ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಂಯುಕ್ತ ಹೋರಾಟ-ಕರ್ನಾಟಕ ಜಿಲ್ಲಾ ಸಮಿತಿಯಿಂದ ಕೇಂದ್ರ ಬಜೆಟ್ ಪ್ರತಿಯನ್ನು ಸುಟ್ಟು ಪ್ರತಿಭಟಿಸಲಾಯಿತು.
* ಜಿಲ್ಲೆಯ ಜನರ ನಿರೀಕ್ಷೆ ಹುಸಿಗೊಳಿಸಿದ ಕೇಂದ್ರದ ನಡೆಗೆ ಖಂಡನೆ । ಸಂಯುಕ್ತ ಹೋರಾಟ-ಕರ್ನಾಟಕ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ರಾಯಚೂರುಕೇಂದ್ರದ ಬಿಜೆಪಿ ಸರ್ಕಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್ ನಿರಾಶೆ ಉಂಟು ಮಾಡಿದೆ ಹಾಗೂ ದೇಶದ ಮತ್ತು ಕರ್ನಾಟಕದ ರೈತ,ಕಾರ್ಮಿಕ,ದಲಿತ,ಮಹಿಳಾ, ವಿದ್ಯಾರ್ಥಿ ಹಾಗೂ ಯುವಜನರ ನೀರಿಕ್ಷೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯವಹಿಸಿರುವುದನ್ನು ಖಂಡಿಸಿ ಸಂಯುಕ್ತ ಹೋರಾಟ- ಕರ್ನಾಟಕ (ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಸಮಿತಿ ಮುಖಂಡರು,ಪದಾಧಿಕಾರಿಗಳು,ಸದಸ್ಯರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಘೊಷಣೆ ಕೂಗಿ ಕೇಂದ್ರದ ಬಜೆಟ್ ಪ್ರತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮಾತನಾಡಿದ ಪ್ರತಿಭಟನಾ ನಿರತರು,ದೇಶ ಬಹಳ ಗಂಭೀರವಾದ ಅರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಎಲ್ಲ ವರ್ಗದ ದುಡಿಯುವ ಜನರು ಬಹಳ ದೊಡ್ಡ ಪ್ರಮಾಣದ ಬೆಲೆ ಏರಿಕೆ ಯಿಂದಾಗಿ ಜೀವನ ನಡೆಸಲು ಬಹಳ ಸಂಕಟವನ್ನು ಅನುಭವಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರವು ಕಾರ್ಪೊರೇಟ್ ಚಮಚಾಗಳಿಗೆ ಮತ್ತು ಶ್ರೀಮಂತರಿಗಾಗಿಯೇ ಬಜೆಟ್ ತಯಾರಿಸಿ ದೇಶ ಹಾಗೂ ವಿದೇಶ ಕಾರ್ಪೊರೇಟ್ ಕಂಪನಿಗಳ, ಜಾಗತಿಕ ಹಣಕಾಸು ಬಂಡವಾಳದ ಹಿತಕಾಯುವ ಬಡವರ ಮೇಲೆ ವಿಪರೀತ ಪ್ರಮಾಣದ ತೆರಿಗೆ ಭಾರವನ್ನು ಹೊರೆಸುವ ಕೆಲಸವನ್ನು ಮಾಡಲಾಗಿದೆ ಎಂದು ಆರೋಪಿಸಿದರು.ಐತಿಹಾಸಿಕ ದೆಹಲಿ ರೈತ ಹೋರಾಟದ ಮೂಲಕ ಹಿಮ್ಮೆಟ್ಟಿಸಿದ ಕರಾಳ ಕೃಷಿ ಕಾಯ್ದೆಗಳನ್ನು, ವಿದ್ಯುತ್ ಖಾಸಗೀಕರಣ ನೀತಿಗಳನ್ನು ಕರಾಳ ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ಧೋರಣಾ ಚೌಕಟ್ಟು ಮೂಲಕ ಹಾಗೂ ವಿದ್ಯುತ್ ವಲಯವನ್ನು ಖಾಸಗಿ ಕಾರ್ಪೊರೇಟ್ ದೈತ್ಯರಿಗೆ ವಹಿಸುವ ಮೂಲಕ ಜಾರಿಗೆ ತರುವ ಎಲ್ಲಾ ಪ್ರಯತ್ನಗಳನ್ನು ಕೂಡಲೇ ನಿಲ್ಲಿಸಬೇಕು.