ನಗರವನ್ನು ಸುಂದರವಾಗಿಟ್ಟುಕೊಳ್ಳಲು ಎಲ್ಲರೂ ಸಹಕರಿಸಿ

| Published : Apr 10 2025, 01:00 AM IST

ಸಾರಾಂಶ

ಶಿವಮೊಗ್ಗ: ನಗರವನ್ನು ಸುಂದರ ಹಾಗೂ ಹಸರೀಕರಣಗೊಳಿಸಲು ಸೂಡಾ ವತಿಯಿಂದ ಉದ್ಯಾನವನ ಅಭಿವೃದ್ಧಿ ಕಾಮಗಾರಿಗಳು, ಬಡಾವಣೆಗಳಲ್ಲಿ ಗಿಡಗಳನ್ನು ನೆಡುವುದು ಹೀಗೆ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ನಗರವನ್ನು ಹಸಿರಾಗಿ ಮತ್ತು ಸುಂದರವಾಗಿಟ್ಟುಕೊಳ್ಳಲು ಎಲ್ಲರೂ ಸಹಕರಿಸಬೇಕು ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮನವಿ ಮಾಡಿದರು.

ಶಿವಮೊಗ್ಗ: ನಗರವನ್ನು ಸುಂದರ ಹಾಗೂ ಹಸರೀಕರಣಗೊಳಿಸಲು ಸೂಡಾ ವತಿಯಿಂದ ಉದ್ಯಾನವನ ಅಭಿವೃದ್ಧಿ ಕಾಮಗಾರಿಗಳು, ಬಡಾವಣೆಗಳಲ್ಲಿ ಗಿಡಗಳನ್ನು ನೆಡುವುದು ಹೀಗೆ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ನಗರವನ್ನು ಹಸಿರಾಗಿ ಮತ್ತು ಸುಂದರವಾಗಿಟ್ಟುಕೊಳ್ಳಲು ಎಲ್ಲರೂ ಸಹಕರಿಸಬೇಕು ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮನವಿ ಮಾಡಿದರು.

ಬುಧವಾರ ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯ ಅನ್ನಪೂರ್ಣೇಶ್ವರಿ ದೇವಸ್ಥಾನ ಪಕ್ಕದ ಉದ್ಯಾನವನ, ಸೂರ್ಯ ಬಡಾವಣೆ ಹಾಗೂ ಸೋಮಿನಕೊಪ್ಪ ರಸ್ತೆಯ ಕೆಎಚ್‌ಬಿ ಕಾಲೊನಿ ಬಳಿ ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯ ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯ ಅನ್ನಪೂರ್ಣೇಶ್ವರಿ ದೇವಸ್ಥಾನ ಪಕ್ಕದಲ್ಲಿ ಅಂದಾಜು ಮೊತ್ತ 25 ಲಕ್ಷ ರು. ವೆಚ್ಚದಲ್ಲಿ ಉದ್ಯಾನವನದ ಉತ್ತರ ಮತ್ತು ಪೂರ್ವ ಭಾಗದಲ್ಲಿ ಫೌಂಡೇಶನ್ ಸಹಿತ ಚೈನ್‌ಲಿಂಕ್ ಫೆನ್ಸಿಂಗ್ ಮತ್ತು ಗೇಟ್ ಅಳವಡಿಸಲಾಗುವುದು. ಉದ್ಯಾನವನದ ದಕ್ಷಿಣ ಭಾಗದಲ್ಲಿ ಫೌಂಡೇಶನ್ ರಹಿತ ಚೈನ್‌ಲಿಂಕ್ ಫೆನ್ಸಿಂಗ್ ಅಳವಡಿಕೆ, ಉದ್ಯಾನವನದಲ್ಲಿ ಮೇಲ್ಛಾವಣಿಯೊಂದಿಗೆ ಯೋಗ ಮಂಟಪ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯ ಜಿ-ಬ್ಲಾಕ್‌ನಲ್ಲಿ ಹೊರಾಂಗಣ ಸಾಮಗ್ರಿ ಅಳವಡಿಸಿರುವ ಉದ್ಯಾನವನಕ್ಕೆ ಸುತ್ತಲೂ ಗ್ರಿಲ್ ಫೆನ್ಸಿಂಗ್ ಅಳವಡಿಸುವ ಕಾಮಗಾರಿಯನ್ನು 20 ಲಕ್ಷ ರು. ವೆಚ್ಚದಲ್ಲಿ ಕೈಗೆತ್ತಿಗೊಳ್ಳಲು ಗುದ್ದಲಿಪೂಜೆ ನೆರವೇರಿಸಿದ್ದು, ಉದ್ಯಾನವನದ ಉತ್ತರ, ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ಫೌಂಡೇಶನ್ ಸಹಿತ ಚೈನ್‌ಲಿಂಕ್ ಫೆನ್ಸಿಂಗ್ ಮತ್ತು ಗೇಟ್ ಅಳವಡಿಕೆ ಮಾಡಲಾಗುವುದು ಹಾಗೂ ಸುಮಾರು 35 ಮೀಟರ್‌ ಪಾಥ್ ವೇ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಸೂರ್ಯ ಬಡಾವಣೆಯಲ್ಲಿರುವ ಹಾ.ಮ.ನಾಯ್ಕರವರ ಮನೆಯ ಹತ್ತಿರದ ಉದ್ಯಾನವನದ ಅಭಿವೃದ್ಧಿ ಕಾಮಗಾರಿಯನ್ನು ಅಂದಾಜು ಮೊತ್ತ 25 ಲಕ್ಷ ರು. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಉದ್ಯಾನವನ ಪ್ರದೇಶಕ್ಕೆ ಎಂಎಸ್ ಪೋಲ್‌ನೊಂದಿಗೆ ಚೈನ್‌ಲಿಂಕ್ ಫೆನ್ಸಿಂಗ್ ಮತ್ತು ಗೇಟ್ ಅಳವಡಿಕೆ, ಪಾರ್ಕ್ ಪ್ಲಾಟ್‌ಫಾರ್ಮ್ ನಿರ್ಮಾಣದೊಂದಿಗೆ 8 ಸಂಖ್ಯೆ ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಕೆ ಹಾಗೂ ಅಂದಾಜು 50 ಮೀ.ಪಾಥ್ ವೇ ನಿರ್ಮಾಣ ಹಾಗೂ 4 ಸಂಖ್ಯೆ ಸಾದರಳ್ಳಿ ಕಲ್ಲಿನ ಬೆಂಚು ಅಳವಡಿಸಲಾಗುವುದು ಎಂದು ಹೇಳಿದರು.

