ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ: ಡಿ.ಆರ್‌. ಪಾಟೀಲ

| Published : Jul 28 2025, 12:32 AM IST

ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ: ಡಿ.ಆರ್‌. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಹಳ್ಳಿಗಳಿಂದ ಕೂಡಿದ ಭಾರತವು ಹಳ್ಳಿಗಳ ಅಭಿವೃದ್ಧಿಯಿಂದಲೇ ದೇಶವು ಅಭಿವೃದ್ಧಿ ಕಾಣಲು ಸಾಧ್ಯ

ಗದಗ: ಮಹಾತ್ಮ ಗಾಂಧೀಜಿಯವರು ಕಂಡ ಕನಸಿನ ಗ್ರಾಮ ಸ್ವರಾಜ್ ಪರಿಕಲ್ಪನೆಯನ್ನು ಅನುಷ್ಠಾನಕ್ಕೆ ತರಲು ತನು ಮನ ಧನವನ್ನು ಅರ್ಪಿಸಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ನಮ್ಮ ಯೋಜನೆಗಳನ್ನು ನಾವೇ ರೂಪಿಸಿ ರಾಜ್ಯದಲ್ಲಿಯೇ ಮಾದರಿ ಗ್ರಾಮವನ್ನಾಗಿ ಮಾಡಲು ತಾವೆಲ್ಲರೂ ಕೈ ಜೋಡಿಸಬೇಕು ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ಹೇಳಿದರು.

ತಾಲೂಕಿನ ಲಕ್ಕುಂಡಿ ಗ್ರಾಮದ ಅನ್ನದಾನೀಶ್ವರ ಸಭಾ ಭವನದಲ್ಲಿ ಗ್ರಾಪಂ ಆಶ್ರಯದಲ್ಲಿ ನಡೆದ ಗಾಂಧೀಜಿ ಕಂಡ ಕನಸಿನ ಗ್ರಾಮ ಸ್ವರಾಜ್ ಪರಿಕಲ್ಪನೆಯ ತಳ ಮಟ್ಟದಿಂದ ಯೋಜನೆ ರೂಪಿಸಲು ಗ್ರಾಮಸ್ಥರ ಅಭಿಪ್ರಾಯ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಹಳ್ಳಿಗಳಿಂದ ಕೂಡಿದ ಭಾರತವು ಹಳ್ಳಿಗಳ ಅಭಿವೃದ್ಧಿಯಿಂದಲೇ ದೇಶವು ಅಭಿವೃದ್ಧಿ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಇಲ್ಲಿಯ ಜನರ ಆರ್ಥಿಕ, ಸಾಮಾಜಿಕ, ಕೌಟುಂಬಿಕವಾಗಿ ಸಂತಸದಿಂದ ಇರಬೇಕು. ಪ್ರತಿ ವ್ಯಕ್ತಿಯ ವ್ಯಕ್ತಿತ್ವ ಬದಲಾವಣೆಯಾಗಬೇಕು. ಪರಸ್ಪರ ಪ್ರೀತಿ, ಸೌಹರ್ದತೆಯ ವಾತಾವರಣ ನೆಲೆಯೂರಬೇಕು. ಇಡೀ ಗ್ರಾಮವೇ ಅವಿಭಕ್ತ ಕುಟುಂಬದಂತಿರಬೇಕು. ಈಗಿರುವ ರಾಸಾಯನಿಕ ಕೃಷಿಯಿಂದ ನೈಸರ್ಗಿಕ ಹಾಗೂ ಸಾವಯವ ಕೃಷಿಗೆ ಬದಲಾವಣೆಯಾಗಬೇಕು. ಪ್ರತಿಯೊಬ್ಬರಲ್ಲಿಯೂ ಒಳ್ಳೆತನವಿದೆ. ಪಕ್ಷ, ಜಾತಿ ಭೇದ ಮರೆತು ಒಗ್ಗಾಟ್ಟಾಬೇಕು. ಇಂತಹ ಕನಸನ್ನು ಗಾಂಧೀಜಿಯವರು ಕಂಡಿದ್ದರು. ಅವರಂತೆ ನಾನು ಸಹ ಗಾಂಧೀಜಿಯವರ ಕನಸನ್ನು ನನಸು ಮಾಡಲು ಯಾವುದೇ ಜಾತಿ, ಪಕ್ಷದವರ ಮನೆಗೆ ತೆರಳಿ ಸೌಹಾರ್ದತೆಯ ವಾತವರಣ ಸೃಷ್ಟಿಸಲು ಸಿದ್ಧನಿದ್ದೇನೆ. ನಮ್ಮ ಯೋಜನೆಗಳ ನಮ್ಮ ಗ್ರಾಮದಲ್ಲಿಯೇ ತಯಾರಾಗಬೇಕು. ತಳ ಮಟ್ಟದಿಂದ ಯೋಜನೆ ತಯಾರಾಗಲು ಸಿ.ಎಂ.ಸಿದ್ಧರಾಮಯ್ಯ ಅವರು ಸಭೆಯಲ್ಲಿ ಸೂಚನೆ ನೀಡಿದ್ದು ಮುಂದಿನ ಬಜೆಟ್ಟಿನಲ್ಲಿ ಯೋಜನೆಯ ಅನುಷ್ಠಾನಕ್ಕೆ ಇತಿ ಮಿತಿಯಲ್ಲಿ ಹಣಕಾಸು ಒದಗಿಸಲಾಗುವುದು ಎಂದು ಹೇಳಿದ್ದಾರೆ. ಆದ್ದರಿಂದ ನಿಮ್ಮ ಗ್ರಾಮದ ಕೆಲಸವು ನಿಮ್ಮ ಸ್ವಂತ ಮನೆಯ ಕೆಲಸವಾಗಬೇಕು ಅಂದಾಗ ಮಾತ್ರ ಗಾಂಧೀಜಿಯವರ ಗ್ರಾಮ ಸ್ವರಾಜ್ ಕನಸು ನನಸಾಗಲು ಸಾಧ್ಯವಾಗುತ್ತದೆ ಎಂದರು.

