ಸಾರಾಂಶ
ಒಟ್ಟು 172.32 ಕೆಜಿ ಮಾದಕ ದ್ರವ್ಯಗಳ ನಾಶ:ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ 112.695 ಗ್ರಾಂ ಗಾಂಜಾ, ಹಾಶಿಸ್ ಆಯಿಲ್ 5 ಲೀಟರ್, ಚರಸ್ 59.620 ಕೆಜಿ, ಎಂಡಿಎಂಎ, 0.012 ಗ್ರಾಂ, ಸೇರಿದಂತೆ ಒಟ್ಟು 172.32 ಕೆಜಿ ಮಾದಕ ದ್ರವ್ಯಗಳನ್ನು ನಾಶಪಡಿಸಲಾಯಿತು.
ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಮಾದಕ ವಸ್ತುಗಳ ವಿರುದ್ಧ ಸಮಾಜ ಮೆಟ್ಟಿ ನಿಲ್ಲಬೇಕು. ಸಮಾಜ ಮತ್ತು ಪೋಷಕರು ಮಾದಕ ವಸ್ತು ನಿರ್ಮೂಲನೆಗೆ ಮುಖ್ಯ ಪಾತ್ರ ವಹಿಸುತ್ತಾರೆ. ವ್ಯಸನಿಗಳನ್ನು ಗುರುತಿಸಿ ಅವರನ್ನು ಮಾದಕ ವ್ಯಸನ ಮುಕ್ತರಾಗಿಸುವ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ತಿಳಿಸಿದರು.ದಾಬಸ್‍ಪೇಟೆ ಕೈಗಾರಿಕಾ ಪ್ರದೇಶದ ರಾಮ್ಕಿ ಕಂಪನಿಯಲ್ಲಿ ಮಾದಕ ದ್ರವ್ಯಗಳನ್ನು ನಾಶಪಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈಗಾಗಲೇ ಜಿಲ್ಲಾಮಟ್ಟದಲ್ಲಿ ಮಾದಕ ವ್ಯಸನಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದು, ಮುಖ್ಯವಾಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಇಂತಹ ವ್ಯಸನಗಳಿಗೆ ಮುಂದಾಗುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ, ಶಾಲಾ ಕಾಲೇಜುಗಳಲ್ಲಿ ಮಾದಕ ವ್ಯಸನಗಳ ದುಷ್ಪರಿಣಾಮಗಳ ಬಗ್ಗೆ ಹಲವಾರು ಸಾಮಾಜಿಕ ಸಂಘ ಸಂಸ್ಥೆಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಹೇಳಿದರು.ಬೆಂಗ್ರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಮಾತನಾಡಿ, ಜಿಲ್ಲಾ ಪೊಲೀಸರು ತಮ್ಮ ಕಾರ್ಯಾಚರಣೆ ಮೂಲಕ ವಶಪಡಿಸಿಕೊಂಡಿರುವ ಮಾದಕ ದ್ರವ್ಯಗಳನ್ನು ನ್ಯಾಯಾಲಯದ ಆದೇಶ ಪಡೆದು ನಾಶಪಡಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಡ್ರಗ್ಸ್ ದಂಧೆ ವಿಶ್ವದ ಜನ ಸಮುದಾಯದಲ್ಲಿ ಆತಂಕ ಮೂಡಿಸಿದೆ. ಮಾದಕ ವಸ್ತುಗಳು ಇಡೀ ಸಮಾಜವನ್ನು ನಾಶ ಮಾಡುತ್ತಿವೆ. ವ್ಯಸನ ಮುಕ್ತ ಕರ್ನಾಟಕಕ್ಕೆ ನಾವೆಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು.
ಒಟ್ಟು 172.32 ಕೆಜಿ ಮಾದಕ ದ್ರವ್ಯಗಳ ನಾಶ:ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ 112.695 ಗ್ರಾಂ ಗಾಂಜಾ, ಹಾಶಿಸ್ ಆಯಿಲ್ 5 ಲೀಟರ್, ಚರಸ್ 59.620 ಕೆಜಿ, ಎಂಡಿಎಂಎ, 0.012 ಗ್ರಾಂ, ಸೇರಿದಂತೆ ಒಟ್ಟು 172.32 ಕೆಜಿ ಮಾದಕ ದ್ರವ್ಯಗಳನ್ನು ನಾಶಪಡಿಸಲಾಯಿತು.ವರಿಷ್ಠಾಧಿಕಾರಿಗಳಾದ ಕೆ.ಎಸ್.ನಾಗರಾಜು, ಪಿ.ನಾಗೇಶ್ ಕುಮಾರ್, ತಹಸೀಲ್ದಾರ್ ಅಮೃತ್ ಆತ್ರೇಶ್, ಡಿವೈಎಸ್ಪಿ ಜಗದೀಶ್, ಪಿಐಗಳಾದ ಬಿ.ರಾಜು, ರಂಜನ್ ಕುಮಾರ್, ಸೋಂಪುರ ಗ್ರಾಪಂ ಪಿಡಿಒ ಎ.ಎಂ.ರವಿಶಂಕರ್ ಮತ್ತು ಪೊಲೀಸ್ ಸಿಬ್ಬಂದಿ, ಕಂಪನಿ ಸಿಬ್ಬಂದಿ ಉಪಸ್ಥಿತರಿದ್ದರು.