧಿ ವಿನಾಯಕ ಸಂಘದ ಅಧ್ಯಕ್ಷರಾದ ಶಿವಲಿಂಗೇಗೌಡ ಗೌರವಾಧ್ಯಕ್ಷ ಚಿಕ್ಕಸ್ವಾಮಿ ಸೇರಿದಂತೆ ಇತರರಿಗೆ ಸ್ವಾಮೀಜಿಯವರು ಆಶೀರ್ವದಿಸಿ ಅಭಿನಂದಿಸಿದರು. ದೇವಸ್ಥಾನ ನಿರ್ಮಾಣಕ್ಕೆ ಭೂಮಿ ನೀಡಿದವರನ್ನು ಸನ್ಮಾನಿಸಲಾಯಿತು. ದೇವಸ್ಥಾನ ನಿರ್ಮಾಣಕ್ಕೆ ಸಹಕರಿಸಿದ ಗಣ್ಯರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಅಭಿಯಂತರರಾದ ಮಹೇಶ್, ಜಿಪಂ ಮಾಜಿ ಸದಸ್ಯ ರವಿ ಕಂಸಾಗರ, ಹಲಗೂರು ಮುಖಂಡರಾದ ಎಚ್.ಎನ್.ರಾಮಚಂದ್ರಗೌಡ, ಕ್ರಿಯಾಶೀಲ ಗ್ರಾನೈಟ್ ಮಾಲೀಕರಾದ ಆನಂದ್ ಕುಮಾರ್, ಸುರೇಂದ್ರ ಹಾಗೂ ಇತರರು ಇದ್ದರು.