ಸಾರಾಂಶ
-ತಾ. ಕಸಾಪ ಮಹಿಳಾ ಘಟಕ, ಬ್ರಹ್ಮ ಕುಮಾರಿ ಈಶ್ವರೀಯ ವಿವಿ ಯಿಂದ ಕೃಷ್ಣವೇಷ ಸ್ಪರ್ಧೆ । ಶಿಕ್ಷಕರ ದಿನಾಚರಣೆ
ಕನ್ನಡಪ್ರಭ ವಾರ್ತೆ, ನರಸಿಹಂರಾಜಪುರಪ್ರತಿಯೊಬ್ಬ ತಾಯಿ ತನ್ನ ಮಕ್ಕಳಲ್ಲಿ ಕೃಷ್ಣನನ್ನು ಕಾಣುತ್ತಾಳೆ ಎಂದು ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ಬಿ.ಕೆ.ಪ್ರಮೀಳಕ್ಕ ತಿಳಿಸಿದರು.
ಶನಿವಾರ ರಾಘವೇಂದ್ರ ಬಡಾವಣೆಯಲ್ಲಿ ತಾಲೂಕು ಕಸಾಪ ಮಹಿಳಾ ಘಟಕ ಹಾಗೂ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ, ಮಕ್ಕಳ ಕೃಷ್ಣ ವೇಷ ಸ್ಪರ್ಧೆ, ಉಪನ್ಯಾಸ, ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾ ಡಿದರು. ಕೃಷ್ಣನು ಮಹಾನ್ ಯೋಗಿ, ಜ್ಞಾನಿ, ಗೀತೋಪದೇಶ ಮಾಡಿದ ಮಹಾನ್ ಪುರುಷ. ಶ್ರೀ ಕೃಷ್ಣ ಪ್ರತಿಯೊಬ್ಬರಲ್ಲೂ ಆತ್ಮ ವಿಶ್ವಾಸ ಹೆಚ್ಚಿಸುವ ಮಹಾನ್ ಶಿಕ್ಷಕನೂ ಆಗಿದ್ದಾನೆ. ಪ್ರತಿಯೊಬ್ಬರಲ್ಲೂ ದೈವೀ ಗುಣ ಇರಬೇಕು. ಆಗ ಮಾತ್ರ ನಮ್ಮ ಮನೆ ನಂದನವನವಾಗಲಿದೆ. ಕಲಿಯುಗದ ನಂತರ ಸತ್ಯಯುಗ ಬರಲಿದ್ದು, ಆಗ ಸ್ವರ್ಗಾನಂದ ಎಲ್ಲರಿಗೂ ಲಭಿಸಲಿದೆ. ಪರಮಾತ್ಮನನ್ನು ಎಲ್ಲರೂ ಸ್ತುತಿಸಬೇಕು ಎಂದು ಕರೆ ನೀಡಿದರು.ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಆಶಯ ಭಾಷಣ ಮಾಡಿ, ಕಸಾಪ ಮಹಿಳಾ ಘಟಕ ಜಿಲ್ಲೆಯಲ್ಲೇ ಅತ್ಯಂತ ಕ್ರಿಯಾಶೀಲವಾದ ಕೆಲಸ ಮಾಡುತ್ತಿದೆ. ಹತ್ತಾರು ವಿಭಿನ್ನ ಕಾರ್ಯಕ್ರಮ ನಡೆಸುತ್ತಿದೆ. ತಾಲೂಕು ಕಸಾಪ ಕನ್ನಡ ಪ್ರತಿಯೊಂದು ಮನೆ, ಮನೆಗೂ ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ. ಈಗಾಗಲೇ ಕಸಾಪದಿಂದ ಗ್ರಾಮೀಣ ಭಾಗದಲ್ಲಿ ಒಗಟು ಬಿಡಿಸುವ ಕಾರ್ಯಕ್ರಮ, ಗಾದೆಗಳ ಸ್ಪರ್ಧೆ, ಅಂತ್ಯಾಕ್ಷರಿ ನಡೆಸಿದ್ದೇವೆ. ಮುಂದಿನ ದಿನದಲ್ಲಿ ಹೋಬಳಿ ಸಮ್ಮೇಳನ ನಡೆಸುತ್ತೇವೆ ಎಂದರು.
