ಸಾರಾಂಶ
ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿಲ್ಲ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ ಶಿಕ್ಷಣ ವ್ಯಕ್ತಿತ್ವ ವಿಕಸನಕ್ಕಾಗಿ ಹೊರತು ವ್ಯಾಪಾರಕ್ಕೆ ಅಲ್ಲ. ನಾವು ಉದ್ಯೋಗದಾತರಾಗಬೇಕು ಉದ್ಯೋಗದಾಸರಾಗಬಾರದು. ಭಾರತವು ಆರ್ಥಿಕತೆಯಲ್ಲಿ 5ನೇ ಬಲಿಷ್ಠ ರಾಷ್ಟ್ರವಾಗಿದ್ದರೂ, ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿಲ್ಲ ಎಂದು ರಾಷ್ಟ್ರೋತ್ಥಾನ ಪರಿಷತ್ ಸಂಪನ್ಮೂಲ ವ್ಯಕ್ತಿ ಶ್ರೀನಿವಾಸ ಪಾಟೀಲ ಹೇಳಿದರು.
ನಗರದ ಬಿ.ವಿ.ವಿ. ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಪರಿಚಯ ಹಾಗೂ ಸಂಕಲ್ಪನಾ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯುವಜನಾಂಗ 2047ರ ಹೊತ್ತಿಗೆ ಪ್ರಬುದ್ಧ ಭಾರತವನ್ನು ಕಟ್ಟಬೇಕಿದೆ. ಭಾರತ ಸ್ವಾಂತಂತ್ರ್ಯವಾಗಿ ಶತಮಾನ ಸಮೀಪಿಸುತ್ತಿದ್ದರೂ ಎಲ್ಲ ಕ್ಷೇತ್ರಗಳಲ್ಲಿಯೂ ಬ್ರಿಟಿಷರ ಪದ್ದತಿಗಳನ್ನು ಅನುಸರಿಸುತ್ತಿರುವುದು ಬೇಸರದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು. ಜಗತ್ತಿಗೆ ನಾಗರಿಕತೆ ಬೋಧಿಸಿದ ಭಾರತದಲ್ಲಿ ನಿರುದ್ಯೋಗ ತಾಂಡವಾಡುತ್ತಿರುವುದಕ್ಕೆ ಕಾರಣಗಳನ್ನು ಅರಿಯುವ ಸಮಯ ಬಂದಿದೆ. ಕೃಷಿ ಚಟುವಟಿಕೆ ಉದ್ಯೋಗಗಳ ಮೂಲವಾಗಿದ್ದರೂ ಯುವ ಶಕ್ತಿ ಅದನ್ನು ಕಡೆಗಣಿಸುತ್ತಿರುವುದು ಬೇಸರದ ಸಂಗತಿ. ಯುವ ಸಮುದಾಯಕ್ಕೆ ಸೂಕ್ತ ಮತ್ತು ಸಮಯೋಜಿತ ಮಾರ್ಗದರ್ಶನದ ಅವಶ್ಯಕತೆ ಇದೆ. ಶೈಕ್ಷಣಿಕವಾಗಿ, ಬೌದ್ಧಿಕವಾಗಿ ಜಾಗೃತಗೊಳಿಸಬೇಕು, ಇದು ನಮ್ಮ ದೇಶಿ ಶಿಕ್ಷಣ ಪದ್ಧತಿಯಿಂದ ಮಾತ್ರ ಸಾಧ್ಯ ಎಂದರು.ಪ್ರಾಚಾರ್ಯ ಎಸ್. ಆರ್. ಮೂಗನೂರಮಠ ಮಾತನಾಡಿ, ಪ್ರತಿ ಮಹಾವಿದ್ಯಾಲಯದ ಮೆದುಳು ಗ್ರಂಥಾಲಯ. ಇದರ ಲಾಭವನ್ನು ವಿದ್ಯಾರ್ಥಿಗಳು ಪಡೆಯಬೇಕು. ಅಂಕಪಟ್ಟಿಯ ಜೊತೆಗೆ ವಿಧ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವದ ವಿಕಸವನ್ನು ತೋರಿಸಬೇಕು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ಡಾ.ಎ.ಯು.ರಾಠೋಡ, ಸಾಂಸ್ಕೃತಿಕ ಚಟುವಟಿಕೆ ಸಮೀತಿ ಸಂಯೋಜಕ ಕೆ.ವಿ ಮಠ, ದೈಹಿಕ ನಿರ್ದೇಶಕ ಎಂ.ಎಂ.ದೇವನಾಳ ಸೇರಿದಂತೆ ಎಲ್ಲ ವಿಭಾಗದ ಪ್ರಾದ್ಯಾಪಕರು ಮತ್ತು ವಿದ್ಯಾರ್ಥಿಗಳು ಇದ್ದರು.