ಸಾರಾಂಶ
ಉತ್ತಮ ಮತ್ತು ಗುಣಮಟ್ಟದ ಆಹಾರ ಸೇವನೆ ಪ್ರತಿಯೊಬ್ಬರ ಹಕ್ಕಾಗಿದ್ದು, ಆರೋಗ್ಯಪೂರ್ಣ ಜೀವನ ಸಾಗಿಸಲು ಪೌಷ್ಟಿಕ ಆಹಾರದ ಅರಿವು ಅಗತ್ಯವಾಗಿದೆ ಎಂದು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಕಿರಣ್ ಕುಮಾರ್ ಡಿ. ವಡಿಗೇರಿ ಹೇಳಿದರು. ಆರೋಗ್ಯಪೂರ್ಣ ಜೀವನ ಶೈಲಿಗೆ ಪೌಷ್ಟಿಕ ಆಹಾರ ಒಂದು ಪ್ರಮುಖ ಹಕ್ಕು. ಅಪೌಷ್ಟಿಕತೆ ಕೇವಲ ಆಹಾರದ ಕೊರತೆಯಿಂದ ಮಾತ್ರವಲ್ಲ, ಅಪ್ರಾಪ್ತ ವಯಸ್ಸಿನ ವಿವಾಹದಿಂದಲೂ ಬರುತ್ತದೆ. 18 ವರ್ಷ ತುಂಬುವ ಮುನ್ನ ಹೆಣ್ಣುಮಕ್ಕಳನ್ನು ವಿವಾಹ ಮಾಡುವುದು ಕಾನೂನಾತ್ಮಕ ಅಪರಾಧವಾಗಿದ್ದು, ಅದರಿಂದ ದೈಹಿಕ–ಮಾನಸಿಕ ಸಮಸ್ಯೆಗಳು ಎದುರಾಗುತ್ತವೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಉತ್ತಮ ಮತ್ತು ಗುಣಮಟ್ಟದ ಆಹಾರ ಸೇವನೆ ಪ್ರತಿಯೊಬ್ಬರ ಹಕ್ಕಾಗಿದ್ದು, ಆರೋಗ್ಯಪೂರ್ಣ ಜೀವನ ಸಾಗಿಸಲು ಪೌಷ್ಟಿಕ ಆಹಾರದ ಅರಿವು ಅಗತ್ಯವಾಗಿದೆ ಎಂದು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಕಿರಣ್ ಕುಮಾರ್ ಡಿ. ವಡಿಗೇರಿ ಹೇಳಿದರು.ತಾಲೂಕಿನ ಬಾಣಾವರ ಹೋಬಳಿ ಶಾನೆಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿಯಲ್ಲಿ ವಿಶ್ವ ಪೌಷ್ಟಿಕ ಆಹಾರ ಸಪ್ತಾಹದ ಅಂಗವಾಗಿ ನಡೆದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜನರಿಗೆ ಕಾನೂನು ಅರಿವು ಮೂಡಿಸುವುದು ಸಮಿತಿಯ ಮುಖ್ಯ ಉದ್ದೇಶ. ಪಿಎಸ್ಐ ಸುರೇಶ್ ಸಿ.ಎಸ್ ಮಾತನಾಡಿ, ಹಳ್ಳಿಗಳಲ್ಲಿ ಅಣ್ಣತಮ್ಮಂದಿರ ಜಗಳಗಳು ಹಾಗೂ ಆಸ್ತಿ ವಿವಾದಗಳಿಂದ ಪ್ರಕರಣಗಳು ಹೆಚ್ಚಾಗುತ್ತಿವೆ. ಸಹಕಾರದಿಂದ ಬದುಕಿದರೆ ಸಮಾಜದಲ್ಲಿ ನೆಮ್ಮದಿ ನೆಲೆಸುತ್ತದೆ ಎಂದು ಹೇಳಿದರು.
ವಕೀಲ ಟಿ.ಟಿ. ವಿರೂಪಾಕ್ಷಪ್ಪ ಮಾತನಾಡಿ, ಕಾನೂನು ಸೇವಾ ಸಮಿತಿಗಳ ಮೂಲಕ ಹಿಂದುಳಿದ ಹಾಗೂ ಮಧ್ಯಮ ವರ್ಗದವರಿಗೆ ಉಚಿತ ಕಾನೂನು ನೆರವು ದೊರೆಯುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ವಿಳಂಬ, ವಸ್ತು ಖರೀದಿ–ಮಾರಾಟದ ಮೋಸಗಳಂತಹ ಸಂದರ್ಭಗಳಲ್ಲಿ ಸಹ ಸಮಿತಿಯ ನೆರವು ಪಡೆಯಬಹುದು ಎಂದರು.ಕಾರ್ಯಕ್ರಮದಲ್ಲಿ ಶಾನೆಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯರಾಮ್, ವಕೀಲರ ಸಂಘದ ಅಧ್ಯಕ್ಷ ಸದಾನಂದ, ಕಾರ್ಯದರ್ಶಿ ಎಸ್. ಪ್ರಕಾಶ್, ಶಿಕ್ಷಕರು, ಆರೋಗ್ಯ ಇಲಾಖೆ ಅಧಿಕಾರಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.