ಸಾರಾಂಶ
ಸಕಲೇಶಪುರದ ಮಧ್ಯೆ ಹಾದುಹೋಗಿರುವ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದಾಗಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ವಾಹನ ದಟ್ಟಣೆಯಿಂದಾಗಿ ಜನರು ರೋಸಿ ಹೋಗಿದ್ದರು. ಆದರೆ, ಬೈಪಾಸ್ ರಸ್ತೆ ನಿರ್ಮಾಣವಾಗಿ ಆ ರಸ್ತೆಯಲ್ಲಿ ವಾಹನ ಸಂಚಾರ ಆರಂಭಗೊಂಡಿದ್ದರೂ ಸಂಚಾರ ದಟ್ಟಣೆ ಸಮಸ್ಯೆಗೆ ಮುಕ್ತಿ ಇಲ್ಲದಾಗಿದೆ.
ಶ್ರೀವಿದ್ಯಾ ಸಕಲೇಶಪುರ
ಸಕಲೇಶಪುರ : ಪಟ್ಟಣದ ಮಧ್ಯೆ ಹಾದುಹೋಗಿರುವ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದಾಗಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ವಾಹನ ದಟ್ಟಣೆಯಿಂದಾಗಿ ಜನರು ರೋಸಿ ಹೋಗಿದ್ದರು. ಆದರೆ ಹೆದ್ದಾರಿ ಪಟ್ಟಣದ ಹೊರವಲಯದಲ್ಲಿ ಬೈಪಾಸ್ ನಿರ್ಮಾಣವಾಗುತ್ತಿರುವುದನ್ನು ಕಂಡು ಜನರು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಇದೀಗ ಬೈಪಾಸ್ ರಸ್ತೆ ನಿರ್ಮಾಣವಾಗಿ ಆ ರಸ್ತೆಯಲ್ಲಿ ವಾಹನ ಸಂಚಾರ ಆರಂಭಗೊಂಡಿದ್ದರೂ ಪಟ್ಟಣದ ಸಂಚಾರ ದಟ್ಟಣೆ ಸಮಸ್ಯೆಗೆ ಮುಕ್ತಿ ಇಲ್ಲದಾಗಿದೆ.
ಪಟ್ಟಣದ ಹೃದಯಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಿತ್ಯ 60 ರಿಂದ 80 ಸಾವಿರ ವಾಹನಗಳು ಬೆಂಗಳೂರು-ಮಂಗಳೂರು ನಡುವೆ ಸಂಚರಿಸುತ್ತಿದ್ದರಿಂದ ಪಟ್ಟಣದಲ್ಲಿ ವ್ಯಾಪಕ ವಾಹನ ದಟ್ಟಣೆ ಸೃಷ್ಟಿಯಾಗುತಿತ್ತು. ಆದರೆ ಈ ವಾಹನ ದಟ್ಟಣೆ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಸಂಚಾರ ಆರಂಭಗೊಂಡ ನಂತರ ಟ್ರಾಫಿಕ್ ಸಮಸ್ಯೆಗೆ ಮುಕ್ತಿದೊರೆಯಲಿದೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದ್ದವು. ಆದರೆ, ಅಧಿಕೃತವಾಗಿ ಬೈಪಾಸ್ ರಸ್ತೆ ಸಂಚಾರಕ್ಕೆ ಮುಕ್ತಗೊಳ್ಳದಿದ್ದರೂ ಪಟ್ಟಣದ ಮುಖಾಂತರ ಸಾಗುವ ಶೇ ೭೦ರಷ್ಟು ವಾಹನಗಳು ಸದ್ಯ ಬೈಪಾಸ್ ಮುಖಾಂತರ ಸಂಚರಿಸುತ್ತಿದ್ದು ಬೃಹತ್ ಲಾರಿಗಳಿಂದ ಪಟ್ಟಣದ ಮುಖ್ಯರಸ್ತೆ ಮುಕ್ತಗೊಂಡಿದೆ. ಆದರೂ, ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಎಂಬುದು ನಿತ್ಯನೂತನವಾಗಿದ್ದು ಪಟ್ಟಣದ ಚಂಪಕನಗರ ಟೋಲ್‌ಗೆಟ್‌ನಿಂದ ತೇಜಸ್ವಿ ಚಿತ್ರಮಂದಿರದ ವೃತ್ತದವರಗಿನ ಸುಮಾರು ಎರಡು ಕಿ.ಮೀ. ಸಂಚಾರ ಇಂದಿಗೂ ತ್ರಾಸದಾಯಕವಾಗಿದೆ. ಬೈಪಾಸ್ ರಸ್ತೆ ಸಂಚಾರಕ್ಕೆ ಮಕ್ತಗೊಂಡರು ಟ್ರಾಫಿಕ್ ಸಮಸ್ಯೆಯಿಂದ ಪಟ್ಟಣ ಹೊರಬಾರದಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ.
