ಜೀತ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ

| Published : Aug 21 2025, 01:00 AM IST

ಸಾರಾಂಶ

ಸಮಾಜದಲ್ಲಿನ ಅನೇಕ ಸಮಸ್ಯೆಗಳಲ್ಲಿ ಜೀತಪದ್ಧತಿಯೂ ಒಂದು. ಇದು ಮಾನವೀಯತೆಗೆ ಕಳಂಕ, ಶಾಪವಾಗಿ ಪರಿಣಮಿಸಿದೆ. ಜೀತ ಪದ್ಧತಿ (ರದ್ದತಿ) ಕಾಯ್ದೆ 1976 ರನ್ವಯ ಕಾರ್ಮಿಕರನ್ನು ಜೀತಕ್ಕೆ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ನಮ್ಮ ಸಂವಿಧಾನವು ನಾಗರಿಕರಿಗೆ ಗೌರವಯುತ ಜೀವನ ನಡೆಸಲು ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. .

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಜೀತ ಪದ್ಧತಿ ನಿರ್ಮೂಲನೆ ಒಂದು ಸಾಮೂಹಿಕ ಪ್ರಯತ್ನ. ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ, ಈ ಅನಿಷ್ಠ ಪದ್ಧತಿಯನ್ನು ತೊಡೆದುಹಾಕಲು ಸಾಧ್ಯವಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್‌.ನಟೇಶ್ ಅಭಿಪ್ರಾಯಪಟ್ಟರು.ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಾಂತ ಜೀವ ಜ್ಯೋತಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಜೀತ ಪದ್ಧತಿ ನಿರ್ಮೂಲನೆ ಕಾಯ್ದೆ ಮತ್ತು ಅಕ್ರಮ ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟವ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿದರು.

ಜೀತ ಪದ್ಧತಿ ಶಿಕ್ಷಾರ್ಹ ಅಪರಾಧ

ಸಮಾಜದಲ್ಲಿನ ಅನೇಕ ಸಮಸ್ಯೆಗಳಲ್ಲಿ ಜೀತಪದ್ಧತಿಯೂ ಒಂದು. ಇದು ಮಾನವೀಯತೆಗೆ ಕಳಂಕ, ಶಾಪವಾಗಿ ಪರಿಣಮಿಸಿದೆ. ಜೀತ ಪದ್ಧತಿ (ರದ್ದತಿ) ಕಾಯ್ದೆ 1976 ರನ್ವಯ ಕಾರ್ಮಿಕರನ್ನು ಜೀತಕ್ಕೆ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ನಮ್ಮ ಸಂವಿಧಾನವು ನಾಗರಿಕರಿಗೆ ಗೌರವಯುತ ಜೀವನ ನಡೆಸಲು ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಮಾನವನ ಗೌರವಯುತ ಜೀವನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಜೀತ ಪದ್ಧತಿಯ ನಿಯಂತ್ರಣವನ್ನು ಒಂದು ಸಾಮಾಜಿಕ ಬದ್ಧತೆಯನ್ನಾಗಿ ತೆಗೆದುಕೊಂಡು ಅನಿಷ್ಠ ಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬರು ಕೈ ಜೋಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.ಬಲವಂತ ಮಾನವ ಕಳ್ಳಸಾಗಣೆ

ತಹಸೀಲ್ದಾರ್ ಹಾಗೂ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಎಸ್.ವೆಂಕಟೇಶಪ್ಪ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆ ಮತ್ತು ಜೀತ ಕಾರ್ಮಿಕ ಪದ್ಧತಿ ಅಪರಾಧವಾಗಿವೆ, ಜೀತ ಕಾರ್ಮಿಕ ಪದ್ಧತಿಯು ಮಾನವ ಕಳ್ಳಸಾಗಣೆಯ ಒಂದು ಬಲವಂತದ ರೂಪವಾಗಿದ್ದು, ಇದರಲ್ಲಿ ಸಾಲ ಅಥವಾ ಅನಿವಾರ್ಯತೆ (ರೂಢಿಗತ, ಜಾತಿ ಆಧಾರಿತ ಅಥವಾ ಯಾವುದೇ ಆರ್ಥಿಕ ಪರಿಗಣನೆ) ಕಾರಣದಿಂದಾಗಿ, ಕಾರ್ಮಿಕರು ಭಾರತೀಯ ಸಂವಿಧಾನದಲ್ಲಿ ನೀಡಿರುವ ತಮ್ಮ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಕಳೆದು ಕೊಳ್ಳುವಂತೆ ಮಾಡುವುದಾಗಿದೆ ಎಂದರು.

ಶ್ರೀಮಂತ ಮನೆಗಳಲ್ಲಿ ಬಡವರು ಮಾಡುವ ಬಿಟ್ಟೀ ಚಾಕರಿ ಜೀತ ಪದ್ಧತಿಯಾಗಿದೆ, ಕೇವಲ ಊಟಕ್ಕಾಗಿ ಶ್ರೀಮಂತ ಮನೆಗಳಲ್ಲಿ ದುಡಿಯುವಂತ ಪರಿಸ್ಥಿತಿಯನ್ನು ನಾವು ಚಿಕ್ಕವರಿದ್ದಾಗ ಕಂಡಿದ್ದೇವೆ. ಅದು ಅಪರಾಧ ಎಂದು ಆಗ ಅರಿವು ಇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಇಬ್ಬರ ನಡುವೆ ಆದ ಒಪ್ಪಂದ

ಕಾರ್ಯನಿರ್ವಾಹಕ ಅಧಿಕಾರಿ ಎಚ್‌ ರವಿ ಕುಮಾರ್ ಮಾತನಾಡಿ, ಜೀತ ಪದ್ಧತಿಯು ಭೂಮಾಲೀಕ ಹಾಗೂ ಬೇಸಾಯಗಾರನ ನಡುವಿನ ಒಪ್ಪಂದವಾಗಿದೆ , ಪಡೆದ ಸಾಲಕ್ಕೆ ಪ್ರತಿಯಾಗಿಯೋ ಅನ್ಯ ಜೀವನೋಪಾಯವಿಲ್ಲದೆಯೋ ಶ್ರೀಮಂತನ ಮನೆಯ ಆಳಾಗಿ ದುಡಿಯುವ ಪದ್ಧತಿ ಸಮಾಜದಲ್ಲಿ ಈಗಲೂ ಇದೆ.ಇದು ಒಂದು ದುರಂತವಾಗಿದೆ ಇದನ್ನು ನಿರ್ಮೂಲನೆ ಮಾಡಲು ಅಂಗನವಾಡಿ ಕಾರ್ಯಕರ್ತೆಯರು ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.ಕಾರ್ಯಾಗಾರದಲ್ಲಿ ಶಿಶು ಅಭಿವೃದ್ದಿ ಯೋಜನಾಧಿಕಾರಿ ಬಿ‌ ಎಂ ಮುನಿರಾಜುಪ್ಪ,ಶಾಂತ ಜೀವ ಜ್ಯೋತಿ ಸಂಸ್ಥೆ ನಿರ್ದೇಶಕ ಪಿ ಷಣ್ಮುಗ ಸುಂದರಂ,ಐಜೆಎಂ ಡೇಸ್ಲಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್ ಹೆಚ್ ಚೌಡಪ್ಪ,ಶಾಂತ ಜೀವ ಜ್ಯೋತಿ ಸಂಸ್ಥೆ ಜಿಲ್ಲಾ ಸಂಯೋಜಕರಾದ ಮಂಜುನಾಥ ಇದ್ರು.