ಸಾರಾಂಶ
ಹೊಳೆಹೊನ್ನೂರು: ವಿದ್ಯಾರ್ಥಿಗಳಿಗೆ ಶಾಲೆ ದಿನದಿಂದಲೆ ರಕ್ತದ ಮಹತ್ವ ಹಾಗೂ ಆರೋಗ್ಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಉಚಿತ ರಕ್ತದಾನ ಹಾಗೂ ಆರೋಗ್ಯ ಶಿಬಿರ ಆಯೋಜಿಸಲಾಗಿದೆ ಎಂದು ಕೊಮ್ಮನಾಳು ಗ್ರಾಮದ ಜ್ಞಾನಸಾಗರ ಸೆಂಟ್ರಲ್ ಸ್ಕೂಲ್ ಪ್ರಾಂಶುಪಾಲ ಟಿ.ಆರ್.ಪ್ರದೀಪ ಕುಮಾರ್ ಹೇಳಿದರು.
ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಕೊಮ್ಮನಾಳು ಗ್ರಾಮದ ಜ್ಞಾನಸಾಗರ ಸೆಂಟ್ರಲ್ ಸ್ಕೂಲ್‍ನಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ಶಿವಮೊಗ್ಗ ರೋಟರಿ ರಕ್ತ ಕೇಂದ್ರದ ಸಹಯೋಗದಲ್ಲಿ ಶನಿವಾರ ನಡೆದ ಉಚಿತ ರಕ್ತದಾನ ಶಿಬಿರ ಹಾಗೂ ಮಧುಮೇಹ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರಕ್ತದಾನ, ಜೀವದಾನ ಮಾಡಿದಷ್ಟು ಮಹತ್ವದ ಪಡೆದಿದೆ. ರಕ್ತವು ಯಾವುದೇ ವಸ್ತುವಿನಿಂದ, ಪ್ರಾಕೃತಿಕವಾಗಿ ದೊರೆಯುವ ವಸ್ತು ಅಲ್ಲ. ಇದು ಒಬ್ಬ ಆರೋಗ್ಯವಂತ ಮನುಷ್ಯರಿಂದ ಮಾತ್ರ ಸಂಗ್ರಹಿಸಬಹುದಾಗಿದೆ. ಹೀಗೆ ಸಂಗ್ರಹಿಸಿದ ರಕ್ತವು ತುರ್ತು ಸಂದರ್ಭದಲ್ಲಿ ಜೀವ ಉಳಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ರಕ್ತದಾನ ಮಾಡಬೇಕು ಎಂದ ಅವರು, ಮಧುಮೇಹದ ಕುರಿತ ಭಯದ ಹೊರತಾಗಿ ಅಗತ್ಯ ಮುನ್ನಚ್ಚರಿಕೆ ಹಾಗೂ ಸೂಕ್ತ ಜೀವನ ಶೈಲಿ ಆಹಾರ ಕ್ರಮ ರೂಢಿಸಿಕೊಳ್ಳಬೇಕು ಎಂದರು.
ಶಿವಮೊಗ್ಗದ ಬಾಪೂಜಿ ಮೆಡಿಕಲ್ ಕಾಲೇಜಿನ ವೈದ್ಯ ಡಾ.ವಿವೇಕ್ ಉಡುಪ ಮಾತನಾಡಿ, ಮಧುಮೇಹ ಕಾಯಿಲೆಯ ಲಕ್ಷಣ, ಅಗತ್ಯ ಮುನ್ನೆಚ್ಚರಿಕೆ, ವೈಯಕ್ತಿಕ ಕಾಳಜಿ ಹಾಗೂ ಆರೋಗ್ಯಕರ ಜೀವನ ಶೈಲಿಯ ಕುರಿತು ವಿದ್ಯಾರ್ಥಿಗಳಿಗೆ ವಿವರ ನೀಡಿ ಜಾಗೃತಿ ಮೂಡಿಸಿದರು.ಜ್ಞಾನ ಸಾಗರ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಚ್.ಬಿ.ಪ್ರದೀಪ ಕುಮಾರ್ ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಅಧ್ಯಕ್ಷ ಎಚ್.ಜಿ.ಭೀಮಾರೆಡ್ಡಿ, ಸಂಸ್ಥೆಯ ನಿರ್ದೇಶಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಈ ಸಂದರ್ಭ ಶಾಲೆಯ 6 ರಿಂದ 10ನೇ ತರಗತಿಯ ಮಕ್ಕಳಿಗೆ ಉಚಿತ ರಕ್ತ ಗುಂಪಿನ ಮಾದರಿ ಪರೀಕ್ಷ್ಷೆ ನಡೆಸಲಾಯಿತು. ವಿದ್ಯಾರ್ಥಿನಿ ಅಕ್ಷರಿ ಪ್ರಾರ್ಥಿಸಿ, ಸಹ ಶಿಕ್ಷಕಿ ರಶ್ಮೀ ಸ್ವಾಗತಿಸಿದರು. ಶಿಕ್ಷಕಿ ಸ್ಮಿತಾ ನಿರೂಪಿಸಿ, ಶಿಕ್ಷಕಿ ಅಶ್ವಿನಿ ವಂದಿಸಿದರು.