ಜಿಲ್ಲೆಯ ಪ್ರಸಿದ್ಧ ಗಿರಿಧಾಮ ಬಿಳಿಗಿರಿರಂಗನ ಬೆಟ್ಟವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಎಲ್ಲರೂ ಕೂಡ ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮೋನಾರೋತ್ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ಜಿಲ್ಲೆಯ ಪ್ರಸಿದ್ಧ ಗಿರಿಧಾಮ ಬಿಳಿಗಿರಿರಂಗನ ಬೆಟ್ಟವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಎಲ್ಲರೂ ಕೂಡ ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮೋನಾರೋತ್ ಕರೆ ನೀಡಿದರು.

ಬಿಳಿಗಿರಿರಂಗನಬೆಟ್ಟದ ವಿಜಿಕೆಕೆ ಶಾಲೆಯ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಹಾಗೂ ರಾಮಕೃಷ್ಣ ಆಶ್ರಮದ ವತಿಯಿಂದ ಸ್ವಚ್ಛತೆಯೇ ಸೇವೆ ಅಭಿಯಾನದಡಿಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛ ಬಿಳಿಗಿರಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇದೊಂದು ಹುಲಿ ರಕ್ಷಿತ ಅರಣ್ಯ ಪ್ರದೇಶವಾಗಿದೆ. ಇಲ್ಲಿ ದೇಗುಲವೂ ಇರುವುದರಿಂದ ನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿರುವ ಬುಡಕಟ್ಟು ಸೋಲಿಗ ಜನಾಂಗದವರೂ ಕೂಡ ಅನೇಕ ಹಾಡಿಗಳಲ್ಲಿ ವಾಸವಾಗಿದ್ದಾರೆ. ಇವರನ್ನೆಲ್ಲಾ ಒಳಗೊಂಡಂತೆ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ನಿಷೇಧಿಸಲಾಗಿದೆ. ಇದರ ಬಳಕೆ ಇಲ್ಲಿ ಸಲ್ಲದು, ಜೊತೆಗ ಪ್ಲಾಸ್ಟಿಕ್‌ನ್ನು ಎಲ್ಲೆಂದರಲ್ಲಿ ಬೀಸಾಡಬಾರದು. ಬೆಟ್ಟದಲ್ಲಿ ಸಂಗ್ರಹವಾಗುವ ಕಸವನ್ನು ಹಸಿ ಹಾಗೂ ಒಣ ಕಸವಾಗಿ ಬೇರ್ಪಡಿಸಿ ಇದನ್ನು ಒಂದೆಡೆ ಶೇಖರಣೆ ಮಾಡಬೇಕು ಎಂದು ಹೇಳಿದರು.

ಇದಕ್ಕಾಗಿ ನಮ್ಮ ಜತೆ ರಾಮಕೃಷ್ಣ ಮಿಷನ್ ಕೈ ಜೋಡಿಸಿದ್ದಾರೆ. ಇವರು ಕಸವನ್ನು ಬೇರ್ಪಡಿಸಿ, ಸಂಗ್ರಹಿಸಿ, ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸುತ್ತಾರೆ. ಇದರೊಂದಿಗೆ ಈ ಬಗ್ಗೆ ಇಲ್ಲಿಗೆ ಬರುವ ಪ್ರವಾಸಿಗರು ಹಾಗೂ ಇಲ್ಲಿರುವ ಜನರಿಗೆ ಅರಿವನ್ನು ಮೂಡಿಸುವ ಕೆಲಸವನ್ನು ಮಾಡುವ ಜವಾಬ್ದಾರಿಯನ್ನು ಮುಂದಿನ 3 ವರ್ಷಗಳ ಕಾಲ ಹೊರಲು ತಯಾರಿದ್ದಾರೆ. ಹಾಗಾಗಿ ಈ ಕೆಲಸಕ್ಕೆ ಎಲ್ಲರೂ ಸಹಕರಿಸಬೇಕು. ಹಸಿ ಒಣ ಕಸವನ್ನು ಬೇರ್ಪಡಿಸಬೇಕು. ಕಾಡನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಆ ಮೂಲಕ ಪರಿಸರವನ್ನು, ಕಾಡುಪ್ರಾಣಿಗಳನ್ನು ರಕ್ಷಿಸುವ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಅಭಿಯಾನದ ಬ್ರಹ್ಮಚಾರಿ ರಂಜನ್ ಮಹಾರಾಜ್ ಮಾತನಾಡಿ, ಬಿಳಿಗಿರಿರಂಗನ ಬೆಟ್ಟವನ್ನು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇದನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯತೆಯಾಗಿದೆ. ಹಾಗಾಗಿ ಸ್ವಚ್ಚ ಬಿಳಿಗಿರಿ ಅಭಿಯಾನ ಕಾರ್ಯಕ್ರಮವನ್ನು ಇಲ್ಲಿ ನಡೆಸಲಾಗುವುದು. ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕಸ ವಿಲೇವಾರಿ ಇಂದು ಜಾಗತಿಕ ಸಮಸ್ಯೆಯಾಗಿದೆ. ಇದು ಕಾಡುಪ್ರಾಣಿಗಳಿಗೂ ಕಂಟಕವಾಗಿ ಪರಿಣಮಿಸಿದೆ. ಅದರಲ್ಲೂ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಒಂದು ಸವಾಲಾಗಿದೆ. ಹಾಗಾಗಿ ನಮ್ಮ ಅಭಿಯಾನವನ್ನು ನಾವು ಈಗಾಗಲೇ ಮಂಗಳೂರಿನಲ್ಲಿ ಮಾಡುತ್ತಿದ್ದು ಬಿಳಿಗಿರಿರಂಗನ ಬೆಟ್ಟದಲ್ಲೂ ಮೂರು ವರ್ಷಗಳ ಕಾಲ ಸ್ವಚ್ಛ ಮಾಡುವ ನಿಟ್ಟಿನಲ್ಲಿ ಎಲ್ಲ ಇಲಾಖೆಗಳ ನೆರವಿನೊಂದಿಗೆ ಮಾಡಲಿದ್ದೇವೆ ಎಂದರು.

ಎಸಿಎಫ್ ಮಹಾಲಕ್ಷ್ಮಿ, ಜಿಪಂ ಮಾಜಿ ಉಪಾಧ್ಯಕ್ಷೆ ಕೇತಮ್ಮ, ಅಭಿಯಾನದ ನಿರ್ದೇಶಕ ಎಂ. ಶಶಿಧರ್, ವಿಜಿಕೆಕೆ ವ್ಯವಸ್ಥಾಪಕ ಜಗದೀಶ್, ಸಂಯೋಜಕ ಶಿವಮಲ್ಲು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ, ತಾಪಂನ ರವೀಂದ್ರ ಪಿಡಿಒ ಶಶಿಕಲಾ, ಬೊಮ್ಮಯ್ಯ, ಶಿಕ್ಷಕರಾದ ವೀರಭದ್ರಸ್ವಾಮಿ, ಸುಂದರೇಶ್, ರೋಷನ್, ನಾಗೇಶ್, ಮಂಜುನಾಥ್, ಯಶೋಧ, ವೆಂಕಟೇಶ್, ಗ್ರಾಮಸ್ಥರು ಇದ್ದರು.