ಸಾರಾಂಶ
ಹನ್ನೆರಡನೇ ಶತಮಾನದ ಶರಣರ ಧರ್ಮಪ್ರಸಾರ ಮತ್ತು ಧಾರ್ಮಿಕ ಚಿಂತನೆಗಳನ್ನು ನಾಡಿನ ಉದ್ದಗಲಕ್ಕೂ ಮನೆ, ಮನಗಳಿಗೆ ತಲುಪಿಸುವ ಕಾಯಕವನ್ನು ಸುತ್ತೂರು ಶ್ರೀಮಠ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶೇಖರ್ ಸಂಕೋಡನಹಳ್ಳಿ ಹೇಳಿದರು.
ಕನ್ನಡಪ್ರಭ ಅರಸೀಕೆರೆ
ಹನ್ನೆರಡನೇ ಶತಮಾನದ ಶರಣರ ಧರ್ಮಪ್ರಸಾರ ಮತ್ತು ಧಾರ್ಮಿಕ ಚಿಂತನೆಗಳನ್ನು ನಾಡಿನ ಉದ್ದಗಲಕ್ಕೂ ಮನೆ, ಮನಗಳಿಗೆ ತಲುಪಿಸುವ ಕಾಯಕವನ್ನು ಸುತ್ತೂರು ಶ್ರೀಮಠ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶೇಖರ್ ಸಂಕೋಡನಹಳ್ಳಿ ಹೇಳಿದರು. ನಗರದ ಕೋಡಿಮಠ ಬಸವೇಶ್ವರ ಪ್ರೌಢಶಾಲೆಯಲ್ಲಿ ಮಂಗಳವಾರ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಲಿಂಗೈಕ್ಯ ’ಶ್ರೀಶಿವಲಿಂಗೇಶ್ವರ ಸ್ವಾಮೀಜಿಯವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಬಸವಾದಿ ಶಿವಶರಣರು ವಚನಗಳ ಮೂಲಕ ಸಮಾಜದ ಅಂಕು, ಡೊಂಕುಗಳನ್ನು ತಿದ್ದುವ ಕೆಲಸವನ್ನು ಶತಮಾನಗಳ ಹಿಂದೆಯೇ ಮಾಡಿದ್ದಾರೆ. ಇಂತಹ ಶ್ರೇಷ್ಠ ಪರಂಪರೆಯನ್ನು ದೇಶ, ವಿದೇಶಗಳಲ್ಲಿ ಅನ್ನ, ಅಕ್ಷರ, ಅರಿವೆ, ಅರಿವಿನ ಜತೆಗೆ ಕಾಯಕ ಪ್ರಜ್ಞೆ ಹಾಗೂ ದಾಸೋಹದ ಕಲ್ಪನೆಯ ಮಹತ್ವವನ್ನು ಪರಿಚಯಿಸುವ ಕಾರ್ಯ ಸುತ್ತೂರು ಮಠ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಬಣ್ಣಿಸಿದರು.ನಿವೃತ್ತ ಪ್ರೌಢಶಾಲಾ ಮುಖ್ಯ ಶಿಕ್ಷಕ ಕೆ.ಸಿ. ನಟರಾಜು ದತ್ತಿ ಉಪನ್ಯಾಸ ನೀಡಿ, ಮಾನವೀಯ ಮೌಲ್ಯಗಳ ಪ್ರತಿಪಾದನೆ ಶರಣ ಮೊದಲ ಆದ್ಯತೆಯಾಗಿತ್ತು ಎನ್ನುವುದನ್ನು ಎಂದಿಗೂ ಮರೆಯಲಾಗದು.ಇದಕ್ಕೆ ಪೂರಕ ಎನ್ನುವಂತೆ ವೃತ್ತಿಯನ್ನಾಧರಿಸಿ ಅನುಭವಮಂಟಪ ಸ್ಥಾಪಿಸಿ ಮೇಲು, ಕೀಳು, ಬಡವ, ಬಲ್ಲಿದ ಎನ್ನುವ ತಾರತಮ್ಯವಿಲ್ಲದಂತೆ ಸಮಾಜದ ಒಳಿತಿಗೆ ತೊಡಗಿಸಿಕೊಂಡಿದ್ದು ನಮಗೆಲ್ಲರಿಗೂ ಪ್ರೇರಣೆ. ಸಮಾಜದ ಸಾಮಾಜಿಕ ಅಸಮಾನತೆ ತೊಡೆದು ಹಾಕುವ ಜತೆಗೆ ಅಜ್ಞಾನದ ಕತ್ತಲು ಕಳೆಯುವ ಕೆಲಸ ಮಾಡಿದ್ದಾರೆ. ಅಂತಹ ಶರಣ ಸಂಸ್ಕೃತಿಯನ್ನು