ಸಾರಾಂಶ
ಸದೃಢ ಯುವ ಸಮುದಾಯದಿಂದ ಮಾತ್ರ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ದೇಶದ ಪ್ರತಿ ಮಗುವೂ ಕೂಡ ಆರೋಗ್ಯಭರಿತವಾಗಿ ಸದೃಢ ನಾಗರಿಕರಾಗಬೇಕಿದೆ. ಪೋಲಿಯೋದಂತಹ ಮಾರಕ ಕಾಯಿಲೆಗಳಿಂದ ಮಕ್ಕಳ ರಕ್ಷಿಸಿಕೊಳ್ಳಲು 5 ವರ್ಷದವರೆಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಕಡ್ಡಾಯ ಹಾಕಿಸಬೇಕು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಭಾರತ ಪೋಲಿಯೋ ಮುಕ್ತವಾಗಿದ್ದರೂ ಅಕ್ಕಪಕ್ಕದ ಹಲವು ದೇಶಗಳಲ್ಲಿ ಪೋಲಿಯೋ ಸೋಂಕು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ 5 ವರ್ಷದವರೆಗಿನ ಮಕ್ಕಳಿಗೆ ಭಾನುವಾರ ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎಲ್ಲಾ ತಾಯಂದಿರು ಮಗುವಿಗೆ ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಲಸಿಕೆ ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸದೃಢ ಯುವ ಸಮುದಾಯದಿಂದ ಮಾತ್ರ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ದೇಶದ ಪ್ರತಿ ಮಗುವೂ ಕೂಡ ಆರೋಗ್ಯಭರಿತವಾಗಿ ಸದೃಢ ನಾಗರಿಕರಾಗಬೇಕಿದೆ. ಪೋಲಿಯೋದಂತಹ ಮಾರಕ ಕಾಯಿಲೆಗಳಿಂದ ಮಕ್ಕಳ ರಕ್ಷಿಸಿಕೊಳ್ಳಲು 5 ವರ್ಷದವರೆಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಕಡ್ಡಾಯ ಹಾಕಿಸಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಕೆಂಚಪ್ಪ ಆರ್.ಬಂತಿ ಮಾತನಾಡಿ, ತಾಲೂಕಿನಲ್ಲಿ 16,100 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಒಟ್ಟು 181 ಲಸಿಕಾ ಕೇಂದ್ರಗಳ ತೆರೆದಿದ್ದು, 338 ಸಿಬ್ಬಂದಿಗಳ ನಿಯೋಜಿಸಿ 33 ಮಂದಿ ಮೇಲ್ವಿಚಾರಕರ ನಿಯೋಜನೆಗೊಳಿಸಿದೆ ಎಂದು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.ಉಪವಿಭಾಗಾಧಿಕಾರಿ ಅಭಿಷೇಕ್ , ಡಾ.ಅಬ್ದುಲ್ ಖಾದರ್ ಡಾ.ಲೀಲಾವತಿ, ತಾಲೂಕು ಆರೋಗ್ಯ ಶಿಕ್ಷಕರಾದ ಗೀತಾ, ಶುಶ್ರೂಷಕ ಅಧಿಕಾರಿ ನಾಗರತ್ನಮ್ಮ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.
----------