ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ವಾಯು ಮಾಲಿನ್ಯ ನಿಯಂತ್ರಣದ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ ಜಿ. ಹೇಳಿದರು.
ಹಾವೇರಿ: ವಾಯು ಮಾಲಿನ್ಯದಿಂದ ಹಲವಾರು ರೋಗಗಳು ಉಂಟಾಗುತ್ತಿವೆ. ಇತ್ತೀಚೆಗೆ ಕ್ಯಾನ್ಸರ್ ಆಸ್ಪತ್ರೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿವೆ. ವಾಹನಗಳ ಇಂಜಿನ್ ನಿರ್ವಹಣೆ ಮಾಡದೇ ಇರುವ ಕಾರಣದಿಂದ, ಎಕ್ಸಲರೇಟರನ್ನು ಅನಗತ್ಯವಾಗಿ ಬಳಸುವುದರಿಂದ ವಾಯುಮಾಲಿನ್ಯ ಉಂಟಾಗುತ್ತದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ವಾಯು ಮಾಲಿನ್ಯ ನಿಯಂತ್ರಣದ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ ಜಿ. ಹೇಳಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಒಮ್ಮೆ ಹಾಳಾದರೆ ಮತ್ತೆಂದೂ ಸರಿಪಡಿಸಲಾಗದ ಆ ಒಂದು ಮಾಲಿನ್ಯವೆಂದರೆ ಅದು ವಾಯು ಮಾಲಿನ್ಯ. ವಾಯುವಿನೊಂದಿಗೆ, ಮನುಷ್ಯರಿಗೆ, ಜೀವಿಗಳಿಗೆ ಹಾಗೂ ಪರಿಸರಕ್ಕೆ ಹಾನಿಯನ್ನುಂಟು ಮಾಡುವ ರಾಸಾಯನಿಕಗಳು, ಸೂಕ್ಷ್ಮ ಕಣಗಳು ಅಥವಾ ಜೈವಿಕ ಸಾಮಗ್ರಿಗಳು ವಾತಾವರಣಕ್ಕೆ ಸೇರಿಕೊಳ್ಳುವ ಪ್ರಕ್ರಿಯೆ ವಾಯು ಮಾಲಿನ್ಯ ಎಂದು ಹೇಳಿದರು.ಮಾಲಿನ್ಯಗಳಲ್ಲಿ ಹಲವು ವಿಧಗಳನ್ನು ನಾವು ಕಾಣುತ್ತೇವೆ. ಅವುಗಳನ್ನು ಬಹಳ ಸರಳವಾಗಿ ವಿಂಗಡಿಸುವುದಾದರೆ, ಜಲ ಮಾಲಿನ್ಯ, ಮಣ್ಣು ಮಾಲಿನ್ಯ, ಶಬ್ದ ಮಾಲಿನ್ಯ ಹಾಗೂ ವಾಯು ಮಾಲಿನ್ಯ. ಈ ಎಲ್ಲಾ ಮಾಲಿನ್ಯಗಳಿಗೂ ಅದರದ್ದೇ ಪ್ರಮುಖ ಕಾರಣಗಳಿವೆ. ಆ ಎಲ್ಲಾ ಮಾಲಿನ್ಯಗಳನ್ನು ನಿಯಂತ್ರಣಕ್ಕೆ ತರಲೆಂದು ಹಲವಾರು ರೀತಿಯ ಪ್ರಯತ್ನಗಳು ನಡೆಯುತ್ತಿವೆ ಎಂದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ವಿನಯ ಕಾಟೋಕರ್ ಆರ್. ಮಾತನಾಡಿ, ವಾಯು ಇಂದು ಅತೀ ಹೆಚ್ಚಿನ ಮಾಲಿನ್ಯಕ್ಕೆ ಒಳಗಾಗಿದೆ. ಮಾಲಿನ್ಯ ಕಾರಕ ಅನಿಲಗಳನ್ನು ಬಿಡುಗಡೆ ಮಾಡುವ ವಿದ್ಯುತ್ ಉತ್ಪಾದನಾ ಘಟಕಗಳು, ಅತೀ ಹೆಚ್ಚು ಹೊಗೆ ಉಗುಳುವ ಕಾರ್ಖಾನೆಗಳಿಂದಲೂ ವಾಯು ಮಾಲಿನ್ಯ ಉಂಟಾಗುತ್ತದೆ. ವಾಹನಗಳಿಂದ ಹೊರಸೂಸುವ ಹಾನಿಕಾರಕ ಹೊಗೆಯಿಂದ ಮಾನವನ ಆರೋಗ್ಯ ಮತ್ತು ಪರಿಸರ ಎರಡರ ಮೇಲೂ ಅಗಾಧವಾದ ಪರಿಣಾಮ ಉಂಟಾಗುತ್ತಿದೆ. ಜೀವಸಂಕುಲದ ಒಳಿತಿಗಾಗಿ ಹಾಗೂ ಉಳಿವಿಗಾಗಿ ಇಂದೇ ನಾವೆಲ್ಲರೂ ಪಣತೊಟ್ಟರೆ, ವಾಯುಮಾಲಿನ್ಯವನ್ನು ತಡೆಯಬಹುದಾಗಿದೆ. ಹೆಚ್ಚು ಹೆಚ್ಚಾಗಿ ಗಿಡಗಳನ್ನು ನೆಟ್ಟು ಪೋಷಿಸುವುದರ ಮೂಲಕ ವಾಯುಮಾಲಿನ್ಯವನ್ನು ತಡೆಯಬಹುದಾಗಿದೆ ಎಂದು ಹೇಳಿದರು.ಮೋಟಾರು ವಾಹನ ನಿರೀಕ್ಷಕರಾದ ಲೀಲಾ ಆರ್. ಅವರು ವಾಯು ಮಾಲಿನ್ಯ ನಿಯಂತ್ರಣ ಕುರಿತಾದ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ವಾಹನಗಳನ್ನು ಸರಿಯಾಗಿ ನಿರ್ವಹಣೆ ಮಾಡಿದಲ್ಲಿ ವಾಯುಮಾಲಿನ್ಯವನ್ನು ತಡೆಯಬಹುದಾಗಿದೆ. ಕಲಬೆರಕೆ ಇಂಧನ ಬಳಸದೇ ಪರಿಶುದ್ಧ ಇಂಧನ ಬಳಸುವುದು, ಪ್ರತಿಯೊಬ್ಬ ವಾಹನ ಮಾಲೀಕರು ಕಾಲಕಾಲಕ್ಕೆ ವಾಹನಗಳನ್ನು ನಿರ್ವಹಣೆ ಮಾಡಿ ವಾಯುಮಾಲಿನ್ಯ ಹತೋಟಿ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು. ವಾಹನಗಳಲ್ಲಿ ಕಲಬೆರೆಕೆ ಇಂಧನ ಬಳಸಿದಲ್ಲಿ ವಾಯುಮಾಲಿನ್ಯ ಉಂಟಾಗುತ್ತದೆ ಎಂದರು.
ಕಚೇರಿಯ ಪ್ರಥಮ ದರ್ಜೆ ಸಹಾಯಕರಾದ ಶ್ರೀಪಾದ ಬ್ಯಾಳಿ ಮಾತನಾಡಿ, ಪ್ರತಿ ವರ್ಷದ ನವೆಂಬರ್ ತಿಂಗಳು ವಾಯುಮಾಲಿನ್ಯ ನಿಯಂತ್ರಣ ಮಾಸವನ್ನಾಗಿ ಸಾರಿಗೆ ಇಲಾಖೆಯ ವತಿಯಿಂದ ಆಚರಿಸಲಾಗುತ್ತಿದೆ. ವಾಯುಮಾಲಿನ್ಯದ ಹಲವಾರು ದುಷ್ಪರಿಣಾಮಗಳಿದ್ದು, ವಾಯುಮಾಲಿನ್ಯಕ್ಕೆ ಕಡಿವಾಣ ಹಾಕುವುದು ಅತೀ ಅವಶ್ಯಕವಾಗಿದೆ. ಪರಿಸರ ಸಂರಕ್ಷಣೆ, ನದಿ ಕೆರೆಗಳ ರಕ್ಷಣೆಯು ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಕರ್ತವ್ಯವಾಗಿದೆ, ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸಿದಲ್ಲಿ ವಾಯುಮಾಲಿನ್ಯವನ್ನು ತಗ್ಗಿಸಬಹುದಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಾಹನಗಳ ಮಾಲೀಕರುಗಳು, ವಾಹನ ಚಾಲನಾ ತರಬೇತಿ ಶಾಲೆಯ ಪ್ರತಿನಿಧಿಗಳು, ಕಚೇರಿಯ ಸಿಬ್ಬಂದಿಗಳು, ಇತರರು ಉಪಸ್ಥಿತರಿದ್ದರು. ಮೆಹಬೂಬಲಿ ಡಿ. ಹೊಟೆಗಾಳಿ ಸ್ವಾಗತಿಸಿದರು. ಶ್ರೀಪಾದ ಬ್ಯಾಳಿಯವರ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.