ಬಾಲ್ಯ ವಿವಾಹ ತಡೆಗಟ್ಟಲು ಪ್ರತಿಯೊಬ್ಬರು ಕೈ ಜೋಡಿಸಿ: ಕೆ.ನಾಗಣ್ಣಗೌಡ ಕರೆ

| Published : Feb 28 2024, 02:31 AM IST

ಸಾರಾಂಶ

ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯ ವಿವಾಹ ಪ್ರಕರಣಗಳಲ್ಲಿ 25-30 ವರ್ಷದ ಶೇ.40ರಷ್ಟು ಯುವಕರು ಜೈಲಿನಲ್ಲಿದ್ದಾರೆ. ಹೀಗಾಗಿ ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ 18 ವರ್ಷ ತುಂಬುವವರೆಗೂ ಮದುವೆ ಮಾಡಬಾರದು. ರಾಜ್ಯದಲ್ಲಿ 18 ವರ್ಷಕ್ಕಿಂತ ಮುಂಚಿತವಾಗಿ ಮದುವೆಯಾಗಿರುವ 48 ಸಾವಿರ ಬಾಲಕಿಯರು ಗರ್ಭ ಧರಿಸಿದ್ದಾರೆ. ಈ ವಯಸ್ಸಿನಲ್ಲಿ ಮದುವೆ ಮಾಡಿದರೆ ಅವರು ಮಾನಸಿಕವಾಗಿ ಪ್ರಬುದ್ಧರಾಗಿರುವುದಿಲ್ಲ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಬಾಲ್ಯ ವಿವಾಹ ಪ್ರಕರಣಗಳನ್ನು ತಳಹಂತದಲ್ಲೇ ತಡೆಗಟ್ಟಲು ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಂಡ್ಯ, ಶಿಶು ಅಭಿವೃದ್ಧಿ ಯೋಜನೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015, ಬಾಲ್ಯ ವಿವಾಹ ನಿಷೇಧ ಕಾಯ್ದೆ-2006, ತಿದ್ದುಪಡಿ (ಕರ್ನಾಟಕ ಸರ್ಕಾರ ತಿದ್ದುಪಡಿ) ಕಾಯ್ದೆ-2016, ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕಿನ (ಆರ್ ಟಿಇ) ಕಾಯ್ದೆ-2009 ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯ ವಿವಾಹ ಪ್ರಕರಣಗಳಲ್ಲಿ 25-30 ವರ್ಷದ ಶೇ.40ರಷ್ಟು ಯುವಕರು ಜೈಲಿನಲ್ಲಿದ್ದಾರೆ. ಹೀಗಾಗಿ ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ 18ವರ್ಷ ತುಂಬುವವರೆಗೂ ಮದುವೆ ಮಾಡಬಾರದು ಎಂದರು.

ರಾಜ್ಯದಲ್ಲಿ 18 ವರ್ಷಕ್ಕಿಂತ ಮುಂಚಿತವಾಗಿ ಮದುವೆಯಾಗಿರುವ 48 ಸಾವಿರ ಬಾಲಕಿಯರು ಗರ್ಭ ಧರಿಸಿದ್ದಾರೆ. ಈ ವಯಸ್ಸಿನಲ್ಲಿ ಮದುವೆ ಮಾಡಿದರೆ ಅವರು ಮಾನಸಿಕವಾಗಿ ಪ್ರಬುದ್ಧರಾಗಿರುವುದಿಲ್ಲ. ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ದೈಹಿಕ ಶೋಷಣೆ ತಡೆದುಕೊಳ್ಳಲು ಸಾಧ್ಯವಾಗದು.‌ ಸಾಯವವರೆಗೆ ಮಾನಸಿಕ ಒತ್ತಡ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು.

ಹೆಣ್ಣು ಮಕ್ಕಳಿಗೆ 18, ಗಂಡು ಮಕ್ಕಳಿಗೆ 21ವರ್ಷ ತುಂಬವರೆಗೂ ಪೋಷಕರು ಮದುವೆ ಮಾಡಬಾರದು. ಹಾಗೊಂದು ವೇಳೆ ಮಾಡಿದರೆ ಹೆಣ್ಣು ಹಾಗೂ ಗಂಡಿನ ಪೋಷಕರು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾರ್ಯಾಗಾರಕ್ಕೆ ಗೈರಾದ ಉಪವಿಭಾಗಾಧಿಕಾರಿ, ತಹಸೀಲ್ದಾರ್, ಪೊಲೀಸ್, ಇಒ, ಕಂದಾಯ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳ ವಿರುದ್ಧ ಅಧ್ಯಕ್ಷ ಕೆ.ನಾಗಣ್ಣಗೌಡ ಗರಂ ಆದರು. ಈ ವೇಳೆ ಆಯೋಗದ ಸದಸ್ಯ ವೆಂಕಟೇಶ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವಿ.ಅಶ್ವತ್ಥನಾರಾಯಣ ತಹಸೀಲ್ದಾರ್ ಶ್ರೇಯಸ್, ಪ್ರಭಾರ ಟಿಎಚ್ ಒ ಡಾ.ಧನಂಜಯ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ‌ ಎನ್.ರಶ್ಮಿ, ಸಿಡಿಪಿಒ ಕೆ.ಆರ್.ಪೂರ್ಣಿಮಾ, ಸಂಪನ್ಮೂಲ ವ್ಯಕ್ತಿಗಳಾದ ರಮೇಶ್, ಸಿ.ಬಿ.ರಾಜೇಂದ್ರ, ಆರ್.ಶೋಭಾವತಿ ಇತರರಿದ್ದರು.