ಪ್ರತಿಯೊಬ್ಬ ಮನುಷ್ಯನ ಹುಟ್ಟಿಗೂ ಒಂದು ಉದ್ದೇಶವಿರುತ್ತದೆ: ಡಾ.ನಿರ್ಮಲಾನಂದನಾಥ ಸ್ವಾಮೀಜಿ

| Published : Nov 10 2024, 01:45 AM IST

ಪ್ರತಿಯೊಬ್ಬ ಮನುಷ್ಯನ ಹುಟ್ಟಿಗೂ ಒಂದು ಉದ್ದೇಶವಿರುತ್ತದೆ: ಡಾ.ನಿರ್ಮಲಾನಂದನಾಥ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಮಠಮಾನ್ಯಗಳು ಆಧ್ಯಾತ್ಮದ ಜತೆಗೆ ಶೈಕ್ಷಣಿಕ ಕ್ಷೇತ್ರಕ್ಕೂ ಕೊಡುಗೆ ನೀಡಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಶಿಕ್ಷಣ ಕ್ಷೇತ್ರ ಬಲವರ್ಧನೆಗೊಳ್ಳಲು ಸಾಧ್ಯವಾಗಿದೆ. ನಾಡಿನಲ್ಲಿ ಸಾಕ್ಷರತೆ ಪ್ರಗತಿಗೆ ಮೈಸೂರು ಸಂಸ್ಥಾನದ ಮಹರಾಜ ಕೊಡುಗೆ ಅಪಾರವಿದೆ. ಕೇವಲ ಶೇ.5ರಷ್ಟು ಇದ್ದಂತಹ ಸಾಕ್ಷರತೆ ಪ್ರಮಾಣವನ್ನು ದೊಡ್ಡ ಮಟ್ಟದಲ್ಲಿ ಬೆಳೆದಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಸಲ್ಲುತ್ತದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪ್ರತಿಯೊಬ್ಬ ಮನುಷ್ಯನ ಹುಟ್ಟಿಗೂ ಒಂದು ಉದ್ದೇಶವಿರುತ್ತದೆ. ಆ ಉದ್ದೇಶವನ್ನು ಅರ್ಥೈಸಿಕೊಳ್ಳದೆ ಹೋದರೆ ಬದುಕಿನ ಮೌಲ್ಯ ಕಳೆದು ಹೋಗುತ್ತೇವೆ ಎಂದು ಶ್ರೀಕ್ಷೇತ್ರ ಆದಿಚುಂಚನಗಿರಿಯ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಚಿನಕುರಳಿಯ ಎಸ್‌ಟಿಜಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ವಸತಿ ನಿಲಯ ಉದ್ಘಾಟನೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಪೋಷಕರ ದುಡಿಮೆಯಿಂದ ಓದುತ್ತಿರುವ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಬದುಕು ಕಟ್ಟಿಕೊಳ್ಳಬೇಕು ಎಂದರು.

ಓದುವ ದಿನಗಳಲ್ಲಿ ವಿದ್ಯಾರ್ಥಿ ಮನಸ್ಸು ಚಂಚಲವಾಗುತ್ತದೆ. ಅಂತಹ ಸಂದರ್ಭದಲ್ಲಿ ಯಾವುದೇ ತಪ್ಪುದಾರಿಗಳು, ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳದೆ ಒಳ್ಳೆಯ ಮಾರ್ಗದಲ್ಲಿಯೇ ಸಾಗಬೇಕು ಎಂದರು.

