ಸಾರಾಂಶ
ಕಂಪ್ಲಿ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಎಲ್ಲೆಂದರಲ್ಲಿ ಕೊಲೆ, ಸುಲಿಗೆ, ದರೋಡೆ, ಕಳ್ಳತನ ಹಾಗೂ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಸರ್ಕಾರ ಇದ್ದರೂ ಸತ್ತಂತಿದೆ ಎಂದು ಮಾಜಿ ಸಚಿವ ಬಿ.ಶ್ರೀ ರಾಮುಲು ಆರೋಪಿಸಿದರು.
ಕಂಪ್ಲಿ ಕೋಟೆಯಲ್ಲಿ ತುಂಗಭದ್ರಾ ಜಲಾಶಯದ ಪ್ರವಾಹದಿಂದ ಸಮಸ್ಯೆ ಅನುಭವಿಸುತ್ತಿರುವ ನದಿ ಪಾತ್ರದ ಜನರ ಮನೆಗಳಿಗೆ ಗುರುವಾರ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಕಂಪ್ಲಿ-ಸಿರುಗುಪ್ಪ ಭಾಗ ಸೇರಿ ಅಂದಾಜು 1 ಸಾವಿರ ಎಕರೆಯಷ್ಟು ಬೆಳೆ ನಷ್ಟವಾಗಿದೆ. ನಮ್ಮ ಭಾಗದ ರೈತರು ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ನಲುಗಿ ಹೋಗಿದ್ದಾರೆ. ಪ್ರವಾಹದ ಭೀಕರತೆಯಿಂದ ನಷ್ಟಕ್ಕೊಳಗಾದ ರೈತರ ಕುರಿತು ವರದಿ ಪಡೆದು ಸರ್ಕಾರದ ಗಮನ ಸೆಳೆಯುವ ಮೂಲಕ ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಕಾರ್ಯ ಕೈಗೊಳ್ಳುತ್ತೇವೆ. ಕಂಪ್ಲಿ ಸೇತುವೆ ನಿರ್ಮಾಣಕ್ಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ₹69 ಕೋಟಿ ಅನುದಾನ ತಂದು ಸೇತುವೆ ನಿರ್ಮಾಣ ವಿಚಾರಕ್ಕೆ ಜೀವ ತರುವಂತಹ ಕೆಲಸ ಮಾಡಲಾಗಿತ್ತು. ಆದರೆ ಈಗಿನ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು 2 ವರ್ಷಗಳಾಗುತ್ತಾ ಬಂದರೂ ಈ ಕುರಿತು ಚಕಾರ ಎತ್ತದಿರುವುದು ಶೋಚನೀಯ. ಶಾಸಕರು, ಸಚಿವರು, ಸರ್ಕಾರ ಹಿತಾಸಕ್ತಿ ವಹಿಸಿ ನೂತನ ಸೇತುವೆ ನಿರ್ಮಿಸುವ ಮೂಲಕ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದರು.
ಪರಿಶಿಷ್ಟ ಪಂಗಡಗಳ ಸಮುದಾಯದ ಅಭಿವೃದ್ಧಿಗೆ ಇರಿಸಲಾದ ಅನುದಾನದ ಹಗರಣ, ಮುಡಾ ಹಗರಣ ಸೇರಿದಂತೆ ಅನೇಕ ಹಗರಣಗಳಿಂದ ಸರ್ಕಾರ ರಾಜ್ಯದ ಜನತೆಗೆ ಅನ್ಯಾಯವೆಸಗುತ್ತಿದೆ. ಈ ಹಗರಣಗಳ ವಿರುದ್ಧ, ಸಿಎಂ ರಾಜೀನಾಮೆಗೆ ಆಗ್ರಹಿಸಿ ಆ.3ರಂದು ಮೈಸೂರಿನಿಂದ ಬೆಂಗಳೂರಿನವರೆಗೂ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆ. ಸರ್ಕಾರ ಅನುವು ನೀಡಿದರೂ ಸರಿ, ಇಲ್ಲದಿದ್ದರೂ ಸರಿಯೇ ಹೋರಾಟದಿಂದ ಹಿಂದೆ ಸರಿಯುವ ಮಾತಿಲ್ಲ. ವಾಲ್ಮೀಕಿ ನಿಗಮ ಹಗರಣವನ್ನು ಖಂಡಿಸಿ ಬಳ್ಳಾರಿಯಿಂದ ಕೂಡಲಸಂಗಮ ದವರೆಗೂ ಹೋರಾಟ ನಡೆಸುವ ಕುರಿತು ಶೀಘ್ರದಲ್ಲಿಯೇ ತೀರ್ಮಾನ ಕೈಗೊಳ್ಳಲಾಗುವುದು ಎಂದರು.ಕೋಟೆಯಲ್ಲಿನ ನದಿ ಪಾತ್ರದ ಜನರಿಗೆ ಕಾಳಜಿ ಕೇಂದ್ರವನ್ನು ಗಂಗಾನಗರದ ಶಾಲೆಯೊಂದರಲ್ಲಿ ತೆರೆಯಲಾಗಿದೆ. ನಿತ್ಯ ಅಲ್ಲಿಗೆ ಸಂಚರಿಸಲು ಸಮಸ್ಯೆಯಾಗುತ್ತಿದೆ. ಕೋಟೆಯ ಶಾಲೆಯಲ್ಲಿಯೇ ಕಾಳಜಿಕೇಂದ್ರ ಆರಂಭಿಸುವಂತೆ ಸ್ಥಳೀಯರು ಬಿ.ಶ್ರೀರಾಮುಲುಗೆ ಒತ್ತಾಯಿಸಿದರು.
ಸ್ಥಳದಲ್ಲಿದ್ದ ತಹಸೀಲ್ದಾರ್ ಗೆ ಈ ಕುರಿತು ಗಮನ ಹರಿಸಿ ಸ್ಥಳೀಯರಿಗೆ ಅನುಕೂಲವಾಗುವಂತೆ ಸಮೀಪದಲ್ಲೇ ಕಾಳಜಿಕೇಂದ್ರ ಆರಂಭಿಸಲು ರಾಮುಲು ತಿಳಿಸಿದರು.ಈ ಸಂದರ್ಭದಲ್ಲಿ ಸಿರುಗುಪ್ಪ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು ಮೋಕಾ, ಕಂಪ್ಲಿ ಮಂಡಲ ಅಧ್ಯಕ್ಷ ಅಳ್ಳಳ್ಳಿ ವೀರೇಶ್, ಮುಖಂಡರಾದ ಪಿ. ಬ್ರಹ್ಮಯ್ಯ, ಬಿ.ಸಿದ್ದಪ್ಪ, ವಿ.ಎಲ್. ಬಾಬು, ಸಿ.ಆರ್.ಹನುಮಂತ, ಆರ್.ಆಂಜನೇಯ, ರಾಮಾಂಜಿನಿ, ಚಂದ್ರಕಾಂತ್ ರೆಡ್ಡಿ, ಕರಿಬಸವರಾಜ್ ಸ್ವಾಮಿ ಇದ್ದರು.