ಸಾರಾಂಶ
ಕೊಪ್ಪಳ: ಪ್ರತಿಯೊಂದು ಮಗುವೂ ವಿಭಿನ್ನವಾಗಿ ಕಲಿಕೆಯಲ್ಲಿ ತೊಡಗಿಸಿಕೊಂಡು ಕಲಿಯುತ್ತದೆ. ಆ ಕಲಿಕೆಗೆ ನಾವು ಅವಕಾಶ ಒದಗಿಸಿಕೊಡಬೇಕು ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಪಿ. ಸಿರಸಗಿ ಅಭಿಪ್ರಾಯಪಟ್ಟರು.ತಾಲೂಕು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ‘ತರಂಗಿಣಿ’ ಶಾಲಾ ಪೂರ್ವ ಶೈಕ್ಷಣಿಕ ಪ್ರಕ್ರಿಯೆ ಆಧರಿತ ಅಂಗನವಾಡಿ ಶಿಕ್ಷಕಿಯರ ಮೇಳ ಉದ್ಘಾಟಿಸಿ ಮಾತಾಡುತ್ತಿದ್ದರು.
ಮುಂದುವರಿದು ಮಾತಾಡಿದ ಅವರು, ಬುನಾದಿ ಹಂತದ ಕಲಿಕೆಯಲ್ಲಿ ನಾವು ಏನೆಲ್ಲ ಕಲಿಸುತ್ತೇವೆಯೋ ಆ ಎಲ್ಲ ಜ್ಞಾನ ಮಗುವಿನ ಬೆಳವಣಿಗೆ ಮತ್ತು ತನ್ನ ಜೀವಿತಾವಧಿವರೆಗೆ ಕೆಲಸ ಮಾಡುತ್ತದೆ. ಈ ಹಂತದಲ್ಲಿ ಮಕ್ಕಳಿಗೆ ಮಾತೃ ಹೃದಯದಿಂದ ಕಲಿಸಬೇಕು ಎಂದರು.
ಎಲ್ಲ ಮಕ್ಕಳನ್ನು ಗೌರವದಿಂದ ಕಾಣಬೇಕು. ಯಾವುದೇ ಮಗುವಿಗೂ ತಾರತಮ್ಯ ಮಾಡಬಾರದು ಎಂದು ಅಭಿಪ್ರಾಯಪಟ್ಟರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ, ಕೊಪ್ಪಳ ಹಾಗೂ ಅಜೀಮ್ ಪ್ರೇಮ್‌ಜಿ ಫೌಂಡೇಷನ್, ಜಿಲ್ಲಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ತಾಲೂಕಿನ ಅಂಗನವಾಡಿ ಶಿಕ್ಷಕಿಯರಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿದ ಕೊಪ್ಪಳ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರೀ ಮಾತಾಡಿ, ನಮ್ಮ ಅಂಗನವಾಡಿ ಕೇಂದ್ರಗಳು ಮಕ್ಕಳನ್ನು ಆಕರ್ಷಿಸುವ ಮತ್ತು ಮಕ್ಕಳ ಬೆಳವಣಿಗೆಗೆ ಪೂರಕವಾದ ಆಕರ್ಷಣೀಯ ಕೇಂದ್ರಗಳಾಗಬೇಕು.
ಇದಕ್ಕಾಗಿ ಯಾವುದೇ ಮೂಲದಿಂದ ಮಾಹಿತಿ, ಸಂಪನ್ಮೂಲಗಳು ಲಭ್ಯವಾದರೂ ಅದನ್ನು ಸ್ವೀಕರಿಸಲು ನಾವು ಸಿದ್ಧರಾಗಬೇಕು ಎಂದು ಹೇಳಿದರು.ಅಜೀಮ್ ಪ್ರೇಮ್‌ಜಿ ಫೌಂಡೇಷನ್ ಜಿಲ್ಲಾ ಸಂಯೋಜಕ ಚಿಕ್ಕವೀರೇಶ ಪ್ರಾಸ್ತಾವಿಕವಾಗಿ ಮಾತಾಡಿದರು. ಕೊಪ್ಪಳದ ಅಜೀಂ ಪ್ರೇಮ್‌ಜಿ ಫೌಂಡೇಶನ್ ತಂಡದ ಸದಸ್ಯರು ಭಾಗವಹಿಸಿದ್ದರು.