ಮಠಮಾನ್ಯಗಳು ಆಧ್ಯಾತ್ಮದ ಜತೆಗೆ ಶೈಕ್ಷಣಿಕ ಕ್ಷೇತ್ರಕ್ಕೂ ಕೊಡುಗೆ ನೀಡಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಶಿಕ್ಷಣ ಕ್ಷೇತ್ರ ಬಲವರ್ಧನೆಗೊಳ್ಳಲು ಸಾಧ್ಯವಾಗಿದೆ. ನಾಡಿನಲ್ಲಿ ಸಾಕ್ಷರತೆ ಪ್ರಗತಿಗೆ ಮೈಸೂರು ಸಂಸ್ಥಾನದ ಮಹರಾಜ ಕೊಡುಗೆ ಅಪಾರವಿದೆ. ಕೇವಲ ಶೇ.5ರಷ್ಟು ಇದ್ದಂತಹ ಸಾಕ್ಷರತೆ ಪ್ರಮಾಣವನ್ನು ದೊಡ್ಡ ಮಟ್ಟದಲ್ಲಿ ಬೆಳೆದಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಸಲ್ಲುತ್ತದೆ. ಜತೆಗೆ ಸುತ್ತೂರು, ಸಿದ್ದಗಂಗೆ ಹಾಗೂ ಆದಿಚುಂಚನಗಿರಿ ಕ್ಷೇತ್ರ ಸೇರಿದಂತೆ ನಾಡಿದ ಹಲವು ಮಠಮಾನ್ಯಗಳು ಶಿಕ್ಷಣ ಕ್ಷೇತ್ರದ ಪ್ರಗತಿಗೆ ಅಪಾರವಾದ ಕೊಡುಗೆ ನೀಡಿವೆ ಎಂದರು.ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಮಠಗಳೊಂದಿಗೆ ಉತ್ತಮ ಸಂಬಂಧ, ಬಾಂಧವ್ಯ ಹೊಂದಿರುವುದರಿಂದ ರಾಜಕೀಯ ಕ್ಷೇತ್ರದ ಜನತೆ ಸಾಮಾಜಿಕ ಕ್ಷೇತ್ರದಲ್ಲೂ ತೊಡಗಿಸಿಕೊಂಡು ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಎಸ್‌ಟಿಜಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗಿದ್ದಾರೆ. ಸಿ.ಎಸ್.ಪುಟ್ಟರಾಜು ಅವರಿಗೆ ಸದಾ ಮಠಮಾನ್ಯಗಳ ಆಶೀರ್ವಾದ ಇರುತ್ತದೆ ಎಂದರು.

ವಿಶ್ವದರ್ಜೆ ಮಟ್ಟದ ವಿಶ್ವ ವಿದ್ಯಾನಿಲಯಗಳೊಂದಿಗೆ ಸ್ಪರ್ಧೆ ಮಾಡಬೇಕಾದರೆ ಮಕ್ಕಳಿಗೆ ತಳಮಟ್ಟದಲ್ಲಿ ಗುಣಮಟ್ಟದ ಶಿಕ್ಷಣ ಅತ್ಯಗತ್ಯವಾಗಿದೆ. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ರೋಬೋಟ್‌ಗಳೊಂದಿಗೆ ಪೈಪೋಟಿಗೆ ಇಳಿಯಬೇಕಾಗಿದೆ. ಹಾಗಾಗಿ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಅಗತ್ಯವಾಗಿದ್ದು, ಆ ನಿಟ್ಟಿನಿಲ್ಲಿ ಎಸ್‌ಟಿಜಿ ಶಿಕ್ಷಣ ಸಂಸ್ಥೆ ಮುನ್ನುಗ್ಗುತ್ತಿದೆ ಎಂದರು.

ಸುತ್ತೂರು ಕ್ಷೇತ್ರದ ಶ್ರೀಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂಬ ಉದ್ದೇಶದಿಂದ ಗ್ರಾಮೀಣ ಪ್ರದೇಶದಿಂದ ದೊಡ್ಡ ಸಂಖ್ಯೆಯಲ್ಲಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಅಂತಹ ಸನ್ನಿವೇಶವನ್ನು ಅರ್ಥೈಸಿಕೊಂಡಿರುವ ಸಿ.ಎಸ್.ಪುಟ್ಟರಾಜು ಉತ್ತಮ ಶಿಕ್ಷಣ ಸಂಸ್ಥೆ ಆರಂಭಿಸಿಗ್ರಾಮೀಣ ಸೊಡಗಿನ ಜತೆಗೆ ನಗರ ಪ್ರದೇಶದ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಇಲ್ಲದ ಸೌಲಭ್ಯಗಳನ್ನು ತಮ್ಮ ಸಂಸ್ಥೆಯಲ್ಲಿ ಒದಗಿಸಿಕೊಟ್ಟಿದ್ದಾರೆ ಎಂದು ಬಣ್ಣಿಸಿದರು.

