ಪ್ರತಿಯೊಬ್ಬರು ಬಾಲ್ಯ ವಿವಾಹ ತಡೆಗೆ ಕೈಜೋಡಿಸಿ

| N/A | Published : Jul 23 2025, 01:48 AM IST / Updated: Jul 23 2025, 01:14 PM IST

legal rights in marriage that every women should know before going to knot

ಸಾರಾಂಶ

ಹೊಸದುರ್ಗ ತಾಲೂಕಿನ ಮಾಡದಕೆರೆ ಗ್ರಾಮದ ಮುರುಳೀಧರ ಪ್ರೌಢಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳು ಮತ್ತು ಪೋಷಕರಿಗಾಗಿ ನಡೆಯುತ್ತಿರುವ ಅರಿವು ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.

 ಹೊಸದುರ್ಗ :  ಬಾಲ್ಯವಿವಾಹದಿಂದ ಹೆಣ್ಣುಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗಲಿದ್ದು ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಬಾಲ್ಯ ವಿವಾಹ ತಡೆಗೆ ಕೈಜೋಡಿಸಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೀರೇಂದ್ರ ಪಾಟೀಲ್ ಹೇಳಿದರು.

ತಾಲೂಕಿನ ಮಾಡದಕೆರೆ ಗ್ರಾಮದ ಮುರುಳೀಧರ ಪ್ರೌಢಶಾಲೆಯಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಆರೋಗ್ಯ ಮತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿಗಳ ಕಚೇರಿ ಚಿತ್ರದುರ್ಗ, ತಾಲೂಕು ಆಡಳಿತ, ತಾಲೂಕು ಆರೋಗ್ಯಧಿಕಾರಿಗಳ ಕಚೇರಿ ಹೊಸದುರ್ಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹೊಸದುರ್ಗ, ಪ್ರಾಥಮಿಕ ಆರೋಗ್ಯ ಕೇಂದ್ರ, ಮಾಡದಕೆರೆ, ಮುರಳೀದರ ಪ್ರೌಡಶಾಲೆ ಮತ್ತು ಕಾಲೇಜು, ಮಾಡದಕೆರೆ ಹಾಗೂ ವಿವಿದ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳು ಮತ್ತು ಪೋಷಕರಿಗಾಗಿ ಆಯೋಜಿಸಲಾಗಿದ್ದ ಬಾಲ್ಯವಿವಾಹ ನಿಷೇದದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಬಾಲ್ಯ ವಿವಾಹಗಳಾಗುವುದರಿಂದ ಮಕ್ಕಳಲ್ಲಿ ವಯಸ್ಸಿಗೆ ಮೀರಿದ ಜವಾಬ್ದಾರಿ, ಭಯ ಬೀತಿಯ ವಾತಾವರಣ, ತಾರತಮ್ಯ, ಶಾಲೆ ಬಿಟ್ಟು ಶಿಕ್ಷಣದಿಂದ ವಂಚಿತರಾಗುವುದು, ಎಳೆಯ ವಯಸ್ಸಿನಲ್ಲಿಯೆ ವಿಧವೆಯಾರಾಗಿ, ಕೌಟುಂಬಿಕ ದೌರ್ಜನ್ಯ ಮತ್ತು ನಿಂದನೆಗೊಳಗಾಗಿ

ಅವಮಾನ ಮತ್ತು ಅಜ್ಞಾನಗಳಿಂದ ಆತ್ಮಹತ್ಯೆಗಳು ಸಂಬವಿಸುತ್ತವೆ ಎಂದರು.

ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯಾಗಿ ಗರ್ಭಿಣಿಯಾಗುವುದರಿಂದ ಗರ್ಭಪಾತವಾಗಬಹುದು, ವಿಕಲಾಂಗ ಮಕ್ಕಳು ಜನಿಸಬಹುದು, ಲೈಂಗಿಕ ಕಾಯಿಲೆಗಳಾದ ಎಚ್ಐವಿ/ಏಡ್ಸ್ ಗೆ ಗುರಿಯಾಗಬಹುದು, ಶಿಶು ಮರಣ ಮತ್ತು ತಾಯಿ ಮರಣ ಸಂಬವಿಸಬಹುದು, ರಕ್ತ ಹೀನತೆ ಮತ್ತು ಕಡಿಮೇ ತೂಕದ ಮಗು ಹುಟ್ಟಬಹುದು ಎಂದರು.

ಎಸಿಡಿಪಿಒ ನವೀನ್ ಕುಮಾರ್‌ ಮಾತನಾಡಿ, 21 ವರ್ಷದೊಳಗಿನ ಹುಡುಗ 18 ವರ್ಷದೊಳಗಿನ ಹುಡುಗಿಯರ ನಡುವೆ ಅಥವಾ ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿನೊಳಗಿದ್ದರು ಇಂತಹ ಮದುವೆ ಬಾಲ್ಯವಿವಾಹ ಆಗುತ್ತದೆ. ಅನಕ್ಷರತೆ, ಬಡತನ, ಮೂಡನಂಬಿಕೆ, ಸಂಪ್ರದಾಯದ ಕಟ್ಟುಪಾಡುಗಳು ಮತ್ತು ಕುಟುಂಬದ ಹೊರೆ ಮುಂತಾದ ಕಾರಣಗಳಿಗೊಸ್ಕರ ಬಾಲ್ಯ ವಿವಾಹಗಳಾಗುತ್ತಿದ್ದಾವೆ ಎಂದರು.

ಪೋಷಕರು ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ತುಂಬಬೇಕು, ಮೊಬೈಲ್ ಪೋನ್ ಗೀಳಿನಿಂದ ಅಡ್ಡದಾರಿ ಹಿಡಿಯುವುದನ್ನ ತಪ್ಪಿಸಬೇಕು ಮಕ್ಕಳಿಗೆ ಸರಿಯಾದ ಸಮಯಕ್ಕೆ ಮದುವೆ ಮಾಡಿ ಅವರಿಂದ ದೇಶದ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಠಿಯಾಗಲು ಅನುವು ಮಾಡಿಕೊಡಬೇಕು ಎಂದರು.

ಮೇಲ್ವಿಚಾರಕಿ ಮಮತಾ ಮಾತನಾಡಿ, ತಮ್ಮ ಗ್ರಾಮಗಳಲ್ಲಿ ನೆರೆ ಹೊರೆಯಲ್ಲಿ ಯಾವುದಾದರೂ ಬಾಲ್ಯ ವಿವಾಹ ಮಾಹಿತಿ ತಿಳಿದು ಬಂದರೆ ಉಚಿತ ಸಹಾಯವಾಣಿ 1098ಕ್ಕೆ ಕರೆ ಮಾಡಿ ಬಾಲ್ಯ ವಿವಾಹ ತಪ್ಪಿಸಿ ಅಪ್ರಾಪ್ತರಿಗಾಗುವ ಅನ್ಯಾಯವನ್ನು ತಪ್ಪಿಸಬೇಕು. ಬಾಲ್ಯ ವಿವಾಹ ಮಾಡಿದರೆ ತಪ್ಪಿತಸ್ತರಿಗೆ 2 ವರ್ಷ ಜೈಲು ವಾಸ ಅಥವಾ 1 ಲಕ್ಷದವರೆಗೆ ದಂಡದ ಶಿಕ್ಷೆ ವಿದಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಮುರಳೀದರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ ಕುಮರ್ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು, ಕಾರ್ಯಕ್ರಮದಲ್ಲಿ ಮು.ಶಿ.ಜಯರಾಮಪ್ಪ, ಆರೋಗ್ಯ ಇಲಾಖೆಯ ತಿಪ್ಪಮ್ಮ, ಲೋಕೇಶ್, ಆರೋಗ್ಯ ಅಧಿಕಾರಿಗಳು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.

Read more Articles on