ಪೋಲಿಸರ ನಿರ್ಲಕ್ಷ್ಯ:
ಬೈಪಾಸ್ ರಸ್ತೆ ಸಂಚಾರಕ್ಕೆ ಮುಕ್ತಗೊಂಡ ನಂತರ ಟ್ರಾಫಿಕ್ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಉತ್ತರ ನೀಡುತ್ತಿದ್ದ ಸಂಚಾರ ಪೊಲೀಸರು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿರಲಿಲ್ಲ. ಸದ್ಯ ಪಟ್ಟಣದಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ಕಡಿಮೆಯಾದರೂ ವಾಹನ ದಟ್ಟಣೆ ಹಾಗೆ ಸಾಗಿದ್ದು ವಾಹನ ದಟ್ಟಣೆ ನಿಯಂತ್ರಣಕ್ಕೆ ಪೋಲಿಸರು ಯಾವುದೇ ಕ್ರಮಕ್ಕೂ ಮುಂದಾಗುತ್ತಿಲ್ಲ.
ಹಿಂದಿನ ಕ್ರಮದ ಅಗತ್ಯವಿದೆ:
2012ಕ್ಕಿಂತ ಮುನ್ನ ಪಟ್ಟಣದಲ್ಲಿದ್ದ ಪೋಲಿಸ್ ಅಧಿಕಾರಿಗಳು ಮುಖ್ಯ ರಸ್ತೆಯ ಎರಡು ಬದಿಯಲ್ಲಿ ವಾರಕ್ಕೆ ಮೂರು ದಿನಗಳ ಕಾಲ ನಿಲುಗಡೆಗೆ ಅವಕಾಶ ನೀಡಿದ್ದರು. ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಪ್ರತ್ಯೇಕ ಸ್ಥಳವನ್ನು ಮೀಸಲಿಟ್ಟಿದ್ದರು. ಅಲ್ಲದೆ ಅಶೋಕ ರಸ್ತೆ ಹಾಗೂ ಅಜಾದ್ ರಸ್ತೆಯಲ್ಲೂ ಇಂತಹ ಕ್ರಮ ಅನುಸರಿದ್ದರಿಂದ ಟ್ರಾಫಿಕ್ ಸಮಸ್ಯೆ ಎಂಬುದು ಪಟ್ಟಣದಲ್ಲಿ ನಗಣ್ಯವಾಗಿತ್ತು. ಆದರೆ, ಇಂದು ಅಧಿಕಾರಿಗಳು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಯಾವುದೇ ಕ್ರಮಕ್ಕೂ ಮುಂದಾಗುತ್ತಿಲ್ಲ. ಇದರಿಂದ ವಾಹನದ ಮಾಲೀಕರು ಎಲ್ಲಿ ಹೇಗೆ ಬೇಕಿದ್ದರೂ ವಾಹನ ನಿಲುಗಡೆಮಾಡಬಹುದಾಗಿದೆ. ಇದು ವಾಹನ ದಟ್ಟಣೆಗೆ ದಾರಿಮಾಡಿಕೊಟ್ಟಿದೆ.
