ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತಿದ್ದು, ಸ್ವಚ್ಛತೆ ಕಾರ್ಯಕ್ಕೆ ಎಲ್ಲರೂ ಕೈಜೋಡಿಸುವ ಅಗತ್ಯವಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.ಐಹೊಳೆ ಸ್ಮಾರಕಗಳ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ವರೆಗೆ ಸ್ವಚ್ಛತಾ ಹೀ ಸೇವಾ ವಿಶೇಷ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನರಲ್ಲಿ ನೈರ್ಮಲ್ಯ ಶುಚಿತ್ವ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಈ ಪಾಕ್ಷಿಕ ಆಂದೋಲನವನ್ನು ಹಮ್ಮಿಕೊಂಡಿದೆ. ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಂಡಾಗ ಮಾತ್ರ ನಮ್ಮ ದೇಶ ಸ್ವಚ್ಛ ಹಾಗೂ ಸುಂದರವಾಗಿಡಲು ಸಾಧ್ಯವೆಂದರು.
ಎಲ್ಲರೂ ಪಾಲ್ಗೊಳ್ಳಿ:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಳೆದ 2014 ರಿಂದ 10 ವರ್ಷಗಳ ಕಾಲ ಸ್ವಚ್ಛತಾ ಅಭಿಯಾನ ಕಾರ್ಯ ನಡೆಸಿದ್ದಾರೆ. ಈ ಸ್ವಚ್ಛ ಭಾರತ ಅಭಿಯಾನದ 10ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಈ ಯೋಜನೆಯ ಸಾಧನೆಯ ಮೈಲಿಗಲ್ಲನ್ನು ಗೌರವಿಸಲು ಸ್ವಚ್ಛತಾ ಹೀ ಸೇವಾ ಅಭಿಯಾನವನ್ನು ಸ್ವಭಾವ್ ಸ್ವಚ್ಛತಾ ಸಂಸ್ಕಾರ ಎಂಬ ಧ್ಯೇಯದೊಂದಿಗೆ ಆಚರಿಸಲಾಗುತ್ತಿದೆ. ಈ ಆಂದೋಲನದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದರು.
ಗಾಂಧೀಜಿ, ಮೋದಿ ಕಲ್ಪನೆ ಸಾಕಾರಗೊಳಿಸೋಣ:ಪ್ರಕೃತಿ ರಕ್ಷಣೆ ಮಾಡಿದರೆ, ಅದು ನಮ್ಮನ್ನು ರಕ್ಷಣೆ ಮಾಡುತ್ತದೆ ಎಂಬ ಕಲ್ಪನೆ ನಮ್ಮಲ್ಲಿ ಬರಬೇಕು. ತ್ಯಾಜ್ಯ ಆಗದಂತೆ ಮುಂಜಾಗ್ರತಾ ವಹಿಸಬೇಕಿದೆ. ಪೇಪರ್ ಮತ್ತು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿದಲ್ಲಿ ತ್ಯಾಜ್ಯ ಕಡಿಮೆ ಆಗುತ್ತದೆ ಎಂಬ ಕಲ್ಪನೆಯ ಮೂಲಕ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ಪರಿಸರ ಸ್ವಚ್ಛಗೊಳಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಈ ಅಭಿಯಾನ ನಡೆಸಲಾಗುತ್ತಿದೆ. ಆದ್ದರಿಂದ ಗಾಂಧೀಜಿ ಅವರ ಕನಸು, ಪ್ರಧಾನಮಂತ್ರಿ ಮೋದಿ ಅವರ ಕಲ್ಪನೆಯನ್ನು ಎಲ್ಲರೂ ಸಾಕಾರಗೊಳಿಸೋಣ ಎಂದರು.
