ಸಾರಾಂಶ
-ನೂತನ ಗ್ರಾಮ ಘಟಕ ಉದ್ಘಾಟನೆ, ರೈತರಿಗೆ ಶಾಲು ದೀಕ್ಷೆ ಕಾರ್ಯಕ್ರಮದಲ್ಲಿ ವಿಶ್ವರಾಧ್ಯ ಮಹಾಸ್ವಾಮೀಜಿ
------ಕನ್ನಡಪ್ರಭ ವಾರ್ತೆ ವಡಗೇರಾ
ದೇಶಕ್ಕೆ ಅನ್ನ ನೀಡುವ ರೈತನೇ ನಿಜವಾದ ದೇವರು, ರೈತರನ್ನು ಪ್ರತಿಯೊಬ್ಬರು ಗೌರವಿಸಿ, ಬೆಂಬಲಿಸಬೇಕು. ದೇವರು ಮುನಿಸಿಕೊಂಡರೆ ಬದುಕಬಹುದು. ಆದರೆ, ರೈತ ಮುನಿಸಿಕೊಂಡರೆ ಬದುಕಲು ಸಾಧ್ಯವಿಲ್ಲ ಎಂದು ವಿಶ್ವರಾಧ್ಯ ಮಹಾಸ್ವಾಮೀಜಿ ಚಟ್ನಳ್ಳಿ ಹೇಳಿದರು.ತಡಬಿಡಿ ಗ್ರಾಮದಲ್ಲಿ ನಡೆದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ)ದ ನೂತನ ಗ್ರಾಮ ಘಟಕ ಉದ್ಘಾಟನೆ ಹಾಗೂ ರೈತರಿಗೆ ಶಾಲು ದೀಕ್ಷೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ರೈತನ ಬೆಳೆಗೆ ಯಾರೂ ಚೌಕಾಸಿ ಮಾಡಬಾರದು. ಅದರ ಹಿಂದೆ ರೈತರ ಶ್ರಮ ಹೆಚ್ಚಿರುತ್ತದೆ. ರೈತರ ಉತ್ಪನ್ನಗಳನ್ನು ಖರೀದಿ ಮಾಡುವ ದಲ್ಲಾಳಿಗಳು ಬೆಲೆ ನಿಗದಿ ಮಾಡಿ ಮಾರಾಟ ಮಾಡುತ್ತಾರೆ. ಆದರೆ, ಅದೇ ರೈತ ಬೆಳೆದ ಬೆಳೆಗಳಿಗೆ ಬೆಂಬಲ ನಿಗದಿ ಮಾಡಿಕೊಳ್ಳುವ ಹಕ್ಕು ರೈತನಿಗೆ ಇಲ್ಲದಿರುವುದು ದುರದೃಷ್ಟಕರ ಎಂದರು.ಸರ್ಕಾರಗಳು ಗ್ಯಾರಂಟಿಗಳ ರೀತಿಯಲ್ಲಿ ರೈತರಿಗೆ ಬೆಂಬಲ ಬೆಲೆ, ಗ್ಯಾರೆಂಟಿ ಘೋಷಿಸುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.
ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಸಂಘಟನೆಯ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೆ ರೈತರ ಪರ ಹೋರಾಟಗಳಿಗೆ ಕಂಕಣಬದ್ಧರಾಗುವಂತೆ ತಿಳಿಸಿದರು.ಪ್ರತಿಯೊಂದು ಸರ್ಕಾರ ಜನಪ್ರತಿನಿಧಿಗಳು ರೈತರನ್ನು ಕಡೆಗಣಿಸುತ್ತಲೆ ಇದ್ದಾರೆ. ರೈತರ ಪ್ರಮುಖ ಬೇಡಿಕೆಗಳನ್ನು ಈಡೇರಿಸದೆ ರೈತರ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಈಗಾಗಲೇ ಹೆಚ್ಚು ಮಳೆಹಾನಿಯಿಂದ ಹತ್ತಿ, ತೊಗರಿ ಬೆಳೆಗಳು ಹಾಳಾಗಿದ್ದು, ಅಧಿಕಾರಿಗಳು ರೈತರಿಗೆ ಕೂಡಲೇ ಪರಿಹಾರ ಒದಗಿಸುವ ಕಾರ್ಯಕ್ಕೆ ಮುಂದಾಗಬೇಕು. ರೈತರಿಗೆ ಸಂಬಂಧಿಸಿದ ಸರ್ಕಾರಿ ಇಲಾಖೆಯ ಕೆಲಸ ಕಾರ್ಯಗಳನ್ನು ಸಕಾಲದಲ್ಲಿ ಮಾಡಿಕೊಡಬೇಕು. ವಿಳಂಬ ಮಾಡಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಸಿಂಗರಿಸಿದ ಎತ್ತಿನಬಂಡಿಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಹಾಗೂ ಚಟ್ನಳ್ಳಿಯ ಶ್ರೀಗಳನ್ನು ಕೂರಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣಗೌಡ ಹಗರಟಗಿ ಮಾತನಾಡಿದರು. ಗ್ರಾಮ ಘಟಕದ ಅಧ್ಯಕ್ಷರಾಗಿ ದೇವಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಗ್ರಾಮದ ಹಿರಿಯರಾದ ಮುನ್ನಯ್ಯ ಸ್ವಾಮಿ, ರಾಜ್ಯ ಕಾರ್ಯದರ್ಶಿ ನೂರ್ ಅಹ್ಮದ್, ಕಲಬುರಗಿಯ ಜಿಲ್ಲಾಧ್ಯಕ್ಷ ಪ್ರಶಾಂತಗೌಡ, ಬಸನಗೌಡ ಮಾಲಿ ಪಾಟೀಲ್, ಶರಣಪ್ಪ ವಾಗಣಿಗೇರಿ, ವೆಂಕೂಬ ಕಟ್ಟಿಮನಿ, ಶಿವಶರಣಪ್ಪ ಸಾಹುಕಾರ್ , ಮಹಿಪಾಲ್ ರೆಡ್ಡಿ, ಶರಣಪ್ಪ ಸಾಹುಕಾರ್, ಹಳ್ಳೆಪ್ಪ ತೇಜೇರ, ಮಲ್ಲು ನಾಟೇಕಾರ, ಸತೀಶ್ ಪೂಜಾರಿ ಇದ್ದರು.------
11ವೈಡಿಆರ್4: ವಡಗೇರಾ ತಾಲೂಕಿನ ತಡಬಿಡಿ ಗ್ರಾಮದಲ್ಲಿ ನಡೆದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ)ದ ನೂತನ ಗ್ರಾಮ ಘಟಕ ಉದ್ಘಾಟನೆ ಹಾಗೂ ರೈತರಿಗೆ ಶಾಲು ದೀಕ್ಷೆ ಕಾರ್ಯಕ್ರಮ ಜರುಗಿತು.