ಎಲ್ಲಾ ಕೃಷಿ ಉತ್ಪನ್ನಗಳಿಗೆ ಎಂ.ಎಸ್ ಸ್ವಾಮಿನಾಥನ್ ಆಯೋಗದ ಶಿಪಾರಸ್ಸಿನಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿ ಕಾನೂನು ಖಾತರಿ ಒದಗಿಸಬೇಕು. ರೈತರು ಸೇರಿದಂತೆ ಎಲ್ಲಾ ದುಡಿಯುವ ಜನತೆಯನ್ನು ಸಾಲ ಭಾಧೆಯಿಂದ ಮುಕ್ತಿಗೊಳಿ ಸಬೇಕು ಮತ್ತು ಎಲ್ಲಾ ದುಡಿಯುವ ಜನರಿಗೆ ಘನತೆ ಹಾಗೂ ಗೌರವದಿಂದ ಜೀವಿಸುವ ರೀತಿಯಲ್ಲಿ ಕನಿಷ್ಠ ವೇತನ ಮತ್ತು ಪಿಂಚಣಿ ಭದ್ರತೆ ಒದಗಿಸಬೇಕು ಹಾಗೂ ಎಮ್ಸ್ ಸ್ಥಾಪನೆಗೆ ಒತ್ತಾಯಿಸಿ ಕಳೆದ 1001 ದಿನಗಳಿಂದ ಹೋರಾಟ ನಡೆಸುತ್ತಿದ್ದೇವೆ, ಕೂಡಲೇ ಕೇಂದ್ರ ಸರ್ಕಾರ ಏಮ್ಸ್ ಮಂಜೂರು ಸೇರಿ ವಿವಿಧ ಹಕ್ಕೋತ್ತಾಯಗಳ ಮನವಿಯನ್ನು ತಹಸೀಲ್ದಾರ್ ಮುಖಾಂತರ ಪ್ರಧಾನ ಮಂತ್ರಿಗೆ ರವಾನಿಸಿದರು.ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಮಡರಾದ ಚಾಮರಸ ಮಾಲಿಪಾಟೀಲ್, ಕೆ.ಜಿ ವಿರೇಶ, ಎಚ್.ಪದ್ಮಾ, ಪ್ರಭಾಕರ ಪಾಟೀಲ್, ಡಿ.ಎಸ್. ಶರಣಬಸವ, ಜಿಂದಪ್ಪ ವಡ್ಲೂರು, ಕೆ.ರಂಗನಾಥ ಡಿ.ರಾಂಪೂರು, ಮಲ್ಲನಗೌಡ,ಅಂಜಿನೇಯ್ಯ ಕುರುಬದೊಡ್ಡಿ, ಅಸ್ಲಂಪಾಷ್, ಜಾನ್‌ವೆಸ್ಲಿ, ಗೋಪಾಲ,ಸಾಜೀದ್ ಹುಸೇನ್, ಬಡೇಸಾಬ್, ಮುದುಕಪ್ಪ ನಾಯಕ, ಅಶೋಕ ನೀಲಗಲ್ ಸೇರಿದಂತೆ ಅನೇಕರು ಇದ್ದರು.
ಬಜೆಟ್ ಮರು ರೂಪಿಸಲು ಹಕ್ಕೊತ್ತಾಯಬೆಲೆ ಏರಿಕೆ, ನಿರುದ್ಯೋಗ, ಬಡತನ, ಹಸಿವು, ವಲಸೆ ಮುಂತಾದ ಆರ್ಥಿಕ ಸಮಸ್ಯೆಗಳನ್ನು ನಿವಾರಿಸುವ ಗುರಿ ಉಳ್ಳ ಬಜೆಟ್ ಆಗಿ ಮರು ರೂಪಿಸಬೇಕು. ಉದ್ಯೋಗ ಸೃಷ್ಟಿಗೆ ಸಂಪೂರ್ಣ ಒತ್ತು ನೀಡಬೇಕು, ಖಾಸಗೀಕರಣ ನೀತಿಗಳನ್ನು ಸಂಪೂರ್ಣವಾಗಿ ಕೈ ಬಿಡಬೇಕು. ಆರೋಗ್ಯ, ಶಿಕ್ಷಣ, ಆಹಾರ ಭದ್ರತೆ, ಗ್ರಾಮೀಣ ಉದ್ಯೋಗ ಖಾತರಿ ,ಮಾನವ ಅಭಿವೃದ್ಧಿ, ಸಮಾಜ ಕಲ್ಯಾಣ ಕ್ಕೆ ಆಗಿರುವ ಅನುದಾನ ಕೊರತೆ ಹಾಗೂ ನಿರ್ಲಕ್ಷ್ಯವನ್ನು ಸರಿಪಡಿಸಬೇಕು. ಸಂವಿಧಾನ ಖಾತರಿಪಡಿಸಿರುವ ರಾಜ್ಯಗಳ ಹಕ್ಕಿನ ಮೇಲೆ ಆಕ್ರಮಣ ನಡೆಸುವ ಬಜೆಟ್ ಪ್ರಸ್ತಾಪಗಳನ್ನು ಸಂಪೂರ್ಣವಾಗಿ ಕೈ ಬಿಡಬೇಕು. ತೆರಿಗೆ ಹಂಚಿಕೆಯಲ್ಲಿ ಕರ್ನಾಟಕ ಹಾಗೂ ದಕ್ಷಿಣದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯ ಹಾಗೂ ತಾರತಮ್ಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.