ಪ್ರತಿ ದೇಗುಲವೂ ನೆಮ್ಮದಿಯ ತಾಣ: ನಿಶಾಂತ್‌

| Published : Apr 17 2025, 12:01 AM IST

ಸಾರಾಂಶ

ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದ ಶ್ರೀ ಕರಿ ತಿಮ್ಮರಾಯಸ್ವಾಮಿ ದೇವಸ್ಥಾನ ಮತ್ತು ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ಯುವ ಮುಖಂಡ ನಿಶಾಂತ್‌ ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಹನೂರು

ಕ್ಷೇತ್ರದಲ್ಲಿರುವ ಪ್ರತಿಯೊಂದು ದೇವಾಲಯಗಳು ನೆಮ್ಮದಿಯ ತಾಣವಾಗಿದೆ ಎಂದು ಬಿಜೆಪಿ ಯುವ ಮುಖಂಡ ನಿಶಾಂತ್ ತಿಳಿಸಿದರು.

ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದ ಶ್ರೀ ಕರಿ ತಿಮ್ಮರಾಯಸ್ವಾಮಿ ದೇವಸ್ಥಾನ ಮತ್ತು ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದರು. ರಾಜ್ಯದ ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ಪವಾಡ ಪುರುಷ ಮಲೆಮಹದೇಶ್ವರ, ಘನನೀಲಿ ಸಿದ್ದಪ್ಪಾಜಿ, ಮಂಟೇಸ್ವಾಮಿ, ಬಿಳಿಗಿರಿ ರಂಗಸ್ವಾಮಿ, ಹಿಮವದ್ ಗೋಪಾಲಸ್ವಾಮಿ ಸೇರಿದಂತೆ ಪವಾಡ ಪುರುಷರು ಇರುವ ಸ್ಥಳದಲ್ಲಿ ಜನ್ಮ ತಾಳಿರುವುದೇ ನಮ್ಮ ಪುಣ್ಯ ಎಂದರು.

ಪವಾಡ ಪುರುಷ ಮಲೆಮಹದೇಶ್ವರರು ಪವಾಡ ಮಾಡಿರುವ ಮಹದೇಶ್ವರ ಬೆಟ್ಟಕ್ಕೆ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ದೇವಸ್ಥಾನಕ್ಕೆ ಹೋದಾಗ ನಮ್ಮ ಎಲ್ಲ ಜಂಜಾಟಗಳನ್ನು ಮರೆತು ಸ್ವಾಮಿಯ ದರ್ಶನ ಪಡೆದು ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಿದ್ದೇವೆ. ಇದೇ ನಿಟ್ಟಿನಲ್ಲಿ ಹನೂರು ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಿಂದ ಧಾರ್ಮಿಕ ಕ್ಷೇತ್ರಕ್ಕೆ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದರು.ಸಾಲೂರು ಬೃಹನ್ಮಠಕ್ಕೂ ಮಲೆಮಹದೇಶ್ವರರಿಗೂ ಅವಿನಾಭಾವ ಸಂಬಂಧವಿದೆ. ಮಲೆಮಹದೇಶ್ವರರು ತಪಸ್ಸು ಮಾಡಿದ ಜಾಗವು ಇಂದಿಗೂ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡಿ ತಮ್ಮ ಹರಕೆ ಸಮರ್ಪಿಸಿ ಉತ್ತಮ ಜೀವನ ರೂಪಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ಊರಿನ ಗ್ರಾಮಸ್ಥರು ಯುವ ಮುಖಂಡ ನಿಶಾಂತ್‌ರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಈ ವೇಳೆ ಗ್ರಾಮಸ್ಥರು ಹಾಜರಿದ್ದರು.