ಸಾರಾಂಶ
ಭಟ್ಕಳ: ಗುಣಮಟ್ಟದ ಶಿಕ್ಷಣ ದೊರೆಯಲು ಎಲ್ಲರ ಸಹಕಾರ ಅಗತ್ಯ ಎಂದು ಬೈಂದೂರು ಬಿಇಒ ನಾಗೇಶ ನಾಯ್ಕ ಹೇಳಿದರು.
ಇಲ್ಲಿನ ಮುಟ್ಟಳ್ಳಿ ಹಿರಿಯ ಪ್ರಾಥಮಿಕ ಶಾಲೆಯ 70ನೇ ವರ್ಷದ ವಾರ್ಷಿಕ ಸ್ನೇಹ ಸಾಂಸ್ಕೃತಿಕ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಲೆಯ ಮೊದಲ ವಿದ್ಯಾರ್ಥಿಯಾಗಿದ್ದ ಜಟ್ಟಪ್ಪ ನಾಯ್ಕ, ಹಿಂದೆ ವಿದ್ಯೆ ಕಲಿಯಬೇಕಾದರೆ ನಾನಾ ರೀತಿಯ ತೊಂದರೆ ಇತ್ತು. ಆದರೆ ಇಂದು ಅಂತಹ ಪರಿಸ್ಥಿತಿ ಇಲ್ಲ. ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯಲು ಪಾಲಕರು, ಹಳೇ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರ ಸಹಕಾರ ಅಗತ್ಯವಿದೆ. ಶಾಲಾ ವಾರ್ಷಿಕೋತ್ಸವ ಕೇವಲ ಮನೋರಂಜನೆಗಷ್ಟೇ ಸೀಮಿತವಾಗಬಾರದು. ಶಾಲೆಯ ಅಭಿವೃದ್ಧಿಗೂ ಗಮನ ಹರಿಸುವ ಕೆಲಸ ಎಲ್ಲರಿಂದ ಆಗಬೇಕು. ಒಗ್ಗಟ್ಟಿನಿಂದ ಕಾರ್ಯಕ್ರಮ ಸಂಘಟಿಸಿ ಶಾಲೆಯ ಅಭಿವೃದ್ದಿಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದರು.ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ಶಿರಾಲಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಮೂಲಭೂತ ಸವಲತ್ತುಗಳು ಒಳಗೊಂಡಂತೆ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದರೂ ಪೋಷಕರನ್ನು ಖಾಸಗಿ ಶಾಲೆಗಳ ವ್ಯಾಮೋಹ ವ್ಯಾಪಿಸಿದೆ. ಇದರಿಂದಾಗಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿರುವುದು ಆತಂಕಕಾರಿ ಎಂದು ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದು, ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದರೂ ಮಕ್ಕಳ ಪೋಷಕರಲ್ಲಿ ಮಾತ್ರ ಖಾಸಗಿ ಶಾಲೆಗಳ ಕುರಿತಾದ ವ್ಯಾಮೋಹ ಕಡಿಮೆಯಾಗಿಲ್ಲ. ಸರ್ಕಾರಿ ಶಾಲೆಗಳ ಉಳಿವಿಗಾಗಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಬೇಕು ಎಂದರು.ಮುಖ್ಯಅತಿಥಿಯಾಗಿದ್ದ ಉಪಸ್ಥಿತರಿದ್ದ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಟ್ಟಳ್ಳಿ ಗ್ರಾಪಂ ಅಧ್ಯಕ್ಷೆ ರಜನಿ ನಾಯ್ಕ ವಹಿಸಿದ್ದರು. ಈ ಸಂದರ್ಭದಲ್ಲಿ ಶಾಲೆ ಹಳೆ ವಿದ್ಯಾರ್ಥಿ ಹಾಗೂ ಹಿರಿಯ ಉಪನ್ಯಾಸಕರು ಡಿಐಇಟಿ ಕುಮಟಾ ಎಸ್.ಪಿ. ಭಟ್ಟ, ಸಮನ್ವಯಾಧಿಕಾರಿ ಬಿ.ಆರ್.ಸಿ. ಪೂರ್ಣಿಮಾ ಮೊಗೇರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಉಲ್ಲಾಸ ಎಸ್. ನಾಯ್ಕ, ಸಿಆರ್.ಪಿ ಜಯಶ್ರೀ ಆಚಾರಿ, ಶಾಲೆ ಎಸ್ ಡಿಎಂಸಿ ಅಧ್ಯಕ್ಷ ಅನಂತ ನಾಯ್ಕ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ರವಿ ನಾಯ್ಕ, ನಿವೃತ್ತ ಶಿಕ್ಷಕ ಎಂ.ಕೆ. ನಾಯ್ಕ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಗಂಗಾ ಮೊಗೇರ ಸ್ವಾಗತಿಸಿದರು. ಶಿಕ್ಷಕಿ ಲತಾ ನಾಯ್ಕ ವರದಿ ವಾಚಿಸಿದರು. ಶಿಕ್ಷಕ ಗಜಾನನ ನಾಯ್ಕ ವಂದಿಸಿದರು. ಶಿಕ್ಷಕರಾದ ಸುರೇಶ ಮುರುಡೇಶ್ವರ, ನಾರಾಯಣ ನಾಯ್ಕ ನಿರೂಪಿಸಿದರು.ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಿಗೆ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಳೆ ವಿದ್ಯಾರ್ಥಿಗಳಿಗೆ, ದಾನಿಗಳಿಗೆ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿ ಮತ್ತು ಮನರಂಜನಾ ಕಾರ್ಯಕ್ರಮಗಳು ಮನರಂಜಿಸಿತು.
ಭಟ್ಕಳದ ಮುಟ್ಟಳ್ಳಿ ಹಿರಿಯ ಪ್ರಾಥಮಿಕ ಶಾಲೆಯ 70ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮಿಲನವನ್ನು ಶಾಲೆಯ ಮೊದಲ ವಿದ್ಯಾರ್ಥಿ ಜಟ್ಟಪ್ಪ ನಾಯ್ಕ ಉದ್ಘಾಟಿಸಿದರು.