ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನವರಾತ್ರಿ ಹಬ್ಬದ ಆಯುಧಪೂಜೆ, ವಿಜಯದಶಮಿ ಸಂಭ್ರಮ ಸಿಲಿಕಾನ್ ಸಿಟಿಯಲ್ಲಿ ಕಳೆಗಟ್ಟಿದ್ದು, ವಾಹನ, ಕಚೇರಿ, ಮನೆಯ ಪರಿಕರಗಳ ಅಲಂಕಾರ ಪೂಜೆಗಾಗಿ ದುಪ್ಪಟ್ಟು ದರದ ನಡುವೆಯೂ ಜನತೆ ಹೂವು ಹಣ್ಣುಗಳ ಖರೀದಿಯಲ್ಲಿ ತೊಡಗಿದ್ದಾರೆ.ಹಬ್ಬದ ವೇಳೆ ಏರಿಕೆ ಆಗುವಂತೆ ಸಹಜವಾಗಿ ಹೂವು ಹಣ್ಣಿನ ದರ ಏರಿಕೆಯಾಗಿದೆ. ಅದಲ್ಲದೆ, ಮುಂದಿನ ಇಪ್ಪತ್ತು ದಿನಗಳಲ್ಲಿ ದೀಪಾವಳಿ ಇರುವುದರಿಂದ ಅಲ್ಲಿವರೆಗೆ ದರ ಹೆಚ್ಚಾಗಿಯೇ ಇರಲಿದೆ. ವಿಶೇಷವಾಗಿ ಸೇವಂತಿಗೆ, ಕನಕಾಂಬರ, ಗುಲಾಬಿ, ಚೆಂಡು ಹೂವುಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಕಳೆದ ವಾರಕ್ಕೆ ಹೋಲಿಸಿದರೆ ಇವುಗಳ ದರ ಎರಡರಿಂದ ಮೂರು ಪಟ್ಟು ಹೆಚ್ಚಾಗಿದೆ. ಇಂದು ಹಾಗೂ ನಾಳೆ ಇವುಗಳ ದರ ಇನ್ನಷ್ಟು ಹೆಚ್ಚಿರಲಿದೆ.
ನಗರದ ಕೆ.ಆರ್.ಮಾರುಕಟ್ಟೆ, ಯಶವಂತಪುರ, ಬಸವನಗುಡಿ ಮಾರುಕಟ್ಟೆ ಪ್ರದೇಶಗಳು ಗ್ರಾಹಕರಿಂದ ಗಿಜಿಗುಡುತ್ತಿವೆ. ತರಕಾರಿ, ದಿನಸಿ, ಅಲಂಕಾರಿಕ ವಸ್ತುಗಳು ಮತ್ತು ಪೂಜೆಗೆ ಬೇಕಾಗುವ ಬೂದುಗುಂಬಳ, ಬಾಳೆಕಂದು, ಎಲೆ, ತೆಂಗಿನಕಾಯಿ ಖರೀದಿ ಜೋರಾಗಿದೆ. ಅತಿವೃಷ್ಟಿ, ಅನಾವೃಷ್ಟಿ ಕಾರಣಕ್ಕೆ ಕಳೆದ ವರ್ಷದ ಹಬ್ಬಕ್ಕಿಂತ ಈ ಬಾರಿ ಬೆಲೆ ಹೆಚ್ಚಾಗಿದೆ.ಪ್ರತಿ ಕೇಜಿ ಕನಕಾಂಬರ ₹2500, ಮಲ್ಲಿಗೆ ₹800, ಗುಲಾಬಿ ₹500 ರಂತೆ ದುಪ್ಪಟ್ಟು ದರಕ್ಕೆ ಮಾರಾಟವಾಗುತ್ತಿದೆ. ವಿಶೇಷವಾಗಿ ಆಯುಧ ಪೂಜೆಯ ದಿನ ಮನೆ, ವಾಹನ, ಅಂಗಡಿ, ಕಾರ್ಖಾನೆ ಪೂಜೆ ವೇಳೆ ಒಡೆಯುವ ಬೂದುಗುಂಬಳ ಭರ್ಜರಿಯಾಗಿ ಮಾರಾಟವಾಗುತ್ತಿದೆ. ನೆರೆಯ ತಮಿಳುನಾಡು, ಆಂಧ್ರಪ್ರದೇಶದಿಂದ ಬೂದುಗುಂಬಳ ಮಾರುಕಟ್ಟೆಗೆ ಬಂದಿದ್ದು, ಕೇಜಿಗೆ ₹30 - ₹40 ಮತ್ತು ಗಾತ್ರದ ಆಧಾರದ ಮೇಲೆ ಒಂದಕ್ಕೆ ₹100 - ₹250ರಂತೆ ಮಾರಾಟವಾಗುತ್ತಿದೆ. ನಗರದೆಲ್ಲೆಡೆ ತಳ್ಳುಗಾಡಿ, ಫೂಟ್‌ಪಾತ್‌ಗಳಲ್ಲಿ ಇವುಗಳ ವ್ಯಾಪಾರ ಜೋರಾಗಿದೆ.
ಮಳೆ ಕಾರಣದಿಂದಾಗಿ ಒಂದೆರಡು ವಾರಗಳ ಹಿಂದೆ ಹೂವಿನ ದರ ಕುಸಿದಿತ್ತು. ಹಬ್ಬದ ವೇಳೆಗೆ ಮತ್ತೆ ಹೂವಿನ ದರಗಳು ಹೆಚ್ಚಾಗಿದೆ. ಶುಕ್ರವಾರದ ಆಯುಧ ಪೂಜೆ ದಿನ ವಾಹನಗಳು, ಕಚೇರಿ, ಮನೆಯಲ್ಲಿರುವ ವಸ್ತುಗಳನ್ನು ಅಲಂಕರಿಸಿ ಪೂಜೆ ಮಾಡಲಾಗುತ್ತದೆ. ಹೀಗಾಗಿ ಹೆಚ್ಚು ಮಾರಾಟವಾಗುತ್ತಿದೆ ಎಂದು ಕೆ.ಆರ್. ಮಾರುಕಟ್ಟೆಯ ಹೂವಿನ ವ್ಯಾಪಾರಿಗಳು ಹೇಳಿದ್ದಾರೆ. ಇನ್ನು ಹಬ್ಬಕ್ಕೆ ಬೇಕಾದ ಬಾಳೆಕಂದು ₹80, ನಿಂಬೆಹಣ್ಣು ₹10, ವೀಳ್ಯದೆಲೆ 100ಕ್ಕೆ ₹120, ಮಾವಿನೆಲೆ ₹50 ದರವಿದೆ.ಆಯುಧಪೂಜೆ ವಿಜಯದಶಮಿಗಾಗಿ ಕಚೇರಿಗಳಿಗೆ ರಜೆ ಹಿನ್ನೆಲೆಯಲ್ಲಿ ಗುರುವಾರವೇ ಹಲವೆಡೆ ಪೂಜೆ ನೆರವೇರಿಸಲಾಯಿತು. ನಗರದ ಹಲವೆಡೆ ಸಾರ್ವಜನಿಕವಾಗಿ ದುರ್ಗಾಮಾತೆಯನ್ನು ಪ್ರತಿಷ್ಠಾಪಿಸಲಾಗಿದೆ. ಜೊತೆಗೆ ಮನೆಗಳಲ್ಲಿ ಬೊಂಬೆ ಪ್ರದರ್ಶನವೂ ಜೋರಾಗಿದೆ.