ಟ್ರಾಫಿಕ್ ಪೋಲಿಸ್ ಸ್ಟೇಷನ್‌ಗಾಗಿ ಆಗ್ರಹ
ಪಟ್ಟಣ ಪೋಲಿಸ್ ಠಾಣೆಯಲ್ಲಿ ಸರ್ಕಾರಿ ಮಂಜೂರಾತಿಯಷ್ಟೆ ಹುದ್ದೆಗಳು ಭರ್ತಿಯಾಗಿದ್ದರೂ ಟ್ರಾಫಿಕ್ ನಿವಾರಣೆಗೆ ಪೋಲಿಸ್‌ರ ಕೊರತೆ ಕಾಡುತ್ತಿದೆ. ಪಟ್ಟಣ ಠಾಣೆಗೆ ಆಗಮಿಸಿದ್ದ ಹಿಂದಿನ ಜಿಲ್ಲಾ ಪೋಲಿಸ್ ವರೀಷ್ಠಾಧಿಕಾರಿ ಹರಿರಾಂಶಂಕರ್ ಅವರನ್ನು ಭೇಟಿ ಮಾಡಿದ್ದ ವಿವಿದ ಸಂಘ ಸಂಸ್ಥೆಗಳ ಮುಖಂಡರು ಪಟ್ಟಣಕ್ಕೊಂದು ಟ್ರಾಫಿಕ್ ಪೋಲಿಸ್ ಠಾಣೆ ಮಂಜೂರು ಮಾಡಿಸುವಂತೆ ಮನವಿ ಮಾಡಿದ್ದರು. ಆದರೆ ಅದು ಇನ್ನೂ ಈಡೇರಿಲ್ಲ.
ನಿಯಮ ಪಾಲನೆಯಾಗಬೇಕಿದೆ:
ಮುಖ್ಯರಸ್ತೆಯ ವಾಹನ ದಟ್ಟಣೆಗೆ ಹೆದ್ದಾರಿಯಲ್ಲೆ ನಿಲುಗಡೆಯಾಗುವ ಸಾರಿಗೆ ಬಸ್‌ಗಳು ಹಾಗೂ ಬೇಕಾಬಿಟ್ಟಿ ಸಂಚರಿಸುವ ಆಟೋಗಳು ಪ್ರಮುಖ ಕಾರಣವಾಗಿದ್ದು. ಸಾರಿಗೆ ಬಸ್‌ಗಳನ್ನು ಹೆದ್ದಾರಿಯಲ್ಲೆ ನಿಲುಗಡೆ ಮಾಡುವುದರಿಂದ ಟ್ರಾಫಿಕ್ ಸಮಸ್ಯೆ ಸೃಷ್ಟಿಯಾಗುತ್ತಿದ್ದು ಹಳೇ ಬಸ್ ನಿಲ್ದಾಣ ಸಮೀಪ ಬಸ್ ನಿಲುಗಡೆಗಾಗಿ ನಿಗದಿಪಡಿಸಿರುವ ಸ್ಥಳದಲ್ಲೆ ಬಸ್ ನಿಲುಗಡೆ ಮಾಡುವಂತೆ ಸೂಚನ ಫಲಕ ಹಾಕಿದ್ದರೂ ನಿಯಮ ಪಾಲನೆಯಾಗುತ್ತಿಲ್ಲ.
ಅಧಿಕೃತವಾಗಿ ಬೈಪಾಸ್ ರಸ್ತೆ ಸಂಚಾರಕ್ಕೆ ಮುಕ್ತಗೊಂಡ ನಂತರ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಬರಲಿದೆ. ಅದುವರಗೆ ಟ್ರಾಫಿಕ್ ಸಮಸ್ಯೆ ಬಿಗಡಾಯಿಸದಂತೆ ಅಲ್ಲಲ್ಲಿ ಪೋಲಿಸರನ್ನು ನಿಯೋಜಿಸಲಾಗಿದೆ.
ಪ್ರಮೋದ್ ಕುಮಾರ್ ಜೈನ್.ಡಿವೈಎಸ್‌ಪಿ. ಸಕಲೇಶಪುರ.
ಪಟ್ಟಣದಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಪೋಲಿಸರ ನಿಯೋಜನೆ ಮಾಡಲಾಗುತ್ತಿಲ್ಲ. ಬೇಕಾಬಿಟ್ಟಿ ಬೀದಿಬದಿ ವ್ಯಾಪಾರ, ಮನಬಂದಂತೆ ವಾಹನ ನಿಲುಗಡೆ ಟ್ರಾಫಿಕ್ ಸಮಸ್ಯೆಗೆ ಮುಖ್ಯ ಕಾರಣವಾಗಿದೆ.
ನಾರಾಯಣ ಆಳ್ವ. ಹೋರಾಟಗಾರ. ಸಕಲೇಶಪುರ.