ಸಭೆ ಅಧ್ಯಕ್ಷತೆ ವಹಿಸಿದ್ದ ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಮಾತನಾಡಿ, ದೇಶದ ಮುಂದಿನ ಪ್ರಜೆಯನ್ನು ರೂಪಿಸುವ ಜವಾಬ್ದಾರಿ ಹೊತ್ತಿರುವ ಶಿಕ್ಷಕ ವೃತ್ತಿ ಪವಿತ್ರ. ಸಮಾಜದಲ್ಲಿ ಶಿಕ್ಷಕರು ಗೌರವ ಸ್ಥಾನ ಹೊಂದಿದ್ದಾರೆ. ಈ ಉದ್ದೇಶದಿಂದ ಕಸಾಪ ಮಹಿಳಾ ಘಟಕದಿಂದ ಶಿಕ್ಷಕರ ದಿನಾಚರಣೆ ಆಚರಿಸುತ್ತಿದ್ದೇವೆ. ಅಲ್ಲದೆ ಮಕ್ಕಳಿಗೆ ಶ್ರೀ ಕೃಷ್ಣನ ಸ್ಪರ್ಧೆ ಏರ್ಪಡಿಸಿ ಮಕ್ಕಳಲ್ಲಿ ದೇವರನ್ನು ಕಾಣುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ಬಿ.ಜಯಂತಿ ಹಾಗೂ ಅಂಗನವಾಡಿ ಶಿಕ್ಷಕಿ ಶೈಲಾ ಪ್ರಶಾಂತ್ ಅವರನ್ನು ಸನ್ಮಾನಿಸಲಾಯಿತು.
ಮಕ್ಕಳ ಕೃಷ್ಣವೇಷ ಸ್ಪರ್ಧೆಯಲ್ಲಿ .ಒಟ್ಟು 21 ಮಕ್ಕಳು ಭಾಗವಹಿಸಿದ್ದರು. ಒಂದು ವರ್ಷದ ಒಳಗಿನ ಮಕ್ಕಳ ಸ್ಪರ್ಧೆಯಲ್ಲಿ ಖುಷಿ ಪ್ರಥಮ, ಅಭಿಜ್ಞ ದ್ವಿತೀಯ, 2 ರಿಂದ 5 ವರ್ಷದ ಒಳಗಿನ ಮಕ್ಕಳ ಸ್ಪರ್ಧೆಯಲ್ಲಿ ತನುಶ್ರೀ ಪ್ರಥಮ, ಆದ್ಯಗೌಡ ದ್ವಿತೀಯ, 6 ರಿಂದ 8 ವರ್ಷದ ಒಳಗಿನ ಮಕ್ಕಳ ಸ್ಪರ್ಧೆಯಲ್ಲಿ ಆಶುತೋಷ್ ಪ್ರಥಮ, ಫಲ್ಗುಣ ದ್ವಿತೀಯ ಸ್ಥಾನ ಪಡೆದರು.ಅತಿಥಿಗಳಾಗಿದ್ದ ಕಸಾಪ ನಿಕಟಪೂರ್ವ ಅಧ್ಯಕ್ಷ ಎನ್.ಎಂ.ಕಾಂತರಾಜ್, ಕಸಾಪ ಹೋಬಳಿ ಘಟಕದ ಅಧ್ಯಕ್ಷೆ ಜುಬೇದ, ಡಾ.ಸ್ವಪ್ನಾಲಿ , ಜಯಂತಿ, ಜಯಮ್ಮ, ವಿಜಯಕುಮಾರ್, ಕೆ.ಎಸ್.ರಾಜಕುಮಾರ್ ಇದ್ದರು.