ಸೋಮಿನಕೊಪ್ಪ ರಸ್ತೆಯ ಕೆಎಚ್‌ಬಿ ಕಾಲೋನಿಯ 5ನೇ ತಿರುವಿನಲ್ಲಿ 20 ಲಕ್ಷ ರು. ಮೊತ್ತದಲ್ಲಿ ಉದ್ಯಾನವನ ಪ್ರದೇಶಕ್ಕೆ ಫೌಂಡೇಷನ್‌ಸಹಿತ ಚೈನ್‌ಲಿಂಕ್ ಫೆನ್ಸಿಂಗ್ ಮತ್ತು ಗೇಟ್ ಅಳವಡಿಕೆ, ಉದ್ಯಾನದಲ್ಲಿ ಮೇಲ್ಛಾವಣಿಯೊಂದಿಗೆ ಯೋಗ ಮಂಟಪ ನಿರ್ಮಾಣ, ಹೊರ ಭಾಗದಲ್ಲಿ ಅಂದಾಜು 32 ಮೀ ಪಾಥ್‌ವೇ ನಿರ್ಮಾಣ ಹಾಗೂ 6 ಸಂಖ್ಯೆ ಸಾದರಳ್ಳಿ ಕಲ್ಲಿನ ಬೆಂಚು ಅಳವಡಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ಸೂಡಾ ಸದಸ್ಯರಾದ ಎಸ್.ಎಂ.ಸಿದ್ದಪ್ಪ, ಪ್ರವೀಣ್ ಕುಮಾರ್.ಎಂ, ಸೂಡಾ ಆಯುಕ್ತರಾದ ವಿಶ್ವನಾಥ ಮುದಜ್ಜಿ, ಸೂಡಾ ಅಭಿಯಂತರರಾದ ಬಸವರಾಜಪ್ಪ, ಗಂಗಾಧರ ಸ್ವಾಮಿ, ಅಧಿಕಾರಿಗಳು, ನಿವಾಸಿಗಳು ಪಾಲ್ಗೊಂಡಿದ್ದರು.

---------------------

ಪೋಟೋ: 09ಎಸ್‌ಎಂಜಿಕೆಪಿ01

ಶಿವಮೊಗ್ಗದ ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯ ಅನ್ನಪೂರ್ಣೇಶ್ವರಿ ದೇವಸ್ಥಾನ ಪಕ್ಕದ ಉದ್ಯಾನವನ, ಸೂರ್ಯ ಬಡಾವಣೆ ಹಾಗೂ ಸೋಮಿನಕೊಪ್ಪ ರಸ್ತೆಯ ಕೆಎಚ್‌ಬಿ ಕಾಲೊನಿ ಬಳಿ ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.