ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಹೋರಾಟದ ಮೂಲಕ ಸಮಾಜದ ಪ್ರತಿಯೊಬ್ಬರಿಗೂ ಶಿಕ್ಷಣ, ಸಮಾನತೆಯ ಹಕ್ಕು ಕೊಟ್ಟಿದ್ದರೂ ಜಾತಿ, ಧರ್ಮದ ಹೆಸರಿನಲ್ಲಿ ಜಗಳಗಳು ನಡೆಯುತ್ತಲೇ ಇವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಬೇಸರ ವ್ಯಕ್ತಪಡಿಸಿದರು.ಪಟ್ಟಣದಲ್ಲಿ 6 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಮಂಡ್ಯ ಗೌಡರ ಜಿಲ್ಲೆಯಾದರೂ ರೈತರು, ದಲಿತರ ಹೋರಾಟದ ಸಂಘಟನೆಯೂ ಇದೆ. ಜಿಲ್ಲೆಯಲ್ಲಿ ಹೋರಾಟಗಳಿಗೆ ಮುನ್ನುಡಿ ಬರೆಯುವ ಶಕ್ತಿ ಇದೆ ಎಂದರು.
ಶಿಕ್ಷಣ, ಹೋರಾಟದ ಮಂತ್ರ ಕೊಟ್ಟರೂ ಸಾಮಾಜಿಕ, ಆರ್ಥಿಕ, ಸಮಾನತೆ ಇಲ್ಲದ ಸ್ವಾತಂತ್ರ್ಯವಿಲ್ಲ ಎಂದು ಅಂಬೇಡ್ಕರ್ ಹೇಳಿದ್ದಾರೆ. ಎಲ್ಲರಿಗೂ ಸಮಾನತೆಯ ಹಕ್ಕು ಕೊಟ್ಟಿದ್ದರೂ ಇನ್ನೂ ಜಾತಿ, ಧರ್ಮದ ಹೆಸರಲ್ಲಿ ಗಲಾಟೆಗಳ ನಡೆಯುತ್ತಿದೆ. ಇದು ನಿಲ್ಲಬೇಕಾದರೆ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಸಂವಿಧಾನ ಓದಬೇಕು. ಕೆಲ ಶಾಸಕರಿಗೆ ಸಂವಿಧಾನದ ಬಗ್ಗೆ ಗೊತ್ತೆ ಇಲ್ಲ ಎಂದರು.ಕೇಂದ್ರ ಸರ್ಕಾರ ಗೊಬ್ಬರ ಕೊಡದಿದ್ದರೆ ನಾವು ಹೇಗೆ ಕೊಡಲು ಸಾಧ್ಯ?. ಸಿದ್ದರಾಮಯ್ಯ ನಾವು ಉತ್ತಮ ಕೆಲಸ ಮಾಡಿದ್ದೇವೆ. ಎಲ್ಲೂ ಹೇಳಿಕೊಂಡಿಲ್ಲ. ಶಾಸಕರು, ಸಚಿವರು ಪಾಳೇಗಾರತನ ಮಾಡುವುದಲ್ಲ. ಸಾರ್ವಜನಿಕ ಜೊತೆ ಬೆರೆತು ನಾವು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಎಷ್ಟೋ ಕುಟುಂಬಕ್ಕೆ ಗ್ಯಾರಂಟಿ ಯೋಜನೆ ಕೊಡುತ್ತಿದೆ. ಸಿಎಂ ಸಿದ್ದರಾಮಯ್ಯ ಅವರಿಂದ ಪ್ರತಿ ಕುಟುಂಬಕ್ಕೆ 4 ರಿಂದ 5 ಸಾವಿರ ಆದಾಯ ದೊರಕುತ್ತಿದೆ. ಬಡವರಿಗೆ ಸವಲತ್ತು ಸಿಗಬಾರದು ಎನ್ನುವವರು ವಿರೋಧ ಮಾಡುತ್ತಾರೆ. ದೇಶದಲ್ಲಿ ಎಲ್ಲಾ ಪ್ರಜೆಗಳಿಗೆ ಸಂವಿಧಾನದ ಮೂಲಕ ಹಕ್ಕು ಸಿಗುವಂತಾಗಬೇಕು ಎಂದರು.ಸೆಸ್ಕ್ ಅಧ್ಯಕ್ಷ ಹಾಗೂ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಬೆಂಗಳೂರು ಸಿಲಿಕಾನ್ ಸಿಟಿಗೂ ಮೊದಲೇ ರಾಷ್ಟ್ರದಲ್ಲೇ ಶ್ರೀರಂಗಪಟ್ಟಣ ಹೆಸರಾಗಿತ್ತು. ಸಂವಿಧಾನದ ಪ್ರಕಾರ ನಾವು ಬದುಕಬೇಕು. ರಾಜ್ಯ ಸರ್ಕಾರ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಜಿಲ್ಲೆಯಲ್ಲಿ ಅಂಬೇಡ್ಕರ್ ಭವನವಾಗಿದೆ. ಈ ಪಟ್ಟಣದಲ್ಲಿ 6 ಕೋಟಿ ರು.ವೆಚ್ಚದಲ್ಲಿ ಮೈಸೂರು ಸಂಸ್ಥಾನದ ಶೈಲಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗುತ್ತಿದೆ. ಕ್ಷೇತ್ರದ ಅಭಿವೃದ್ಧಿಗೆ ನಾವು ಸದಾ ಬದ್ಧರಾಗಿರುವುದಾಗಿ ಹೇಳಿದರು.ಇದೇ ವೇಳೆ ಸಂವಿಧಾನ ಪೀಠಿಕೆ ಬೋಧನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜ್ಞಾನ ಪ್ರಕಾಶ ಸ್ವಾಮೀಜಿ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಮುದಾಯದ ಮುಖಂಡರು ಭಾಗವಹಿಸಿದ್ದರು.