ಆರ್.ಡಿ.ಪಿ.ಆರ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸಿದ್ಧಾರ್ಥ ಹಾದಿಮನಿ ಮಾತನಾಡಿ, ಮತ್ತೊಬ್ಬರ ಮೇಲೆ ಅವಲಂಬನೆಯಾಗದೇ ನಮ್ಮ ಗ್ರಾಮದ ಅಭಿವೃದ್ಧಿಯನ್ನು ನಾವೇ ಸಂಪನ್ಮೂಲ ಕ್ರೋಢೀಕರಿಸಿಕೊಳ್ಳಬೇಕು. ಶಾಲೆ, ರಸ್ತೆ, ಸಮುದಾಯ ಭವನ, ದೇವಸ್ಥಾನ, ಚರಂಡಿ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಶೈಕ್ಷಣಿಕ ಕ್ಷೇತ್ರಕ್ಕೆ ಬೇಕಾಗುವ ಸೌಲಭ್ಯವನ್ನು ನಾವೇ ಮಾಡಿಕೊಳ್ಳಬೇಕು. ಇಂತಹ ಕಾಮಗಾರಿಗಳನ್ನು ಈಗ ಸರಕಾರ ವಾರ್ಡ್‌, ಗ್ರಾಮ ಸಭೆಗಳ ಮೂಲಕ ನಿರ್ಧರಿಸಿ ಏಜಿನ್ಸಿಗಳ ಮೂಲಕ ಮಾಡಿಸುತ್ತದೆ. ಆದ್ದರಿಂದ ಗಾಂಧೀಜಿಯವರ ಗ್ರಾಮ ಸ್ವರಾಜ್ ಯೋಜನೆಗಳು ಸರಳವಾಗಿವೆ ಎಂದರು.

ಗ್ರಾಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಡಿ.ಆರ್. ಪಾಟೀಲ ಅವರ ಮಾರ್ಗದರ್ಶನದಂತೆ ಗ್ರಾಮದಲ್ಲಿಯೇ ಹಿರಿಯರು, ಯುವಕರು, ಮಹಿಳೆಯರನ್ನು ಒಗ್ಗೂಡಿಸಿಕೊಂಡು ಗ್ರಾಮದ ಅಭಿವೃದ್ಧಿಗೆ ತಳ ಮಟ್ಟದಿಂದ ಯೋಜನೆ ರೂಪಿಸಲು ಯತ್ನಿಸಲಾಗುವುದು ಎಂದರು.

ಜಿಪಂ ಮಾಜಿ ಸದಸ್ಯ ಎಸ್.ಬಿ. ಕಲಕೇರಿ, ತಾಪಂ ಮಾಜಿ ಅಧ್ಯಕ್ಷ ಎಂ.ಎನ್. ಉಮಚಗಿ, ಜಿಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಗ್ರಾಪಂ ಸದಸ್ಯರಾದ ರುದ್ರಪ್ಪ ಮುಸ್ಕಿನಭಾವಿ, ಕುಬೇರಪ್ಪ ಬೆಂತೂರು, ಪೀರಸಾಬ ನದಾಫ, ಗ್ರಾಪಂ ಮಾಜಿ ಸದಸ್ಯ ಬಿ.ಬಿ. ಮಾಡಲಗೇರಿ, ವೀರಯ್ಯ ಗಂಧದ, ಚಂದ್ರಕಲಾ ಮಾಡಲಗೇರಿ, ಅಮೃತ ಮಂಟೂರು, ವಿಜಯಲಕ್ಷ್ಮೀ ಕಟಿಗ್ಗಾರ ಅವರು ಮಾತನಾಡಿದರ.

ಗ್ರಾಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಸದಸ್ಯರಾದ ಅನಸಮ್ಮ ಅಂಬಕ್ಕಿ, ಸುಮಿತ್ರಾ ರೋಣದ, ವಿರೂಪಾಕ್ಷಿ ಬೆಟಗೇರಿ, ಹನುಮಂತಪ್ಪ ಬಂಗಾರಿ, ನಿವೃತ್ತ ಡಿಡಿಪಿಐ ಎ.ಎನ್. ನಾಗರಳ್ಳಿ, ಎಂ.ಎ. ರೆಡ್ಡೇರ, ಡಾ. ಎಚ್.ಎಸ್. ಜನಗಾ, ಪ್ರಕಾಶ ಮಾಚೇನಹಳ್ಳಿ, ಎಲ್.ಜಿ. ಹಿರೇಗೌಡ್ರ ಇದ್ದರು. ಪಿಡಿಒ ಅಮೀರನಾಯಕ ನಿರೂಪಿಸಿ, ವಂದಿಸಿದರು.

ಗ್ರಾಮದಲ್ಲಿ ಪ್ರೀತಿ , ವಿಶ್ವಾಸ, ಸೌಹರ್ದತೆಯ ವಾತವಾರಣ ಸೃಷ್ಟಿ ಮಾಡಲು, ತಳಮಟ್ಟದ ಯೋಜನೆ ರೂಪಿಸುವ ಕಾರ್ಯಕ್ರಮವು ಆ. 2ರಂದು ಸಚಿವ ಎಚ್.ಕೆ. ಪಾಟೀಲ ಅವರ ನೇತೃತ್ವದಲ್ಲಿ ಜರುಗಲಿದೆ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ತಿಳಿಸಿದ್ದಾರೆ.