ನನ್ನ ಜತೆಗೆ ಶಾಸಕರಾದವರು ಸಿಎಂ, ಡಿಸಿಎಂ ಆದರೂ ನನಗೆ ಅದೃಷ್ಟ, ಅವಕಾಶ ಬರಲಿಲ್ಲ

| Published : Aug 05 2025, 11:46 PM IST

ನನ್ನ ಜತೆಗೆ ಶಾಸಕರಾದವರು ಸಿಎಂ, ಡಿಸಿಎಂ ಆದರೂ ನನಗೆ ಅದೃಷ್ಟ, ಅವಕಾಶ ಬರಲಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

೧೯೮೫ರಲ್ಲಿ ನನ್ನ ಜತೆಗೆ ಶಾಸಕರಾದ ಸಿದ್ದರಾಮಯ್ಯ, ಜಿ. ಪರಮೇಶ್ವರ ಅವರು ಸಿಎಂ, ಡಿಸಿಎಂ ಆಗಿದ್ದಾರೆ. ಕಾಂಗ್ರೆಸ್ ಕಟ್ಟುವಲ್ಲಿ ಪ್ರಮುಖರಾದ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನನಗೆ ಅದೃಷ್ಟ ಮತ್ತು ಅವಕಾಶ ಇಲ್ಲದ್ದಕ್ಕೆ ಸಿಎಂ ಆರ್ಥಿಕ ಸಲಹೆಗಾರ ಹುದ್ದೆಗೆ ತೃಪ್ತಿಪಡಬೇಕಾಯಿತು ಎಂದು ಬಸವರಾಜ ರಾಯರಡ್ಡಿ ಹೇಳಿದರು.

ಯಲಬುರ್ಗಾ:

ನನ್ನ ಜತೆಗೆ ಶಾಸಕರಾದವರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಮಂತ್ರಿಗಳಾಗಿದ್ದಾರೆ. ಆದರೆ, ನನಗೆ ಅವಕಾಶ ಮತ್ತು ಅದೃಷ್ಟವಿಲ್ಲದೆ ಇರುವುದರಿಂದ ಇಂದು ಸಿಎಂ ಆರ್ಥಿಕ ಸಲಹೆಗಾರನಾಗಿದ್ದೇನೆ ಎನ್ನುವ ಮೂಲಕ ಶಾಸಕ ಬಸವರಾಜ ರಾಯರಡ್ಡಿ ಮುಖ್ಯಮಂತ್ರಿ ಆಗುವ ಆಸೆ ವ್ಯಕ್ತಪಡಿಸಿದ್ದಾರೆ.

ನೂತನವಾಗಿ ರಾಜ್ಯ ಕೆಎಂಎಫ್ ಮಂಡಳಿಗೆ ಹಂಪಯ್ಯಸ್ವಾಮಿ ಹಿರೇಮಠ ನಾಮನಿರ್ದೇಶನಗೊಂಡ ಹಿನ್ನೆಲೆಯಲ್ಲಿ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಜಂಗಮ ಸಮುದಾಯದಿಂದ ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

೧೯೮೫ರಲ್ಲಿ ನನ್ನ ಜತೆಗೆ ಶಾಸಕರಾದ ಸಿದ್ದರಾಮಯ್ಯ, ಜಿ. ಪರಮೇಶ್ವರ ಅವರು ಸಿಎಂ, ಡಿಸಿಎಂ ಆಗಿದ್ದಾರೆ. ಕಾಂಗ್ರೆಸ್ ಕಟ್ಟುವಲ್ಲಿ ಪ್ರಮುಖರಾದ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನನಗೆ ಅದೃಷ್ಟ ಮತ್ತು ಅವಕಾಶ ಇಲ್ಲದ್ದಕ್ಕೆ ಸಿಎಂ ಆರ್ಥಿಕ ಸಲಹೆಗಾರ ಹುದ್ದೆಗೆ ತೃಪ್ತಿಪಡಬೇಕಾಯಿತು. ಎಲ್ಲವನ್ನೂ ಸಮಯ ಮತ್ತು ಸಂದರ್ಭ ನಿರ್ಧರಿಸುತ್ತದೆ ಎಂದರು.

