ಶೃಂಗೇರಿ, ಪ್ರಕೃತಿಯಲ್ಲಿ ಕೇವಲ ಮನುಷ್ಯ ಮಾತ್ರ ಜೀವಿಸುವುದಲ್ಲ. ಜಲಚರಗಳು,ಪ್ರಾಣಿ ಪಕ್ಷಿಗಳು ಸೇರಿದಂತೆ ಸಕಲ ಜೀವರಾಶಿ ಗಳಿಗೂ ಬದುಕುವ ಹಕ್ಕಿದೆ. ಅದನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದು ತಾಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಹಾಗೂ ಶೃಂಗೇರಿ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ಜೀತು ಹೇಳಿದರು.

ಜೆಸಿಬಿಎಂ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಪ್ರಕೃತಿಯಲ್ಲಿ ಕೇವಲ ಮನುಷ್ಯ ಮಾತ್ರ ಜೀವಿಸುವುದಲ್ಲ. ಜಲಚರಗಳು,ಪ್ರಾಣಿ ಪಕ್ಷಿಗಳು ಸೇರಿದಂತೆ ಸಕಲ ಜೀವರಾಶಿ ಗಳಿಗೂ ಬದುಕುವ ಹಕ್ಕಿದೆ. ಅದನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದು ತಾಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಹಾಗೂ ಶೃಂಗೇರಿ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ಜೀತು ಹೇಳಿದರು.

ಪಟ್ಚಣದ ಜೆಸಿಬಿಎಂ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಪ್ರಾಣಿ ಪಕ್ಷಿಗಳು, ಜಲಚರಗಳು ಬದುಕಲು ಅಗತ್ಯವಿರುವಷ್ಟು ಆಹಾರ ಮಾತ್ರ ಉಪಯೋಗಿಸಿಕೊಳ್ಳುತ್ತದೆ. ಆದರೆ ಮನುಷ್ಯ ಮಾತ್ರ ಸ್ವಾರ್ಥ, ದುರಾಸೆಯಿಂದ ಎಲ್ಲವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಇಡೀ ಪ್ರಕೃತಿ ಮೇಲೆ ಪರಿಣಾಮ ಬೀರುತ್ತಾನೆ. ಪ್ರಕೃತಿ ರಕ್ಷಣೆಯನ್ನು ಮರೆಯುತ್ತಾನೆ ಎಂದರು.

ನಾವು ಬದುಕುವ ಜೊತೆಗೆ ಪ್ರಕೃತಿಯಲ್ಲಿ ಇತರೆ ಜೀವಿಗಳು ಬದುಕಲು ಅವಕಾಶ ಮಾಡಿಕೊಡಬೇಕು. ಪ್ರಕೃತಿ ಜೊತೆ ಬದುಕಬೇಕು. ಯಾವಾಗಲೂ ಪ್ರಕೃತಿ ವಿರುದ್ಧ ಹೋಗಬಾರದು. ಬದುಕುವ ಹಕ್ಕಿನ ಜೊತೆ ಇತರರ ಹಕ್ಕುಗಳನ್ನು ಕಸಿಯಬಾರದು. ದುರಾಸೆ ಬಿಟ್ಟು ಕರ್ತವ್ಯ ಪ್ರಜ್ಞೆ ಉಳಿಸಿಕೊಳ್ಳಬೇಕು.ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಜೊತೆ ಮೂಲಭೂತ ಕರ್ತವ್ಯಗಳನ್ನು ನೀಡಲಾಗಿದೆ. ಪರಿಸರ ಸಂರಕ್ಷಣೆ ಸಂವಿಧಾನದ ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಿದೆ ಎಂದರು.

ಪ್ರಕೃತಿ ನಮಗೆ ಬದುಕಲು ನೆಲೆ, ಉಸಿರಾಡಲು ಗಾಳಿ, ಕುಡಿಯಲು ನೀರು, ಹೀಗೆ ಮನುಷ್ಯನ ಬದುಕಿಗೆ ಬೇಕಾದ ಎಲ್ಲವನ್ನು ನೀಡಿದೆ. ಇಡಿ ಜೀವ ಸಂಕುಲಕ್ಕೆ ಆಶ್ರಯ ನೀಡಿದೆ. ಆದರೆ ಸ್ವಾರ್ಥ, ದುರಾಸೆಯಿಂದ ಮನುಷ್ಯ ಅದೇ ಪರಿಸರ, ಅರಣ್ಯ,ಜಲ ಮೂಲಗಳ ನಾಶ ಮಾಡುವ ಮೂಲಕ ಕಂಟಕವಾಗುತ್ತಿದ್ದಾನೆ. ಪ್ರಕೃತಿ ಒಲಿದರೆ ಮನುಷ್ಯನ ಬದುಕು. ಪ್ರಕೃತಿ ಮುನಿದರೆ ಮನುಕುಲದ ವಿನಾಶ ಖಚಿತ. ನೆರೆ, ಪ್ರವಾಹ, ಅತಿವೃಷ್ಠಿ, ಭೂಕುಸಿತ ನೈಸರ್ಗಿಕ ವಿಕೋಪಗಳೆಲ್ಲ ಪರಿಸರ ನಾಶದ ಪರಿಣಾಮವಾಗಿದೆ ಎಂದು ತಿಳಿಸಿದರು.

