ಮಣಿಪಾಲ: ದಂತ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಂಜೆ ದಂತ ಕ್ಲಿನಿಕ್ ಆರಂಭ

| Published : Aug 09 2024, 12:52 AM IST

ಸಾರಾಂಶ

ಮಣಿಪಾಲ ದಂತ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಣಿಪಾಲ ಪ್ರೀಮಿಯರ್‌ ಸಂಜೆ ಕ್ಲಿನಿಕ್‌ನ್ನು ಮಾಹೆ ಉಪಕುಲಪತಿ ಲೆಫ್ಟಿನೆಂಟ್‌ ಜನರಲ್‌ ಎಂ. ಡಿ. ವೆಂಕಟೇಶ್‌ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ಇಲ್ಲಿನ ಮಣಿಪಾಲದ ದಂತ ವಿಜ್ಞಾನ ಮಹಾವಿದ್ಯಾಲಯದಲ್ಲಿ ‘ಮಣಿಪಾಲ ಪ್ರೀಮಿಯಂ ಸಂಜೆ ಕ್ಲಿನಿಕ್‌’ನ್ನು ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ. ಡಿ. ವೆಂಕಟೇಶ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಇದು ಸ್ಥಳೀಯ ಸಮುದಾಯಕ್ಕೆ ಗುಣಮಟ್ಟದ ದಂತ ಆರೈಕೆಯಲ್ಲಿ ಗಮನಾರ್ಹ ಕೊಡುಗೆಯಾಗಿದೆ. ನಿಯಮಿತ ಕೆಲಸದ ಸಮಯ ಹೊರತುಪಡಿಸಿ ಆಸ್ಪತ್ರೆಗೆ ಭೇಟಿ ನೀಡುವ ವೃತ್ತಿಪರರಿಗೆ, ವಿದ್ಯಾರ್ಥಿಗಳು ಮತ್ತು ಇತರರಿಗೆ ಇದರಿಂದ ಅನೂಕೂಲವಾಗಲಿದೆ ಎಂದರು.

ಮಾಹೆಯ ಸಹಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್ ಕುಮಾರ್ ರಾವ್ ಅವರು, ಮಾತನಾಡಿ, ಈ ಸಂಜೆ ಡೆಂಟಲ್ ಕ್ಲಿನಿಕ್‌ಗಳು ಎಲ್ಲಾ ಕೆಲಸದ ದಿನಗಳಲ್ಲಿ ಸಂಜೆ 5ರಿಂದ ರಾತ್ರಿ 8ರ ವರೆಗೆ ಕಾರ್ಯನಿರ್ವಹಿಸಲಿದ್ದು, ಇದರಲ್ಲಿ ಬಾಯಿಯ ಆರೋಗ್ಯ ತಪಾಸಣೆ ಮತ್ತು ಆರೈಕೆ, ಮಕ್ಕಳ ದಂತ ಚಿಕಿತ್ಸೆ, ರೂಟ್ ಕೆನಾಲ್ ಚಿಕಿತ್ಸೆ ಮತ್ತು ಫಿಲ್ಲಿಂಗ್, ಹಲ್ಲು ಕೀಳುವುದು ಮತ್ತು ಹಲ್ಲಿನ ಶಸ್ತ್ರ ಚಿಕಿತ್ಸೆ, ಬದಲಿ ಹಲ್ಲು ಜೋಡಣೆ ಹಾಗೂ ಇಂಪ್ಲಾಂಟಾಲಜಿ ಚಿಕಿತ್ಸೆ, ವಕ್ರದಂತ ಚಿಕಿತ್ಸೆ, ಸೌಂದರ್ಯ ದಂತ ವೈದ್ಯ ಕಾರ್ಯವಿಧಾನ ಸೇರಿದಂತೆ ಎಲ್ಲ ರೀತಿಯ ದಂತ ಚಿಕಿತ್ಸೆ ಮತ್ತು ಕಾರ್ಯವಿಧಾನಗಳನ್ನು ಮಾಡಲಾಗುವುದು ಎಂದರು.

ಮಣಿಪಾಲ ದಂತ ವಿಜ್ಞಾನ ಮಹಾ ವಿದ್ಯಾಲಯದ ಡೀನ್ ಡಾ. ಮೋನಿಕಾ ಸಿ. ಸೊಲೊಮನ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಜೆ ಚಿಕಿತ್ಸಾಲಯದ ಕುರಿತು ಕಿರುನೋಟ ನೀಡಿದರು. ಈ ಸಂದರ್ಭ ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಸಿಓಓ ಡಾ. ಆನಂದ್ ವೇಣುಗೋಪಾಲ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಹಿರಿಯ ದಂತ ವೈದ್ಯರು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಈ ನೂತನ ಸುಸಜ್ಜಿತ ಸಂಜೆ ಕ್ಲಿನಿಕ್ ನ ಸೇವೆಗಾಗಿ, ಹೆಚ್ಚಿನ ಮಾಹಿತಿ ಮತ್ತು ಭೇಟಿ ಕಾದಿರಿಸಲು 6364234893 ಗೆ ಕರೆ ಮಾಡಬಹುದು ಎಂದು ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.