ಸಾರಾಂಶ
ಪ್ರತಿ ವ್ಯಕ್ತಿಯೂ ಸಂವಿಧಾನದ ಆಶಯವನ್ನು ತಿಳಿಯಬೇಕು. ಆದ್ದರಿಂದ ಪ್ರತಿ ಮನೆ ಮನೆಗೂ ಸಂವಿಧಾನದ ಮಹತ್ವವನ್ನು ಸಾರುವ ಉದ್ದೇಶದಿಂದ ಸಂವಿಧಾನ ಜಾಗೃತಿ ಜಾಥಾ ನಡೆಸಲಾಗುತ್ತಿದೆ ಎಂದು ಜಿಪಂ ಸಿಇಒ ಜಿ.ಪ್ರಭು ತಿಳಿಸಿದರು.
ಕನ್ನಡಪ್ರಭ ವಾರ್ತೆ ತುಮಕೂರು
ಪ್ರತಿ ವ್ಯಕ್ತಿಯೂ ಸಂವಿಧಾನದ ಆಶಯವನ್ನು ತಿಳಿಯಬೇಕು. ಆದ್ದರಿಂದ ಪ್ರತಿ ಮನೆ ಮನೆಗೂ ಸಂವಿಧಾನದ ಮಹತ್ವವನ್ನು ಸಾರುವ ಉದ್ದೇಶದಿಂದ ಸಂವಿಧಾನ ಜಾಗೃತಿ ಜಾಥಾ ನಡೆಸಲಾಗುತ್ತಿದೆ ಎಂದು ಜಿಪಂ ಸಿಇಒ ಜಿ.ಪ್ರಭು ತಿಳಿಸಿದರು.ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸಂಯುಕ್ತಾಶ್ರಯದಲ್ಲಿ ಭಾರತ ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಕ್ತದಾನ, ನೇತ್ರದಾನ ಮತ್ತು ವಿವಿಧ ಅಂಗಾಂಗಗಳ ದಾನದ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ ಹಲವು ಸಂಸ್ಕೃತಿ ಮತ್ತು ವೈವಿದ್ಯತೆಯಿಂದ ಕೂಡಿರುವ ದೇಶವಾಗಿದ್ದು. ನಮ್ಮ ದೇಶದ ಸಂವಿಧಾನವು ಕೂಡ ಅದೇ ರೀತಿಯಲ್ಲಿ ರಚನೆಯಾಗಿದ್ದು, ಸಂವಿಧಾನ ನಮಗೆ ಅನೇಕ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಅವುಗಳನ್ನು ನಾವು ಬಹಳ ಜವಾಬ್ದಾರಿಯಿಂದ ಬಳಸಬೇಕು. ದೇಶ ವ್ಯವಸ್ಥಿತವಾಗಿ ನಡೆಯಲು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಿಗೆ ಸಮಾನ ಅಧಿಕಾರವನ್ನು ಸಂವಿಧಾನ ನೀಡಿದೆ ಎಂದರು. ನಂತರ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ತುಮಕೂರು ವಿವಿ ಕುಲಪತಿ ಎಂ. ವೆಂಕಟೇಶ್ವರಲು ಮಾತನಾಡಿ, ಸಂವಿಧಾನ ದೇಶದ ಬೆನ್ನೆಲುಬು ಇದ್ದಂತೆ, ಸಂವಿಧಾನದಿಂದಲೇ ದೇಶ ಸದೃಢವಾಗಿರುತ್ತದೆ. ಈ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ಪ್ರತಿ ಕಾಲೇಜಿನಲ್ಲೂ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಸಂವಿಧಾನದ ಮಹತ್ವವನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಾ. ಮಂಜುನಾಥ್ ಡಿ.ಏನ್., ತಾಲೂಕು ಆರೋಗ್ಯಾಧಿಕಾರಿ ಲಕ್ಷ್ಮಿಕಾಂತ್, ಬ್ಲಾಡ್ ಬ್ಯಾಂಕ್ ಮ್ಯಾನೇಜ್ಮೆಂಟ್ ನ ಡಾ. ವೀಣಾ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಸಂದೀಪ್ ಉಪಸ್ಥಿತರಿದ್ದರು.