ಜನರ ಹಿತ ಕಾಯುವ ಸರ್ಕಾರಗಳು ರಚನೆಯಾಗದೆ ಇಂದಿಗೂ ಮೂಲ ಸೌಕರ್ಯಗಳಿಲ್ಲ: ಚಲುವರಾಯಸ್ವಾಮಿ ಬೇಸರ

| Published : May 20 2025, 01:14 AM IST

ಜನರ ಹಿತ ಕಾಯುವ ಸರ್ಕಾರಗಳು ರಚನೆಯಾಗದೆ ಇಂದಿಗೂ ಮೂಲ ಸೌಕರ್ಯಗಳಿಲ್ಲ: ಚಲುವರಾಯಸ್ವಾಮಿ ಬೇಸರ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಇಲಾಖೆಯಲ್ಲಿ ನನಗೆ ಬಹಳ ಜವಾಬ್ದಾರಿ ಇದೆ. ಇದು ಬಹಳ ಸೂಕ್ಷ್ಮವಾದ ಇಲಾಖೆ. ರಾಜ್ಯದ 224 ಕ್ಷೇತ್ರಗಳ 31 ಜಿಲ್ಲೆಗಳನ್ನೂ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕಿದೆ. ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಮೂರು ಬಾರಿ ಪ್ರವಾಸ ಮಾಡಿದ್ದೇನೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಜನರ ಹಿತ ಕಾಯುವ ಸರ್ಕಾರಗಳು ರಚನೆಯಾಗದೆ ದೇಶದಲ್ಲಿ ಇನ್ನೂ ಸಹ ಸಮರ್ಪಕ ಕುಡಿಯುವ ನೀರು, ರಸ್ತೆ, ಚರಂಡಿ, ವಸತಿ ಸೇರಿದಂತೆ ಮೂಲ ಸೌಕರ್ಯಗಳಿಲ್ಲದಂತಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಬೆಳ್ಳೂರು ಪಟ್ಟಣದಲ್ಲಿ 40 ಲಕ್ಷ ರು. ವೆಚ್ಚದಲ್ಲಿ ನೂತನ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿ ಮಾತನಾಡಿ, ಚುನಾವಣೆ ವೇಳೆ ಜನರು ತೆಗೆದುಕೊಳ್ಳುವ ತೀರ್ಮಾನಕ್ಕೆ ಸರ್ಕಾರದ ಅಧಿಕಾರಿಗಳೂ ಸೇರಿದಂತೆ ಯಾವೊಬ್ಬ ಜನಪ್ರತಿನಿಧಿಗಳೂ ಹೊಣೆಯಲ್ಲ. ಯಾರನ್ನು ಆಯ್ಕೆ ಮಾಡಿದರೆ ಈ ದೇಶ, ರಾಜ್ಯ, ಜಿಲ್ಲೆ ಮತ್ತು ತಾಲೂಕಿಗೆ ಅನುಕೂಲವಾಗುತ್ತದೆ ಎಂಬುದನ್ನು ಯೋಚಿಸುವ ಶಕ್ತಿ ನಿಮ್ಮ ಕೈಲಿದೆ ಎಂದು ಹೇಳಿದರು.

ನಾನು ಶಾಸಕನಾದ ತಕ್ಷಣ ಎಲ್ಲಾ ಸಮಸ್ಯೆಗಳು ಎದುರಾಗುತ್ತವೆ. ಚುನಾವಣೆಯಲ್ಲಿ ಸೋತಾಗ ಯಾವ ಸಮಸ್ಯೆಯೂ ಜನರಿಗೆ ಕಾಣಿಸುವುದಿಲ್ಲ. ದಿನ ಬೆಳಗಾದರೆ ನನಗೆ ಒತ್ತಡ ಹಾಕುತ್ತೀರಿ. ಒಂದು ಸರ್ಕಾರದಲ್ಲಿ ಒಬ್ಬ ಮಂತ್ರಿ ಎಷ್ಟು ಕೆಲಸ ಮಾಡಬಹುದೆಂಬುದನ್ನು ಯೋಚಿಸಬೇಕು ಎಂದರು.

ಕಳೆದ 2013 ರಿಂದ 2018ರ ವರೆಗಿನ ಅವಧಿಯಲ್ಲಿ ಶೇ.70ರಷ್ಟು ರಸ್ತೆ ಅಭಿವೃದ್ಧಿಪಡಿಸಿದ್ದೇನೆ. ಈಗ ಅವೆಲ್ಲವೂ ಹಾಳಾಗಿವೆ. ಉಳಿದ ಎಲ್ಲಾ ಹಳ್ಳಿಗಳ ರಸ್ತೆಗಳನ್ನೂ ಅಭಿವೃದ್ಧಿಪಡಿಸುತ್ತೇನೆ. ಆದರೆ, ನಮಗೆ ಈಗಲೇ ಎಲ್ಲಾ ಹಳ್ಳಿಗಳಿಗೂ ರಸ್ತೆ ಆಗಬೇಕೆಂದು ಕೇಳ್ತೀರಾ. ನೀವು ಎಷ್ಟು ಬುದ್ದಿವಂತರು?, ಎಷ್ಟು ತಾಳ್ಮೆ ಇದೆ ನಿಮಗೆ?, ನೀವು ನನ್ನನ್ನು ಪರೀಕ್ಷೆ ಮಾಡುತ್ತೀರಾ? ಕ್ಷೇತ್ರದ ಜನರು ಕೇಳಿದರೆ ನನಗೆ ಬೇಸರವಿಲ್ಲ. ನನ್ನೊಂದಿಗಿರುವ ಮುಖಂಡರು, ಬುದ್ದಿವಂತರು ಕೇಳ್ತಿರಲ್ಲಾ. ನನಗೆ ಕೋಪ ಬರುವುದಿಲ್ಲವೇ ಬೇಸರ ವ್ಯಕ್ತಪಡಿಸಿದರು.

