ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪ್ರತಿ ವರ್ಷ ವಿಶ್ವದಾದ್ಯಂತ ತಂಬಾಕು ಸೇವನೆಯಿಂದಾಗಿ ಅಂದಾಜು 80 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಸಿವಿಲ್ ನ್ಯಾಯಾಧೀಶರಾದ ಸುನೀತ ಹೇಳಿದರು.ಪಟ್ಟಣದ ಉಪ ವಿಭಾಗ ಆಸ್ಪತ್ರೆ ಆವರಣದಲ್ಲಿ ಕಾನೂನು ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ತಂಬಾಕು ವಿರೋಧಿ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಮುಂದಿನ ಭವಿಷ್ಯದ ಮಕ್ಕಳನ್ನು ಹಾಗೂ ಯುವ ಪೀಳಿಗೆಯನ್ನು ತಂಬಾಕು ಉದ್ಯಮಗಳು ಮಾಡುತ್ತಿರುವ ಕುತಂತ್ರದಿಂದ ರಕ್ಷಣೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಮೂಲಕ ಪ್ರತಿವರ್ಷ ತಂಬಾಕು ವಿರೋಧಿ ದಿನ ಆಚರಿಸಲಾಗುತ್ತಿದೆ. ತಂಬಾಕು ಉದ್ಯಮವು ದಶಕಗಳಿಂದ ತಂತ್ರ ಕುತಂತ್ರಗಳ ಮೂಲಕ ಯುವ ಪೀಳಿಗೆಯನ್ನು ಗುರಿಯಾಗಿಸಿಟ್ಟುಕೊಂಡು ತನ್ನ ಬಳಕೆದಾರರನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಇದನ್ನು ತಟೆಗಟ್ಟುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಂಡು ಅರಿವು ಮೂಡಿಸಲಾಗುತ್ತಿದ್ದರೂ ತಂಬಾಕು ಕೊಳ್ಳುವವರ ಸಂಖ್ಯೆ ಕಡಿಮೆಯಾಗಿಲ್ಲ. ಯುವ ಪೀಳಿಗೆ ಆರೋಗ್ಯದ ದೃಷ್ಟಿಯಿಂದ ತಂಬಾಕು ತ್ಯಜಿಸುವ ಮೂಲಕ ಉತ್ತಮ ಜೀವನ ನಡೆಸಬೇಕು ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಸಿ ಶ್ರೀಕಾಂತ್ ಮಾತನಾಡಿ, ತಂಬಾಕು ತ್ಯಜಿಸುವ ಮೂಲಕ ಯುವ ಪೀಳಿಗೆ ಮೌಲ್ಯಯುತ ಹಾಗೂ ಆರೋಗ್ಯವಂತ ಜೀವನ ನಡೆಸುವಲ್ಲಿ ಪಣತೊಡಬೇಕಿದೆ ಎಂದರು. ಪ್ರಧಾನ ಸಿವಿಲ್ ನ್ಯಾಯಾಧೀಶೆ ನಂದಿನಿ ಮಾತನಾಡಿ, ಪೋಷಕರು ಮತ್ತು ಮನೆಯಲ್ಲಿರುವ ವಯಸ್ಸಾದವರು ತಂಬಾಕು ಉತ್ಪನ್ನಗಳನ್ನು ತರಲು ಮಕ್ಕಳನ್ನು ಬಳಸಿದಂತೆ ಕಡ್ಡಾಯವಾಗಿ ಜಾಗೃತಿ ಮೂಡಿಸುವುದು ಹಾಗೂ ನಿಗಾವಹಿಸುವುದು ನಮ್ಮೆಲ್ಲರ ಕರ್ತವ್ಯ. ಮನೆಯೊಳಗೆ ಮಕ್ಕಳಿದ್ದರೆ ಧೂಮಪಾನ ಮಾಡದಿರುವುದು, ಶಿಕ್ಷಣ ಸಂಸ್ಥೆಗಳನ್ನು ತಂಬಾಕು ಮುಕ್ತವನ್ನಾಗಿಸಲು ಸಹಕಾರ ನೀಡುವುದು, ವ್ಯಾಪಾರಸ್ಥರು ತಂಬಾಕು ಮಾರಾಟ ಮಾಡಲು ಮಕ್ಕಳನ್ನು ಬಳಸದಂತೆ ನೋಡಿಕೊಳ್ಳುವುದು, ತಂಬಾಕಿನಿಂದ ಆಗುತ್ತಿರುವ ಆರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆ, ಸಾಮಾಜಿಕ ಸಮಸ್ಯೆಗಳ ಕುರಿತು ಮಕ್ಕಳಲ್ಲಿ ಹೆಚ್ಚಿನ ಅರಿವು ಮೂಡಿಸಬೇಕಿದೆ ಎಂದರು. ಸರ್ಕಾರಿ ಉಪವಿಭಾಗೀಯ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಾಜಶೇಖರ್, ವಕೀಲರಾದ ಎಲ್.ರಾಜೇಂದ್ರ, ತಾಲೂಕು ಆರೋಗ್ಯ ಅಧಿಕಾರಿ ಡಾ.ಎನ್ ಗೋಪಾಲ್, ವಕೀಲರ ಸಂಘದ ಅಧ್ಯಕ್ಷ ಸಿ ರವಿ, ಉಪಾಧ್ಯಕ್ಷೆ ಸಿ.ಆರ್.ನಿರ್ಮಲ ಹಿರಿಯ ವಕೀಲ ಎನ್ ನಾಗರಾಜು ಇನ್ನಿತರರಿದ್ದರು.