ಸ್ವಚ್ಛತೆ ನಮ್ಮೆಲ್ಲರ ಕರ್ತವ್ಯ:ಸ್ವಚ್ಛತೆ ಕುರಿತು ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು, ಸ್ವಚ್ಛತೆ ಎಂದರೆ ಆರೋಗ್ಯ. ಆರೋಗ್ಯವಂತ ಬದುಕಿಗೆ ಸ್ವಚ್ಛತೆಯ ಪರಿಕಲ್ಪನೆ ತುಂಬ ಅವಶ್ಯಕತೆ ಇದೆ. ಸ್ವಾತಂತ್ರ್ಯ ಪೂರ್ವದಿಂದ ನಮ್ಮ ದೇಶದ ರಾಷ್ಟ್ರಪಿತ ಗಾಂಧೀಜಿ ಅವರು ತಮ್ಮ ಜೀವನ ವಿಧಾನದಲ್ಲೇ ಸ್ವಚ್ಛತೆ ಪರಿಪಾಲನೆ, ತಾವೇ ಸ್ವಚ್ಛತಾ ಸೈನಿಕರಾಗಿ ಕೆಲಸ ಮಾಡಿದ್ದಾರೆ. ಅವರ ಈ ಆದರ್ಶ ಮಕ್ಕಳಲ್ಲಿ ಬರಬೇಕಿದೆ. ಸ್ವಚ್ಛತೆ ಮಾಡುವುದು ಕಡಿಮೆ ಮಟ್ಟದ ಕೆಲಸ ಅಲ್ಲ. ಸ್ವಚ್ಛತೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ತಪಾಸಣೆಗೆ ಚಾಲನೆ ನೀಡಲಾಯಿತು. ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಮುಖ್ಯ ಯೋಜನಾಧಿಕಾರಿ ಪುನೀತ್, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ, ತಹಸೀಲ್ದಾರ್ ನಿಂಗಪ್ಪ ಬಿರಾದಾರ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜಿ.ಎಸ್.ಹಿತ್ತಲಮನಿ, ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ, ಐಹೊಳೆ ಗ್ರಾ.ಪಂ ಅಧ್ಯಕ್ಷ ಹನಮಂತ ಆಡಿನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.----
ಬಾಕ್ಸ್ತಾರಬಸವ ಗುಡಿ ಆವರಣದಲ್ಲಿ ಸ್ವಚ್ಛತಾ ಕಾರ್ಯ
ಐಹೊಳೆ ಐತಿಹಾಸಿಕ ತಾಣಗಳಲ್ಲಿ ಒಂದಾದ ತಾರಬಸವ ಗುಡಿಯ ಆವರಣವನ್ನು ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿ.ಪಂ ಸಿಇಒ ಶಶಿಧರ ಕುರೇರ, ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ, ತಹಸೀಲ್ದಾರ್ ನಿಂಗಪ್ಪ ಬಿರಾದಾರ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸೇರಿ ಸ್ವಚ್ಛತಾ ಕಾರ್ಯ ಕೈಗೊಂಡರು. ಅಲ್ಲದೇ ಗುಡಿಯ ಮುಂದೆ ಇರುವ ಕಲ್ಯಾಣಿ ಸ್ವಚ್ಛತೆ ಕ್ರಮವಹಿಸಲು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.----
ಕೋಟ್ನಮ್ಮ ಕಸ ನಿರ್ವಹಣೆಗೆ ನಾವೇ ಹೊಣೆಗಾರರು ಎಂಬ ಪ್ರಜ್ಞೆ ನಮ್ಮಲ್ಲಿ ಬರಬೇಕು. ವರ್ಷದ ಪ್ರತಿ ದಿನವೂ ನಡೆಯುವ ಕೆಲಸವಾಗಿದ್ದು, ಈ ಒಂದು ಪಾಕ್ಷಿಕ ಆಂದೋಲನದಲ್ಲಿ ಸ್ವಚ್ಛತೆ ಅರಿವು ಮೂಡಿಸಬೇಕಿದೆ. ಸ್ವಚ್ಛತೆ ಇದ್ದಲ್ಲಿ ಸೌಂದರ್ಯ, ಆರೋಗ್ಯ ಇರುತ್ತಿದ್ದು, ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸುವ ಅಗತ್ಯವಿದೆ.
-ಜಾನಕಿ ಕೆ.ಎಂ ಜಿಲ್ಲಾಧಿಕಾರಿ