ಈ ಸರ್ಕಾರದ ಅವಧಿ ಇನ್ನೂ ಮೂರು ವರ್ಷವಿದೆ. ಮುಂದೆ ನನ್ನನ್ನು ಶಾಸಕನನ್ನಾಗಿ ಮಾಡುತ್ತಾರೋ ಬೇರೆಯವರನ್ನು ಆಯ್ಕೆ ಮಾಡುತ್ತಾರೋ ಜನರಿಗೆ ಬಿಟ್ಟಿದ್ದು. ಇರುವ ಮೂರು ವರ್ಷದ ಅವಧಿಯಲ್ಲಿ ಅನೇಕ ಬದಲಾವಣೆ ತರಬೇಕೆಂದುಕೊಂಡಿದ್ದೇನೆ ಎಂದು ತಿಳಿಸಿದರು.

ಕೃಷಿ ಇಲಾಖೆಯಲ್ಲಿ ನನಗೆ ಬಹಳ ಜವಾಬ್ದಾರಿ ಇದೆ. ಇದು ಬಹಳ ಸೂಕ್ಷ್ಮವಾದ ಇಲಾಖೆ. ರಾಜ್ಯದ 224 ಕ್ಷೇತ್ರಗಳ 31 ಜಿಲ್ಲೆಗಳನ್ನೂ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕಿದೆ. ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಮೂರು ಬಾರಿ ಪ್ರವಾಸ ಮಾಡಿದ್ದೇನೆ ಎಂದು ಹೇಳಿದರು.

ಬೆಳ್ಳೂರು ಪಪಂ ವ್ಯಾಪ್ತಿ ಸಮಗ್ರ ಅಭಿವೃದ್ಧಿಗಾಗಿ 5 ಕೋಟಿ ರು. ಹಣ ಮಂಜೂರಾಗಿದೆ. ಹೆಚ್ಚುವರಿಯಾಗಿ ಇನ್ನೂ 10 ಕೋಟಿ ರು. ವಿಶೇಷ ಅನುದಾನ ಮಂಜೂರು ಮಾಡಿಸುತ್ತೇನೆ. 70 ಕೋಟಿ ರು. ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಆಗಬೇಕಿದೆ. ಈ ವರ್ಷದ ಅನುದಾನದಲ್ಲಿ ಕಾಮಗಾರಿ ಆರಂಭಿಸಲು ಪ್ರಯತ್ನಿಸುತ್ತೇನೆ ಎಂದರು.

ಇಡೀ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಹೋಬಳಿ ಮಟ್ಟದಲ್ಲಿ 40 ಲಕ್ಷ ರು. ವೆಚ್ಚದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಿಸಲಾಗಿದೆ. ಒಬ್ಬ ವ್ಯಕ್ತಿಯ ಒಂದು ದಿನದ ಊಟಕ್ಕೆ 67 ರು. ಟೆಂಡರ್ ಆಗಿದೆ. ಈ ಕ್ಯಾಂಟಿನ್‌ನಲ್ಲಿ ಒಬ್ಬ ವ್ಯಕ್ತಿ ಕೇವಲ 25 ರು. ಕೊಟ್ಟು ಬೆಳಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟ ಮಾಡಬಹುದು. ಇನ್ನುಳಿದ 42 ರು.ಗಳನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಬೆಳ್ಳೂರು ಪಪಂ ಅಧ್ಯಕ್ಷೆ ಲಕ್ಷ್ಮಮ್ಮ ಮಾತನಾಡಿದರು. ಉಪಾಧ್ಯಕ್ಷ ಮಹಮ್ಮದ್ ಯಾಸೀನ್, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ನಿತಿನ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ.ಮಾಯಣ್ಣಗೌಡ, ತಹಸೀಲ್ದಾರ್ ಜಿ.ಆದರ್ಶ, ಪಪಂ ಮುಖ್ಯಾಧಿಕಾರಿ ಲಕ್ಷ್ಮಣಕುಮಾರ್, ಸಚಿವರ ಪುತ್ರ ಸಚಿನ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮೂಡ್ಲೀಗೌಡ, ಮುಖಂಡರಾದ ಸುನಿಲ್ ಲಕ್ಷ್ಮೀಕಾಂತ್, ಎಚ್.ಟಿ.ಕೃಷ್ಣೇಗೌಡ, ಪದ್ಮನಾಭ(ಪಾಪಣ್ಣ), ಶಿವಣ್ಣ, ವೆಂಕಟೇಶ್, ಸಾವಿತ್ರಮ್ಮ ಸೇರಿದಂತೆ ಪಪಂ ಸದಸ್ಯರು ಮತ್ತು ನೂರಾರು ಮಂದಿ ಸಾರ್ವಜನಿಕರು ಇದ್ದರು.