ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಶಿಸ್ತು, ಬದ್ಧತೆ, ನೈತಿಕತೆ, ಪರೋಪಕಾರದಂಥ ಸಕಾರಾತ್ಮಕ ಗುಣಗಳನ್ನು ಶಿಬಿರಾರ್ಥಿಗಳು ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜದ ಏಳ್ಗೆಗಾಗಿ ಹಗಲಿರುಳು ದುಡಿದು ಸದೃಢ ಸಮಾಜ ನಿರ್ಮಾಣದಲ್ಲಿ ಪಾತ್ರ ವಹಿಸಬೇಕು ಎಂದು ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ ಹೇಳಿದರು.ಶಿರಾ ತಾಲೂಕಿನ ದೊಡ್ಡ ಸೀಬಿಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ 1 ಮತ್ತು 2 ರ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ವಿದ್ಯಾರ್ಥಿಗಳಲ್ಲಿ ದೇಶಕ್ಕಾಗಿ ಸಮರ್ಪಣಾ ಮನೋಭಾವ, ನಾಯಕತ್ವ, ಸಾಮರಸ್ಯ, ಸಹಬಾಳ್ವೆ, ಸಮಾನತೆಯಂತಹ ಉತ್ತಮ ಗುಣಗಳನ್ನು ಬೆಳೆಸುತ್ತವೆ. ಉಪಕಾರವನ್ನು ಮಾಡುವುದರ ಮೂಲಕ ಜೀವನದ ಸಾರ್ಥಕತೆಯನ್ನು ಮೆರೆಯಬೇಕು ಎಂದು ತಿಳಿಸಿದರು.ಹೆಬ್ಬೂರಿನ ಜಾನಪದ ಗಾಯಕಿ ಅಕ್ಕಮ್ಮ ಮತ್ತು ತಂಡದವರು ಜಾನಪದ ಗೀತೆಗಳನ್ನು ಹಾಡಿದರು. ಸೀಬಿ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಲಕ್ಕಮ್ಮ, ಉಪಾಧ್ಯಕ್ಷೆ ನಾಗರತ್ನಮ್ಮ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳಾದ ಧರಣೇಂದ್ರ, ಡೈಸನ್, ಇನ್ನಿತರರು ಉಪಸ್ಥಿತರಿದ್ದರು.
ಏಳು ದಿನಗಳ ಕಾಲ ನಡೆಯುವ ಶಿಬಿರದಲ್ಲಿ- ಮಾದಕ ವ್ಯಸನ ಮತ್ತು ಸಮುದಾಯ, ದತ್ತು ಸ್ವೀಕಾರ ಮತ್ತು ಎಚ್.ಐ.ವಿ./ಏಡ್ಸ್ ಕುರಿತು ಅರಿವು, ಕಾನೂನು ಅರಿವು ಮತ್ತುರಸ್ತೆ ಸುರಕ್ಷತೆ, ಸಾಮಾಜಿಕ ನ್ಯಾಯ ಮತ್ತು ಮಹಿಳೆಯರ ಹಕ್ಕುಗಳು, ಗ್ರಾಮೀಣಾಭಿವೃದ್ಧಿಯಲ್ಲಿ ವ್ಯಕ್ತಿಯ ಪಾತ್ರ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ವ್ಯವಸ್ಥೆ, ವ್ಯಸನ ಮುಕ್ತ ಸಮಾಜ, ಹವಾಗುಣ ಬದಲಾವಣೆ ಮತ್ತು ಸಮಾಜ, ನಾವು ಮತ್ತು ನಮ್ಮಆಹಾರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ಹಾಗೂ ಉಚಿತ ಆರೋಗ್ಯ, ಶ್ರವಣದೋಷ, ನೇತ್ರತಪಾಸಣೆ, ಜಾನುವಾರು ತಪಾಸಣೆ, ಅಗ್ನಿ ಅವಘಡಗಳು ಮತ್ತು ಸುರಕ್ಷತೆ ಕುರಿತು ಅರಿವು, ಗ್ರಾಮೀಣ ಸಹಭಾಗಿತ್ವ ಪ್ರಾತ್ಯಕ್ಷಿಕೆ, ಗಿಡ ವಿತರಣೆ ಕಾರ್ಯಕ್ರಮಗಳು ನಡೆಯಲಿವೆ.