ಕುಕನೂರು: ಮತದಾರರ ಪಟ್ಟಿಗೆ ಪ್ರತಿಯೊಬ್ಬರೂ ಸರಿಯಾದ ಮಾಹಿತಿ ನೀಡಬೇಕು, ಮತದಾರರ ಪಟ್ಟಿಯಿಂದ ಬಿಟ್ಟುಹೋಗದಂತೆ ನೋಡಿಕೊಳ್ಳಬೇಕು ಎಂದು ತಹಸೀಲ್ದಾರ್‌ ಬಸವರಾಜ ಬೆಣ್ಣೆಶಿರೂರು ಹೇಳಿದರು.

ತಾಲೂಕಿನ ರಾಜೂರು ಗ್ರಾಮದಿಂದ ಕುಕನೂರು, ಮಸಬಹಂಚಿನಾಳ ವರೆಗೆ ತಾಪಂ, ತಹಸೀಲ್ದಾರ್‌ ಕಚೇರಿ, ಸ್ವೀಪ್ ಸಮಿತಿ ಹಾಗೂ ನಾನಾ ಇಲಾಖೆ ಸಹಯೋಗದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣಾ ಕುರಿತು ಜರುಗಿದ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅರ್ಹ ಮತದಾರ ಮತದಾನದ ಹಕ್ಕಿನಿಂದ ವಂಚಿತನಾಗಬಾರದು. ಅದಕ್ಕಾಗಿ ಎಲ್ಲ 18 ವರ್ಷ ತುಂಬಿದ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು, ವಿಳಾಸ, ಇತ್ತೀಚಿನ ಫೋಟೋ ಸೇರಿಸಲು ಅವಕಾಶವಿದೆ. ಜು. 29ರ ವರೆಗೆ ಈ ಅಭಿಯಾನ ಚಾಲನೆಯಲ್ಲಿರುತ್ತದೆ. ಬಿಎಲ್‌ಒಗಳು ತಮ್ಮ ಮನೆಗೆ ಭೇಟಿ ನೀಡಿದಾಗ ಸರಿಯಾದ ಮಾಹಿತಿ ಕೊಟ್ಟು ಸಹಕಾರ ನೀಡಬೇಕು. ಎಲ್ಲ ಗ್ರಾಪಂ ಕೇಂದ್ರಗಳಲ್ಲಿ ಮಾಹಿತಿ ಕೇಂದ್ರ ಸ್ಥಾಪಿಸಲಾಗಿದೆ ಎಂದರು.

ತಾಪಂ ಅಧಿಕಾರಿ ಬೆಟದೇಶ ಮಾಳೆಕೊಪ್ಪ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಫಾರಂ ತುಂಬಿಕೊಡದೆ ಇದ್ದವರು ಬೇಗನೆ ತುಂಬಿ ಕೊಡಬೇಕು. ಒಂದು ವೇಳೆ ಮರಣ ಹೊಂದಿದ್ದರೆ, ಬೇರೆ ಕಡೆ ಸ್ಥಳಾಂತರ ಆಗಿದ್ದರೆ ಅಂಥವರು ಸರಿಯಾದ ಮಾಹಿತಿ ನೀಡಬೇಕು ಎಂದರು.

ಬೈಕ್ ಸವಾರರು ಹೋರ್ಡಿಂಗ್ಸ್‌ ಪ್ರದರ್ಶಿಸಿ ರ್ಯಾಲಿಯುದ್ದಕ್ಕೂ ಜಾಗೃತಿ ಮೂಡಿಸಿದರು. ಎಸ್.ಐ.ಆರ್. ವಿಷಯಕ್ಕೆ ಸಂಬಂಧಿಸಿದಂತೆ ಜಿಂಗಲ್ಸ್‌ಗಳನ್ನು ಮೈಕ್‌ನಲ್ಲಿ ಹಾಕಿಕೊಂಡು ಮೂರು ಹೋಬಳಿ ಗ್ರಾಮಗಳಲ್ಲಿ ಪ್ರಚಾರ ಮಾಡಲಾಯಿತು.

ಕುಕನೂರು ಪಪಂ ಮುಖ್ಯಾಧಿಕಾರಿ ನಾಗೇಶ, ತಾಲೂಕು ಯೋಜನಾಧಿಕಾರಿ ಆನಂದ ಗರೂರ, ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಶರಣಪ್ಪ ಕೆಳಗಿನಮನಿ, ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ವೆಂಕಟೇಶ ದೇಶಪಾಂಡೆ, ರಾಜೂರು ಪಿಡಿಒ ಸಿದ್ದನಗೌಡ, ಮಂಗಳೂರು ಪಿಡಿಒ ನೀಲಂ ಚಳಗೇರಿ, ತಳಕಲ್ಲ ಪಿಡಿಒ ವೀರನಗೌಡ, ಪರಶುರಾಮ, ಶರಣಪ್ಪ ಕೆಳಗಿನಮನಿ ಇದ್ದರು.