ನಾಡಿನ ಜನರಿಗೆ ಪರಿಚಯಿಸುವ ಉದ್ದೇಶದಿಂದ ದತ್ತಿ ಉಪನ್ಯಾಸಗಳನ್ನು ಹಮ್ಮಿಕೊಂಡಿರುವುದು ಸಂತಸದ ಸಂಗತಿಯಾಗಿದೆ. ವಿದ್ಯಾರ್ಥಿಗಳು ಬಾಲ್ಯದಿಂದಲೇ ಗುರು, ಹಿರಿಯರನ್ನು ಗೌರವಿಸುವ ಜತೆಗೆ ಸಾಮಾಜಿಕ, ನೈತಿಕ ಕಳಕಳಿಯುಳ್ಳ ಮಾನವೀಯ ಮೌಲ್ಯಗಳು ಹಾಗೂ ಶರಣರ ಚಿಂತನೆಗಳನ್ನು ಅಳವಡಿಸಿಕೊಂಡಲ್ಲಿ ಬದುಕು ಸಾರ್ಥಕವಾಗಲಿದೆ ಎಂದರು.
ಚಿಕ್ಕೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಗಂಗಾಧರಸ್ವಾಮಿ ಮಾತನಾಡಿ, ಉಳಿಪೆಟ್ಟು ತಿನ್ನುವ ಕಲ್ಲು ದೇವರ ಮೂರ್ತಿಯಾಗುಯತ್ತದೆ. ದಂಡನೆಗೆ ಹೆದರಿದವರು ಕಾಯಿ ಒಡೆಯುವ ಕಲ್ಲಿನಂತಾಗಲಿದ್ದಾರೆ. ಆದ್ದರಿದ ಸತತ ಪರಿಶ್ರಮ ಹಾಗೂ ಶ್ರದ್ಧೆಯಿಂದ ಕಲಿಕೆಯಲ್ಲಿ ತೊಡಗಿಸಿಕೊಡಲ್ಲಿ ಯಶಸ್ಸು ಸಾಧಿಸಬಹುದು ಎಂದು ನಿದರ್ಶನ ಸಹಿತ ವಿವರಿಸಿದರು. ಕೋಡಿಮಠ ಪದವಿಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಡಾ.ಬಿ.ಡಿ.ಕುಮಾರ್ ಹನ್ನೆರಡನೇ ಶತಮಾನದ ಬಸವಣ್ಣ, ಅಂಬಿರ ಚೌಡಯ್ಯ,ಡೋಹರ ಕಕ್ಕಯ್ಯ ಸೇರಿದಂತೆ ಹಲವು ಶರಣರು ಹಾಗೂ ಅವರ ವಚನ ಪರಂಪರೆ ಮಹತ್ವ ಕುರಿತು ಪರಿಚಯಿಸಿದರು. ಬಸವೇಶ್ವರ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಂ.ವಿ.ಸುರೇಶ್, ಮಾತನಾಡಿ, ನಮ್ಮ ಶಾಲೆಯಲ್ಲಿ ’ಶ್ರೀಶಿವಲಿಂಗೇಶ್ವರ ಸ್ವಾಮೀಜಿಯವರ ದತ್ತಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿರುವುದು ನಿಜಕ್ಕೂ ಅರ್ಥಪೂರ್ಣ ಎಂದು ಹೇಳಿದರು. ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಪ್ರಸನ್ನಕುಮಾರ್, ಹಸಿರು ಪರಿಸರ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಎ.ಎಲ್.ಮೋಹನ್ ಕುಮಾರ್, ಎಚ್.ಡಿ.ಸೀತಾರಾಂ, ರುದ್ರೇಶ್ ಬಾಬು,ಪ್ರಧಾನ ಕಾರ್ಯದರ್ಶಿ ಡಾ.ಹರೀಶ್ ಕುಮಾರ್,ತಾಲೂಕು ಕಸಾಪ ನಿಕಟಪೂರ್ವ ಗೌರವ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ರಾಘವೇಂದ್ರ, ಹರಿಪ್ರಸಾದ್ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.