ಕನ್ನಡಪ್ರಭ ವಾರ್ತೆ ಹಾಸನ
ಸಮಾಜದ ಪ್ರತಿಯೊಬ್ಬ ನಾಗರಿಕರೂ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಹೇಮಾವತಿ ತಿಳಿಸಿದರು.ನಗರದ ಹಾಸನಾಂಬಾ ಕಲಾಕ್ಷೇತ್ರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ವಕೀಲರ ಸಂಘ ಹಾಗೂ ವಿವಿಧ ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಜೀತಪದ್ಧತಿ ನಿರ್ಮೂಲನೆ ದಿನಾಚರಣೆ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನರು. ಎಲ್ಲರಿಗೂ ಸಮಾನ ನ್ಯಾಯ ಮತ್ತು ಅವಕಾಶ ದೊರಕಬೇಕು. ಸರ್ಕಾರದ ಸೌಲಭ್ಯಗಳು ಸಮಾಜದ ಪ್ರತಿಯೊಂದು ವರ್ಗಕ್ಕೂ ತಲುಪಬೇಕು ಎಂದು ಅವರು ಹೇಳಿದರು. ಗ್ರಾಮೀಣ ಭಾಗಗಳಲ್ಲಿ ಬಾಲ್ಯವಿವಾಹ ನಡೆಯುತ್ತಿರುವುದನ್ನು ಕಂಡಲ್ಲಿ ಎಲ್ಲಾ ಇಲಾಖೆಗಳು ಕೈಜೋಡಿಸಿ ಅದನ್ನು ತಡೆಯಬೇಕು. ಕಾನೂನು ಅರಿವು ಮೂಡಿಸುವುದು ಅತ್ಯಗತ್ಯ ಎಂದರು.
ಜಿಲ್ಲಾ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ ಶೆಟ್ಟಿ ಮಾತನಾಡಿ, ಜೀತದ ಕೆಲಸಕ್ಕೆ ಒಳಗಾಗಿರುವ ಮಕ್ಕಳು ಕಂಡಲ್ಲಿ ಅವರನ್ನು ರಕ್ಷಿಸುವುದು ಮತ್ತು ಅಂತಹ ಪ್ರಕರಣಗಳನ್ನು ಖಂಡಿಸುವುದು ಸರ್ಕಾರಿ ಅಧಿಕಾರಿಗಳಷ್ಟೇ ಅಲ್ಲ, ಸಾರ್ವಜನಿಕರ ಕರ್ತವ್ಯವೂ ಹೌದು ಎಂದು ಹೇಳಿದರು. ಇಂದಿಗೂ ಕೆಲವೆಡೆ ಮಕ್ಕಳನ್ನು ಶಿಕ್ಷಣದಿಂದ ದೂರವಿಟ್ಟು ಜೀತದಾಳಾಗಿ ದುಡಿಸಿಕೊಳ್ಳುತ್ತಿರುವುದು ವಿಷಾದನೀಯ. ಜೀತಪದ್ಧತಿ ಸಂಪೂರ್ಣ ನಿರ್ಮೂಲವಾಗಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.ಕಾನೂನು ಸೇವೆಗಳ ಪ್ರಾಧಿಕಾರವು ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸುವ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಿದೆ. ಪ್ರತಿಯೊಂದು ಶಾಲೆ ಮತ್ತು ಕಾಲೇಜುಗಳಲ್ಲಿ ಪ್ರತಿ ತಿಂಗಳು ಕಾನೂನು ಅರಿವು ಶಿಬಿರಗಳನ್ನು ಆಯೋಜಿಸಬೇಕು ಎಂದು ಅವರು ಸಲಹೆ ನೀಡಿದರು.ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಕರ್ನಾಟಕ ರಾಜ್ಯದಲ್ಲಿ ವರ್ಷಕ್ಕೆ ಸುಮಾರು 1.70 ಲಕ್ಷ ಅಪಘಾತಗಳು ಸಂಭವಿಸುತ್ತಿವೆ. ರಸ್ತೆ ನಿಯಮಗಳನ್ನು ಪಾಲಿಸದಿರುವುದೇ ಇದಕ್ಕೆ ಮುಖ್ಯ ಕಾರಣ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಅಪಘಾತಗಳನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದರು.ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ ಬಿ.ಕೆ. ಮಾತನಾಡಿ, ಸಾಲ ನೀಡಿ ವ್ಯಕ್ತಿಯನ್ನು ಜೀವನಪರ್ಯಂತ ಜೀತದಾಳಾಗಿ ದುಡಿಸಿಕೊಳ್ಳುವುದೇ ಜೀತಪದ್ಧತಿ ಎಂದು ವಿವರಿಸಿದರು. ಇಂದಿನ ದಿನಗಳಲ್ಲಿ ಜೀತಪದ್ಧತಿ ಕಡಿಮೆಯಾಗುತ್ತಿರುವುದಾದರೂ ಕೆಲವು ಟೀ ಮತ್ತು ಕಾಫಿ ತೋಟಗಳಲ್ಲಿ ಇನ್ನೂ ಗುಪ್ತವಾಗಿ ನಡೆಯುತ್ತಿರುವುದು ಕಂಡುಬರುತ್ತಿದೆ. ಇಂತಹ ಪ್ರಕರಣಗಳು ಕಂಡುಬಂದರೆ ತಕ್ಷಣ ಸಾರ್ವಜನಿಕ ಸೇವಾ ಸಂಸ್ಥೆಗಳಿಗೆ ಮಾಹಿತಿ ನೀಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದರು.
ಜಿಲ್ಲಾ ಆಡಳಿತ ವರ್ಗದ ಸದಸ್ಯ ಬಿ. ಚಂದ್ರಶೇಖರ್ ಮಾತನಾಡಿ, ಸಾಲದ ಸುಳಿಗೆ ಸಿಲುಕಿದ ಹಲವರು ಜೀತದಾಳಾಗುತ್ತಾರೆ. ಜೀತಪದ್ಧತಿ ತಲೆತಲಾಂತರಗಳಿಂದ ಬಂದಿರುವ ಅನಿಷ್ಟ ಪದ್ಧತಿ. ಮೇಲುಕೀಳು ಭಾವನೆ, ಜಾತಿ ತಾರತಮ್ಯ, ಬಡತನ, ಅನಕ್ಷರತೆ, ಸಾಲದ ಹೊರೆ, ಕುಡಿತ ಚಟ ಮತ್ತು ಜೂಜಾಟ ಇವುಗಳು ಜೀತ ಪದ್ಧತಿಗೆ ಪ್ರಮುಖ ಕಾರಣಗಳಾಗಿವೆ ಎಂದರು. ಸಮಾನ ವೇತನ, ಸಮಾನ ಅವಕಾಶ ಮತ್ತು ಪರಿಣಾಮಕಾರಿ ಪರಿಹಾರ ವ್ಯವಸ್ಥೆ ಜಾರಿಗೆ ತಂದಲ್ಲಿ ಈ ಪದ್ಧತಿಯನ್ನು ಸಂಪೂರ್ಣ ನಿರ್ಮೂಲಗೊಳಿಸಬಹುದು ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ. ಆರ್. ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣವರ್, ವಕೀಲರ ಸಂಘದ ಅಧ್ಯಕ್ಷ ಕಾರ್ಲೆ ಮೊಗಣ್ಣಗೌಡ ಹಾಗೂ ತಮ್ಮಣ್ಣ ಗೌಡ, ಮೋಹನ್ ರಾವ್, ಕೃಷ್ಣಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.