ಪ್ರಕೃತಿಯೊಂದಿಗೆ ಸಮತೋಲನದ ಬೆಳವಣಿಗೆಯಾಗಬೇಕು. ಪ್ರಕೃತಿ, ಅರಣ್ಯಗಳ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಪರಿಸರ ದಿನ ಕೇವಲ ಆಚರಣೆಗಳಿಗೆ ಸೀಮಿತವಾಗದೇ ಕಾರ್ಯರೂಪಕ್ಕೂ ಬರಬೇಕು. ಗಿಡಗಳನ್ನು ನೆಟ್ಟು ಬೆಳೆಸಬೇಕು. ಸ್ವಾಭಾವಿಕ ಅರಣ್ಯ, ಜಲಮೂಲಗಳನ್ನು ರಕ್ಷಿಸಬೇಕು. ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ಪರಿಸರ ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೂ ನಮ್ಮ ಕೊಡುಗೆ ನೀಡಬೇಕು ಎಂದರು.

ವಕೀಲ ಕೆ.ಆರ್.ಸುರೇಶ್ ಅರಣ್ಯ ಕಾಯ್ದೆ ಕುರಿತು ವಿಶೇಷ ಉಪನ್ಯಾಸ ನೀಡಿ ಮನುಷ್ಯನಿಗೆ ಉಸಿರಾಡಲು ಗಾಳಿ, ಅಂತರ್ಜಲ ಎಲ್ಲವು ಅರಣ್ಯಗಳಿದ್ದರೆ ಮಾತ್ರ ಸಾಧ್ಯ. ಗಿಡಮರ, ಅರಣ್ಯಗಳ ರಕ್ಷಣೆಗಾಗಿ ಅರಣ್ಯ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಅರಣ್ಯ ಕಾಯ್ದೆ ಅಸ್ತಿತ್ವದಲ್ಲಿದೆ.ಅರಣ್ಯಗಳ ರಕ್ಷಣೆ ಇದರ ಮೂಲ ಉದ್ದೇಶ ಎಂದು ಹೇಳಿದರು.

ಶೃಂಗೇರಿ ವಲಯಾರಣ್ಯಾಧಿಕಾರಿ ಮಧುಕರ್ ಮಾತನಾಡಿ ಮನುಷ್ಯ ಹುಟ್ಟುವ ಮೊದಲೇ ಪ್ರಕೃತಿ ಸೃಷ್ಠಿಯಾಗಿದೆ. ಕಾನೂನು ಕಾಯ್ದೆಗಳಿದ್ದರೂ ಪರಿಸರ , ಅರಣ್ಯ ನಾಶವಾಗುತ್ತಿದೆ. ನಾವು ಪಶ್ಚಿಮ ಘಟ್ಟದ ತಪ್ಪಲಿನಲ್ಲಿದ್ದೇವೆ.ಇದು ಜೀವ ವೈವಿದ್ಯತೆಯಿಂದ ಕೂಡಿದ ಕಾಡಗಿದ್ದು ಇಲ್ಲಿ ವಿಶೇಷ ಮಳೆಯ ಕಾಡುಗಳಿವೆ. ಪ್ರಕೃತಿಯ ಜೊತೆಗಿನ ಬದುಕು ನಮ್ಮದಾಗ ಬೇಕು. ಪರಿಸರ ಹಾಳು ಮಾಡುವ ಅಧಿಕಾರ ನಮಗಿಲ್ಲ.ನಾವು ಭೂಮಿಗೆ ಬಂದಿರುವ ಪ್ರವಾಸಿಗರು. ಪರಿಸರ ರಕ್ಷಣೆ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಇ. ಮಹೇಶ್, ಪ್ರಬಾರಿ ಪ್ರಚಾರ್ಯ ವಿದ್ಯಾಧರ, ಪ್ರಶಾಂತ್, ಸಂತೋಷ್ ಮತ್ತಿತರರು ಇದ್ದರು.

12 ಶ್ರೀ ಚಿತ್ರ 1-

ಶೃಂಗೇರಿ ಜೆಸಿಬಿಎಂ ಕಾಲೇಜಿನಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಶೃಂಗೇರಿ ನ್ಯಾಯಾಲಯದ ನ್ಯಾಯಾಧೀಶ ಜೀತು ಮಾತನಾಡಿದರು. ವಿಧ್ಯಾಧರ್, ಮಹೇಶ್ ಮತ್ತಿತರರು ಇದ್ದರು.