ಕೆಆರ್‌ಎಸ್ ಅಣೆಕಟ್ಟೆಗೆ ಅಡಿಗಲ್ಲು ಹಾಕಿದ್ದು ಟಿಪ್ಪು: ಎಚ್.ಸಿ.ಮಹದೇವಪ್ಪಶ್ರೀರಂಗಪಟ್ಟಣ:
ಕೃಷ್ಣರಾಜಸಾಗರ ಜಲಾಶಯ (ಕನ್ನಂಬಾಡಿ) ನಿರ್ಮಾಣಕ್ಕೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕನ್ನಂಬಾಡಿ ಅಣೆಕಟ್ಟೆ ನಿರ್ಮಿಸಲು ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ದರೂ ಈ ವಿಷಯವನ್ನು ಹೇಳಲು ಯಾರಿಗೂ ಧೈರ್ಯವಿಲ್ಲ ಎಂದರು.
ಕೆಆರ್‌ಎಸ್ ಗೇಟ್ ಹೆಬ್ಬಾಗಿಲಿನಲ್ಲಿ ಈಗಲೂ ಟಿಪ್ಪು ಸುಲ್ತಾನ್ ಅವರು ಅಣೆಕಟ್ಟೆಗೆ ಅಡಿಗಲ್ಲು ಹಾಕಿರುವುದನ್ನು ಕಾಣಬಹುದು ಎಂದು ಹೇಳಿ ಮೈಸೂರು ರಾಜರ್ಷಿ ನಾಲ್ವಡಿ ಒಡೆಯರ್ ಪುಣ್ಯ ಸ್ಮರಣೆಯಂದು ಸಚಿವರು ನೀಡಿದ ಈ ಹೇಳಿಕೆ ವಿವಾದಕ್ಕೆ ಕಾರಣವಾಯಿತು.ಚರಿತ್ರೆ ಗೊತ್ತಿಲ್ಲದವರು ಚರಿತ್ರೆ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಪಟ್ಟಣದಲ್ಲಿ ಟಿಪ್ಪು ಮಸೀದಿ ಇದ್ದು, ಪಕ್ಕದಲ್ಲಿ ದೇವಸ್ಥಾನವೂ ಇದೆ. ಒಂದೆಡೆ ಅಲ್ಲ ವೋ ಅಕ್ಬರ್ ಅಂತಾರೆ, ಮತ್ತೊಂದೆಡೆ ಗಂಟೆ ಟನ್, ಟನ್ ಅಂತ ಹೊಡಿತಾರೆ. ಎರಡರಲ್ಲು ಟಿಪ್ಪು ಸುಲ್ತಾನ್ ಸಮಚಿತ್ತರಾಗಿದ್ದವರು ಎಂದರು.
ಟಿಪ್ಪು ಸಮಾಜಕ್ಕೆ ಕಂಟಕವಾಗಿದ್ದ ದೇವದಾಸಿ ಪದ್ಧತಿ ರದ್ದು ಮಾಡಿದ್ದರು. ಜೊತೆಗೆ ಅವರ ಕಾಲದಲ್ಲಿ ಒಂದೇ ಒಂದು ಇಂಚು ಭೂಮಿಯನ್ನು ಉಳ್ಳವರಿಗೆ ಕೊಟ್ಟಿರಲಿಲ್ಲ. ದೇಶಕ್ಕೆ (ಸಿರಿಕಲ್ಚರ್) ರೇಷ್ಮೆ ತಂದರು. ರಣರಂಗದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ದೊಡ್ಡ ಸ್ವತಂತ್ರ ಸೇನಾನಿ. ಇದನ್ನು ಅರ್ಥ ಮಾಡಿಕೊಳ್ಳದೆ ಸ್ವತಂತ್ರ ಚಳವಳಿಗಾರ ವಿರುದ್ಧ ಮಾತನಾಡುತ್ತಾರೆ ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.