ಪ್ರತಿಯೊಬ್ಬರೂ ರಕ್ತದಾನ ಮಾಡಲು ಮುಂದಾಗಿ

| Published : Jul 08 2024, 12:34 AM IST

ಸಾರಾಂಶ

ರಕ್ತದಾನ ಅತ್ಯಂತ ಶ್ರೇಷ್ಠವಾದುದು, ಜೀವನ್ಮರದಣದಲ್ಲಿರುವ ವ್ಯಕ್ತಿಗಳಿಗೆ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕೆಲಸವಾಗಬೇಕು ಎಂದು ಪ್ರಾಚಾರ್ಯ ಡಾ.ಎ.ಬಿ.ಬಾಳಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ರಕ್ತದಾನ ಅತ್ಯಂತ ಶ್ರೇಷ್ಠವಾದುದು, ಜೀವನ್ಮರದಣದಲ್ಲಿರುವ ವ್ಯಕ್ತಿಗಳಿಗೆ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕೆಲಸವಾಗಬೇಕು ಎಂದು ಪ್ರಾಚಾರ್ಯ ಡಾ.ಎ.ಬಿ.ಬಾಳಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್‌ ಕ್ರಾಸ್‌ ಘಟಕ, ಐಕ್ಯೂಎಸಿ ಘಟಕ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಜಿಲ್ಲಾ ರಕ್ತ ನಿಧಿ ಕೇಂದ್ರ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಹಾಗೂ ರೋಟರಿ ಸಂಯುಕ್ತಾಶ್ರಯದಲ್ಲಿ ಕಾಲೇಜಿನಲ್ಲಿ ನಡೆದ ರಕ್ತ ಗುಂಪು ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ಇತ್ತಿಚೀನ ಅಧ್ಯಯನದ ಪ್ರಕಾರ ರಕ್ತ ಕಣಗಳಲ್ಲಿ ಕಬ್ಬಿಣಾಂಶ ಕಡಿಮೆ ಮಾಡುವುದರಿಂದ, ರಕ್ತದಾನದ ಮೂಲಕ ಹೃದಯಘಾತ ಪಾರ್ಶ್ವವಾಯು ಮತ್ತು ಕ್ಯಾನ್ಸರ್‌ ಅಪಾಯವನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದರು.

ಆಂಗ್ಲ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಟಿ.ಸ್ವಾಮಿ ಮಾತನಾಡಿ, ಜನರಲ್ಲಿ ರಕ್ತದಾನದ ಮಾಡುವುದರ ಕುರಿತು ಅನೇಕ ತಪ್ಪು ಪರಿಕಲ್ಪನೆಗಳಿವೆ. ರಕ್ತದಾನ ಮಾಡುವುದರಿಂದ ದೌರ್ಬಲ್ಯವುಂಟಾಗುತ್ತದೆ ಎಂದು ಕೆಲವರು ಬಾವಿಸಿದ್ದಾರೆ. ಆದರೆ ಅದು ತಪ್ಪು ಗ್ರಹಿಕೆ. ರಕ್ತ ದಾನ ಮಾಡುವುದು ಎಲ್ಲರ ಸಾಮಾಜಿಕ ಜವಾಬ್ದಾರಿ ಎಂದರು.

ತಾಲೂಕು ರೋಟರಿ ಅಧ್ಯಕ್ಷ ಎಂ.ಶಿವಲಿಂಗಪ್ಪ ಮಾತನಾಡಿ, ಆರೋಗ್ಯದ ವಿವಿಧ ಕಾರಣಗಳಿಂದ ಆಸ್ಪತ್ರೆಗೆ ಸೇರುವ ಪ್ರತಿ 7 ಮಂದಿಯಲ್ಲಿ ಒಬ್ಬರಿಗೆ ಮಾತ್ರ ರಕ್ತದ ಅಗತ್ಯವಿರುತ್ತದೆ. ರಕ್ತದ ಕೊರತೆಯಿಂದಲೇ ಅನೇಕರು ಮೃತಪಡುತ್ತಿದ್ದು, ಯುವಕರು ಹೆಚ್ಚಿನ ಪ್ರಮಾಣದಲ್ಲಿ ರಕ್ತದಾನ ಮಾಡಿ ಅವಶ್ಯಕತೆ ಇರುವ ಜನರ ನೆರವಿಗೆ ದಾವಿಸಬೇಕೆಂದು ಮನವಿ ಮಾಡಿದರು.

38 ವಿದ್ಯಾರ್ಥಿಗಳು ರಕ್ತದಾನ ಮಾಡಿದರು. 139 ವಿದ್ಯಾರ್ಥಿಗಳಿಗೆ ರಕ್ತ ಗಂಪಿನ ತಪಾಸಣೆ ಮಾಡಲಾಯಿತು. ಯುವ ರೆಡ್‌ ಕ್ರಾಸ್‌ ಘಟಕದ ಸಂಚಾಲಕ ಪ್ರೊ.ಕೆ.ಎಸ್‌.ಕುಮಾರ್‌, ಕಾಲೇಜು ಅಬಿವೃದ್ಧಿ ಸಮಿತಿಯ ಅಧ್ಯಕ್ಷ ವೆಂಕಟರಮಣಪ್ಪ, ಕಿಶೋರ್‌, ಸಿದ್ದಿಕ್‌, ಬಿ.ಎಲ್‌.ಮಾರುತಿ, ರೋಟರಿ ಸಂಸ್ಥೆ ವೆಂಕಟೇಶ್‌,ಎಂ.ವೆಂಕಟರಾಮು ಇದ್ದರು.