ರಾಜಕಾರಣದಲ್ಲಿ ನನ್ನನ್ನು ನಂಬಿದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಗೌರವ ಕೊಡುವಂಥ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ್ ಸ್ನೇಹಿತರಿಗೆ ಸಹಕಾರಿ ರತ್ನ ಪ್ರಶಸ್ತಿ ಕೊಡಲು ಶಿಫಾರಸು ಮಾಡಲಾಗುವುದು ಎಂದು ಕಿಚಾಯಿಸಿದರು.

ದೇಶದ ಅತಿ ದೊಡ್ಡ ಸಂಸ್ಥೆ ಅಮುಲ್ ಡೈರಿ ನಂತರದ ಕರ್ನಾಟಕದ ಮಿಲ್ಕ್ ಫೆಡರೇಶನ್ ೨ನೇ ಸ್ಥಾನದಲ್ಲಿದೆ. ಅಭಿವೃದ್ಧಿ ವಿಚಾರ ಇಟ್ಟುಕೊಂಡು ರಾಜಕಾರಣಕ್ಕೆ ಬಂದಿರುವ ನಾನು ಜಾತಿ, ದ್ವೇಷದ ರಾಜಕಾರಣ ಮಾಡಿಲ್ಲ. ಅಲ್ಲದೆ ರಾಜಕೀಯಕ್ಕೆ ನನ್ನ ಕುಟುಂಬದವರನ್ನು ತಂದಿಲ್ಲ. ಪಕ್ಷದ ಕಾರ್ಯರ್ತರನ್ನೇ ನನ್ನ ಕುಟುಂಬದ ಸದಸ್ಯರೆಂದು ತಿಳಿದಿದ್ದೇನೆ. ಹಂಪಯ್ಯಸ್ವಾಮಿ ಹಿರೇಮಠ ಅವರು ಅದೃಷ್ಟದಿಂದ ನಾಮನಿರ್ದೇಶನಗೊಂಡಿದ್ದಾರೆ. ಸಮಾಜ ಸೇವೆ ಮಾಡಲು ಬಂದವರು ಸುಳ್ಳು ಹೇಳಬಾರದು ಎಂದ ಅವರು, ರಾಜಕೀಯದಲ್ಲಿ ಜಾತಿ ವ್ಯವಸ್ಥೆ ಹೆಚ್ಚಾಗಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು.

ಹಂಪಯ್ಯಸ್ವಾಮಿ ಹಿರೇಮಠ ಅವರು ಹಾಲು ಉತ್ಪಾದಕ ಸಂಘಗಳನ್ನು ಸದೃಢಗೊಳಿಸಬೇಕು. ಗ್ರಾಮೀಣ ಪ್ರದೇಶದ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ಹೈನುಗಾರಿಕೆ ಉತ್ತೇಜನಕ್ಕಾಗಿ ಜಾನುವಾರು ಕೊಡಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಲಾಗುವುದು ಎಂದರು.

ಈ ವೇಳೆ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ, ಪ್ರಮುಖರಾದ ಬಸಯ್ಯ ಮಠದ, ಅಜ್ಜಯ್ಯಸ್ವಾಮಿ ಹಿರೇಮಠ, ಶಿವಮೂರ್ತೆಯ್ಯ ಹಿರೇಮಠ, ಸಿದ್ದಯ್ಯ ಕಳ್ಳಿಮಠ, ಶಿವಾನಂದಯ್ಯ ಹಿರೇಮಠ, ವರದಯ್ಯ ಹೊಸಮನಿ, ಶರಣಪ್ಪ ಗಾಂಜಿ, ಡಾ. ಶಿವನಗೌಡ ದಾನರಡ್ಡಿ, ಈರಪ್ಪ ಕುಡಗುಂಟಿ, ಸಿದ್ದು ಪಾಟೀಲ್, ನಿಂಗಪ್ಪ ಕಮತರ, ಶರಣಗೌಡ ಬಸಾಪುರ, ಪುನೀತ ಕೊಪ್ಪಳ ಸೇರಿದಂತೆ ತರರು ಇದ್ದರು.