ಪ್ರತಿಯೊಬ್ಬರೂ ಸಂಘಟಿತರಾಗಿ ಸೌಲಭ್ಯ ಪಡೆದುಕೊಳ್ಳಿ

| Published : Jul 26 2024, 01:40 AM IST

ಸಾರಾಂಶ

ಹನೂರು ಜನಧ್ವನಿ ವೆಂಕಟೇಶ್ ಕಚೇರಿಯಲ್ಲಿ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ವೆಂಕಟೇಶ್ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಪದಾಧಿಕಾರಿಗಳ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಹನೂರು

ಪ್ರಧಾನಿ ನರೇಂದ್ರ ಮೋದಿ ಉತ್ತಮ ಆಡಳಿತ ನೀಡುತ್ತಿದ್ದು, ಎಲ್ಲ ವರ್ಗದವರಿಗೂ ಶಕ್ತಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಹಿಂದುಳಿದ ವರ್ಗದವರು ಮತ್ತಷ್ಟು ಸಂಘಟಿತರಾಗಬೇಕು ಎಂದು ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಜನದ್ವನಿ ಬಿ ವೆಂಕಟೇಶ್ ತಿಳಿಸಿದರು.

ಪಟ್ಟಣದ ಜನದ್ವನಿ ಬಿ ವೆಂಕಟೇಶ್ ಕಚೇರಿಯಲ್ಲಿ ಕರೆದಿದ್ದ ಹನೂರು ಮಲೆ ಮಹದೇಶ್ವರ ಹಿಂದುಳಿದ ವರ್ಗಗಳ ಮೋರ್ಚಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಶೇ.60ರಷ್ಟು ಹಿಂದುಳಿದ ವರ್ಗದ ಸಮುದಾಯದವರಿದ್ದಾರೆ. ನಾವು ನಮ್ಮ ಶಕ್ತಿ, ಒಗ್ಗಟ್ಟು ಪ್ರದರ್ಶನ ಮಾಡಿದರೆ ಯಾವುದೇ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಹಿಂದುಳಿದ ವರ್ಗದವರು ಸಂಘಟಿತರಾಗಿ ಬಿಜೆಪಿಯನ್ನು ಅಧಿಕಾರದೆಡೆಗೆ ತರಲು ಶ್ರಮಿಸಬೇಕು ಎಂದರು.

ಸಂಘಟನೆ ಕೇವಲ ಚುನಾವಣೆಗೆ ಅಷ್ಟೇ ಅಲ್ಲ. ಜನರ ಸಮಸ್ಯೆಗೂ ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಒಬಿಸಿ ಜಿಲ್ಲಾ ಸಮಾವೇಶ ಕಾರ್ಯಕ್ರಮ ಆಯೋಜನೆ ಮಾಡಿ ಲಕ್ಷಾಂತರ ಜನರನ್ನು ಸೇರಿಸಬೇಕು. ಶಕ್ತಿ ಪ್ರದರ್ಶನ ಮಾಡಿ ಸರ್ಕಾರದ ಗಮನ ಸೆಳೆದು ಸಮಸ್ಯೆ ಬಗೆಹರಿಸಲು ಕೈಜೋಡಿಸಬೇಕು ಎಂದು ಹೇಳಿದರು.

ಹಲವಾರು ವರ್ಷಗಳಿಂದ ವಾಸವಾಗಿರುವ ಗೋಪಿನಾಥಂ ಗ್ರಾಮದ 8 ಜನರಿಗೆ ಜಮೀನು ಒತ್ತುವರಿ ಸಂಬಂಧ ಅರಣ್ಯ ಇಲಾಖೆಯಿಂದ ಒತ್ತುವರಿ ಪತ್ರ ನೀಡಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಸಚಿವರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಲಾಗುವುದು. ಸಂಘಟನೆ, ಹೋರಾಟದಿಂದ ಸೌಲಭ್ಯ ಪಡೆಯಲು ಮಾತ್ರ ಸಾಧ್ಯ ಎಂದು ತಿಳಿಸಿದರು.

ಮಲೆ ಮಹದೇಶ್ವರ ಬೆಟ್ಟ ತಪ್ಪಲಿನಲ್ಲಿ ಕಳೆದ ಆರು ವರ್ಷಗಳಿಂದಲೂ ವಾಸವಾಗಿರುವ ಬೇಡಗಂಪಣ ಸಮುದಾಯವನ್ನು ಜಾತಿ ಪಟ್ಟಿಯಲ್ಲಿ ಸೇರಿಸಲು ಇದುವರೆಗೂ ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಇವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಾವೆಲ್ಲರೂ ಶಕ್ತಿ ಪ್ರದರ್ಶನ ಮಾಡಬೇಕು ಎಂದರು.

ಹಿಂದುಳಿದ ವರ್ಗಗಳ ಮೋರ್ಚಾದ ಪದಾಧಿಕಾರಿಗಳಾಗಿ ಆಯ್ಕೆಯಾದವರು ತಮಗೆ ವಹಿಸಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸಬೇಕು. ಇಲ್ಲದಿದ್ದರೆ ಅಂತಹ ಪದಾಧಿಕಾರಿಗಳನ್ನು ಬದಲಾವಣೆ ಮಾಡಲಾಗುವುದು ಎಂದು ಸೂಚನೆ ನೀಡಿದರು.

ಹನೂರು ಮಂಡಲ ಅಧ್ಯಕ್ಷ ವೃಷಭೇಂದ್ರ ಸ್ವಾಮಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಂಗಲ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಸೋಮಣ್ಣ , ಕೃಷ್ಣಪ್ಪ, ಬೇಡಗಂಪಣ ಸಮುದಾಯದ ಮುಖಂಡ ಮುರುಗೇಶ್, ವನ್ನಿ ಕುಲಕ್ಷತ್ರಿಯ, ಬೆಳ್ಳಳ್ ಗೌಂಡರ್ ಹಾಜರಿದ್ದರು.