ಮಕ್ಕಳಿಗೆ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಎಸ್‌ಟಿಜಿ ಸಂಸ್ಥೆಯೂ ಅಮೆರಿಕಾದ ಸಾಗಿನಾವ ವಿಶ್ವ ವಿದ್ಯಾನಿಲಯದೊಂದಿಗೆ ವಿದ್ಯಾರ್ಥಿ ವಿನಿಮಯ ಒಪ್ಪಂದ ಮಾಡಿಕೊಂಡು ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ವಿದ್ಯಾರ್ಥಿಗಳು ಧಾರ್ಮಿಕ, ನೈತಿಕವಾಗಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು, ಗುರು-ಹಿರಿಯರು, ಪೋಷಕರನ್ನು ಗೌರವದಿಂದ ಕಾಣುವ ಸದ್ಬುಣಗಳನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಮೈಸೂರು ಮಹರಾಜ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2047ಕ್ಕೆ ವಿಕಸಿತ ಭಾರತ ಸಮಗ್ರ ಅಭಿವೃದ್ಧಿ ಕನಸ್ಸು ಹೊತ್ತಿದ್ದಾರೆ. ಭಾರತ ಬಲಿಷ್ಠವಾಗಿ ಪ್ರಗತಿ ಸಾಧಿಸಬೇಕಾದರೆ, ಯುವ ಸಮುದಾಯ ಬಹಳ ಮುಖ್ಯವಾಗಿದೆ. ಯುವ ಸಮುದಾಯಕ್ಕೆ ಅಂತಾರಾಷ್ಟ್ರ ಸ್ಪರ್ಶದ ಗುಣಮಟ್ಟದ ಶಿಕ್ಷಣ ನೀಡಬೇಕಾಗಿದ್ದು ಇಂತಹ ಶಿಕ್ಷಣ ಸಂಸ್ಥೆಗಳು ಅಂತಹ ಕೆಲಸ ಮಾಡಬೇಕು. ಎಸ್‌ಟಿಜಿ ಶಿಕ್ಷಣ ಸಂಸ್ಥೆಯೂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಾಕಷ್ಟು ನೆರವಾಗುತ್ತಿದೆ ಎಂದರು.

ಇದೇ ವೇಳೆ ನೀಟಿ ಪರೀಕ್ಷೆಯಲ್ಲಿ 672 ಅಂಕಗಳಿಸಿ ಉಚಿತ ವೈದ್ಯಕೀಯ ಸೀಟು ಪಡೆದ ಎಸ್‌ಟಿಜಿ ಕಾಲೇಜಿನ ವಿದ್ಯಾರ್ಥಿ ಮಹದೇಶ್ವರಪುರ ಗ್ರಾಮದ ತೇಜಸ್‌ಗೌಡ ಅವರಿಗೆ ಮುಂದಿನ ಐದು ವೈದ್ಯಕೀಯ ಶಿಕ್ಷಣಕ್ಕೆ ತಗಲುವ ಸರ್ಕಾರಿ ಪ್ರವೇಶಾತಿ ಶುಲ್ಕದ ಹಣದ ಡಿಡಿ ಚೆಕ್‌ನ್ನು ಸಂಸ್ಥೆ ಅಧ್ಯಕ್ಷ ಸಿ.ಎಸ್.ಪುಟ್ಟರಾಜು, ಸಿಇಒ ಸಿ.ಪಿ.ಶಿವರಾಜು ವಿತರಣೆ ಮಾಡಿದರು.

ಸಮಾರಂಭದಲ್ಲಿ ಮಾಜಿ ಸಚಿವ, ಸಂಸ್ಥೆ ಅಧ್ಯಕ್ಷ ಸಿ.ಎಸ್.ಪುಟ್ಟರಾಜು, ಪತ್ನಿ ನಾಗಮ್ಮ, ಉದ್ಯಮಿಗಳಾದ ಬೆನ್‌ ಚಿಕ್ಕಸ್ವಾಮಿ, ಹರ್ಷ ಸಿದ್ದವೀರೇಗೌಡ, ಬಸವರಾಜು, ಸಿಇಒ ಸಿ.ಪಿ.ಶಿವರಾಜು, ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಡೇರಿ ಅಧ್ಯಕ್ಷ ಸಿ.ಶಿವಕುಮಾರ್, ಸಿ.ಹರೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.