ಪರಮಾತ್ಮನ ದೃಷ್ಟಿಯಲ್ಲಿ ಎಲ್ಲರೂ ಸಮಾನರು- ಸುದೇಶ್ ದೀದಿ

| Published : May 23 2025, 12:25 AM IST

ಸಾರಾಂಶ

ಪ್ರಪಂಚದ ೧೪೦ ದೇಶಗಳಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಆಧ್ಯಾತ್ಮಿಕ, ನೈತಿಕ ಹಾಗೂ ಮೌಲಿಕ ಶಿಕ್ಷಣದ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದೆ.

ಈಶ್ವರೀಯ ವಿಶ್ವವಿದ್ಯಾಲಯದ ಶಿವಧ್ಯಾನ ಮಂದಿರದ ಲೋಕಾರ್ಪಣೆಕನ್ನಡಪ್ರಭ ವಾರ್ತೆ ಸಂಡೂರು

ಪರಮಾತ್ಮನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಪ್ರಪಂಚದ ೧೪೦ ದೇಶಗಳಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಆಧ್ಯಾತ್ಮಿಕ, ನೈತಿಕ ಹಾಗೂ ಮೌಲಿಕ ಶಿಕ್ಷಣದ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದೆ ಎಂದು ಈಶ್ವರೀಯ ವಿಶ್ವವಿದ್ಯಾಲಯದ ಸಹ ಆಡಳಿತಾಧಿಕಾರಿ ಬ್ರಹ್ಮಕುಮಾರಿ ಸುದೇಶ್ ದೀದಿಜಿ ತಿಳಿಸಿದರು.

ಪಟ್ಟಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಿವಧ್ಯಾನ ಮಂದಿರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಸಂಸ್ಥೆಯು ೨೦೨೫-೨೬ನೇ ವರ್ಷದಲ್ಲಿ ಮೆಡಿಟೇಷನ್ ಫಾರ್ ಯೂನಿಟಿ ಆ್ಯಂಡ್ ಟ್ರಸ್ಟ್ ಎಂಬ ಧ್ಯೇಯ ಹೊಂದಿದೆ. ಪಾಲಕರು ಹಾಗೂ ಗುರುಗಳಿಂದ ಸಂಸ್ಕಾರ, ಜ್ಞಾನ, ಸಚ್ಛಿದಾನಂದ ಪಡೆದು ಉತ್ತಮ ಜೀವನವನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು ಎಂದರು.

ಬ್ರಹ್ಮಾಕುಮಾರ್ ಡಾ. ಬಸವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಪರಮಾತ್ಮನ ಸತ್ಯ ಸಂದೇಶ ಸಾರುವುದು, ಸೃಷ್ಟಿಯ ಆದಿ, ವರ್ತಮಾನ, ಅಂತ್ಯ, ತ್ರಿಕಾಲ ಹಾಗೂ ತ್ರಿಲೋಕದ ಜ್ಞಾನವನ್ನು ಹಂಚುವುದು, ನೈತಿಕ, ಆಧ್ಯಾತ್ಮಿಕ ಹಾಗೂ ಮೌಲ್ಯಯುತ ಶಿಕ್ಷಣ ನೀಡುವುದೇ ಈಶ್ವರೀಯ ವಿಶ್ವವಿದ್ಯಾಲಯದ ಕಾರ್ಯವಾಗಿದೆ. ಪರಮಾತ್ಮನು ಜೋತಿರ್ಲಿಂಗ ಸ್ವರೂಪನಾಗಿದ್ದಾನೆ. ಜಗತ್ತಿನಲ್ಲಿ ಅತೃಪ್ತಿ, ಅಶಾಂತಿ, ಅರಾಜಕತೆ ಕಂಡು ಬರುತ್ತಿದೆ. ಬಹಳ ಜನರು ಮಾನಸಿಕವಾಗಿ ಜರ್ಜರಿತರಾಗಿದ್ದಾರೆ. ಆದ್ದರಿಂದ ಈಶ್ವರೀಯ ವಿಶ್ವವಿದ್ಯಾಲಯ ಮಾನವ ದೇವನಾಗುವ ಶಿಕ್ಷಣವನ್ನು ನೀಡುತ್ತಿದೆ. ಮಾನವೀಯ ಮೌಲ್ಯಗಳನ್ನು ಸಾರುತ್ತಿದೆ. ಜನತೆ ಉತ್ತಮ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದರು.

ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ವೀಣಾಜಿ ಮಾತನಾಡಿ, ಬಾಹ್ಯ ಉನ್ನತಿಯ ಜೊತೆಗೆ ಆಂತರಿಕ ಉನ್ನತಿಯನ್ನು ಸಾಧಿಸಲು ಸಂಸ್ಥೆ ಪ್ರಯತ್ನಿಸುತ್ತಿದೆ. ದೇವನೊಬ್ಬನೇ ಎಂಬ ಸತ್ಯವನ್ನು ಸಾರುತ್ತಿದೆ. ದೇವರ ನಿಜ ಸ್ವರೂಪವನ್ನು ಜನತೆಗೆ ಪರಿಚಯಿಸುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ ಎಂದರು.

ಜೆಎಸ್‌ಡಬ್ಲ್ಯೂ ವಿಜಯನಗರ ವರ್ಕ್ಸ್‌ನ ಹಿರಿಯ ಉಪಾಧ್ಯಕ್ಷ ರಾಲ್ಫ್ ಸುನಿಲ್ ಮಾತನಾಡಿದರು. ಬಿ.ಕೆ. ನಿರ್ಮಲಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಸಂಡೂರಿನ ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿ ಆಶೀರ್ವಚನ ನೀಡಿದರು.

ಬಿ.ಕೆ. ಶಾಂತಕ್ಕ ಸ್ವಾಗತಿಸಿದರು. ಬಿ.ಕೆ. ಚಂದ್ರಕಲಾಜಿ ಕಾರ್ಯಕ್ರಮ ನಿರೂಪಿಸಿದರು. ಬಿ.ಕೆ. ನಾಗವೇಣಿ ವಂದಿಸಿದರು. ಕಾರ್ಯಕ್ರಮದಲ್ಲಿ ಬಿ.ಕೆ. ಶೀಲಾಜಿ, ವಕೀಲರಾದ ನಾಗರಾಜ ಗುಡೆಕೋಟೆ, ಅಕ್ಕನ ಬಳಗದ ಅಧ್ಯಕ್ಷೆ ಜ್ಯೋತಿ ನಾಗರಾಜ ಗುಡೆಕೋಟೆ, ಎಸ್.ಬಿ.ಐ. ಬ್ಯಾಂಕ್ ವ್ಯವಸ್ಥಾಪಕ ಕುಮಾರ್ ಪಿ.ರಾಯಮಾನೆ, ಡಾ. ಕಿರಣ್, ಚಿದಂಬರ ನಾನಾವಟೆ, ಬಿ.ಕೆ. ಕಮಲಾಕ್ಷಿ, ಬಿ.ಕೆ. ರಾಜೇಶ್ವರಿ, ಬಿ.ಕೆ. ಶಶಿಕಲಾ, ಬಿ.ಕೆ. ಲತಕ್ಕ, ಕೆ.ಹೆಚ್. ಶಂಕರ್ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿನ ಈಶ್ವರೀಯ ವಿಶ್ವವಿದ್ಯಾಲಯದ ಹಲವು ಸದಸ್ಯರು ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಜೋತಿರ್ಲಿಂಗಗಳನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಭರತ ನಾಟ್ಯ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಿದರು.