ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಆರೋಗ್ಯವೇ ಭಾಗ್ಯ ಎನ್ನುವ ಹಾಗೆ ಎಲ್ಲರಿಗೂ ಸಮತೋಲನದ ಜೀವನ ಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ಸಿದ್ದರಾಮ ಹೇಳಿದರು.ಸವದತ್ತಿಯ ನ್ಯಾಯವಾದಿಗಳ ಸಂಘದ ಸಭಾಭವನದಲ್ಲಿ ಸವದತ್ತಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಜೆಂಟ್ಸ್ ಗ್ರುಫ್, ಜೆಂಟ್ಸ್ ಗ್ರುಫ್ ಆಫ್ ರೇಣುಕಾ ಸಹೇಲಿ, ಎಲುಬು ಮತ್ತು ಕೀಲು ಆಸ್ಪತ್ರೆ ಹಾಗೂ ಹುಬ್ಬಳ್ಳಿ ಪ್ರೇಮ ಬಿಂದು ರಕ್ತ ನಿಧಿ ಕೇಂದ್ರ ವಿದ್ಯಾನಗರ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ಉಚಿತ ತಪಾಸಣ ಶಿಬಿರ, ಮೂಳೆ ಸಾಂದ್ರತೆ (BMD) ಉಚಿತ ತಪಾಸಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸಾಕಷ್ಟು ಕಡೆ ನಾವು ಅಪಘಾತಗಳನ್ನು ನೋಡುತ್ತಿರುತ್ತೇವೆ. ಅಪಘಾತದ ಸಂದರ್ಭಗಳಲ್ಲಿ ಹೆಚ್ಚಾಗಿ ರಕ್ತದ ಅವಶ್ಯಕತೆ ಇರುತ್ತದೆ. ಅಲ್ಲದೇ ರಕ್ತದಾನದಿಂದ ಅನೇಕ ತೆರನಾದ ಉಪಯೋಗಗಳಿವೆ. ಆದ್ದರಿಂದ ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳುವ ಸಲುವಾಗಿ ಈ ಶಿಬಿರದ ಉಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.ನ್ಯಾಯವಾದಿ ಎಂ.ಬಿ.ದ್ಯಾಯಾಮನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ, ಆರೋಗ್ಯ ಉಚಿತ ತಪಾಸಣಾ ಶಿಬಿರಗಳು ಸಾಮಾನ್ಯವಾಗಿ ಕೆಲವು ಸ್ಥಳೀಯ ಸಂಸ್ಥೆಗಳು, ಆಸ್ಪತ್ರೆಗಳು ಅಥವಾ ಸರ್ಕಾರಿ ಇಲಾಖೆಗಳಿಂದ ಆಯೋಜಿಸಲ್ಪಡುತ್ತವೆ. ಇಂತಹ ಶಿಬಿರಗಳಲ್ಲಿ ವೈದ್ಯರು ವಿವಿಧ ಆರೋಗ್ಯ ಸಮಸ್ಯೆಗಳಿಗಾಗಿ ಉಚಿತವಾಗಿ ತಪಾಸಣೆ ಮಾಡುತ್ತಾರೆ ಮತ್ತು ಅಗತ್ಯವಿದ್ದರೆ ಚಿಕಿತ್ಸೆ ಅಥವಾ ಸಲಹೆ ನೀಡುತ್ತಾರೆ. ಈ ಶಿಬಿರಗಳು ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆರೋಗ್ಯ ಸಮಸ್ಯೆಗಳನ್ನು ಮೊದಲ ಹಂತದಲ್ಲೇ ಪತ್ತೆಹಚ್ಚಲು ಸಹಾಯ ಮಾಡುತ್ತವೆ ಎಂದು ತಿಳಿಸಿದರು.ಅರ್ಥೋಪೇಡಿಕ್ ಆಸ್ಪತ್ರೆಯ ಎಲುಬು ಮತ್ತು ಕೀಲು ತಜ್ಞ ಡಾ.ಹೇಮಂತ ಭಸ್ಮೆ ಮಾತನಾಡಿ, 65 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ಮಹಿಳೆಯೂ ನಿಯಮಿತವಾಗಿ ಬಿಎಂಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಹುಬ್ಬಳ್ಳಿಯ ಪ್ರೇಮ ಬಿಂದು ರಕ್ತ ಕೇಂದ್ರದ ವೈದ್ಯಾಧಿಕಾರಿ ಡಾ.ವೀರಗಂಗಾಧರ ನಿಟ್ಟಾಲಿ ಉಪನ್ಯಾಸ ನೀಡಿ, ರಕ್ತದಾನವು ದೇಹವು ಅದರ ಪೂರೈಕೆಯನ್ನು ಪುನಃ ತುಂಬಿಸಲು ಶಕ್ತಗೊಳಿಸುತ್ತದೆ ಮತ್ತು ಒಟ್ಟಾರೆ ಕಾರ್ಯವನ್ನು ಸುಧಾರಿಸುತ್ತದೆ. ಹೆಚ್ಚಿನ ಜನರು ಪ್ರತಿ 56 ದಿನಗಳಿಗೊಮ್ಮೆ ದಾನ ಮಾಡಬಹುದು. ಆಗಾಗ್ಗೆ ರಕ್ತದಾನವು ಹೃದಯಾಘಾತ ಮತ್ತು ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ. ಹೃದಯರಕ್ತನಾಳದ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡುತ್ತದೆ. ಅಂತಾ ರಕ್ತದಾನದಿಂದ ಆಗುವ ಪ್ರಯೋಜನಗಳ ಬಗ್ಗೆ ವಿವರಿಸಿದರು.ನ್ಯಾಯವಾದಿಗಳ ಸಂಘದ ಅಧ್ಯಕ್ಷ ಜೆ.ಬಿ.ಮುನವಳ್ಳಿ ಅಧ್ಯಕ್ಷತೆ ಭಾಷಣ ಮಾಡಿ, ಜನರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಈ ಆರೋಗ್ಯ ಉಚಿತ ತಪಾಸನಾ ಶಿಬಿರ ಆಯೋಜಿಸಲಾಗಿದೆ. ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಂಡು ಜೀವ ಶೈಲಿ ಸಾಧ್ಯವಾದಷ್ಟು ಬದಲಾವಣೆ ಮಾಡಿಕೊಳ್ಳುವುದು ಉತ್ತಮ ಎಂದರು.ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಿದ್ರಾಮ ರೆಡ್ಡಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಕೃಷ್ಣಪ್ಪ ಪಮ್ಮಾರ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಎಂ.ಎಸ್.ಹುಬ್ಬಳ್ಳಿ, ಜೈಂಟ್ಸ್ ಗ್ರುಪಿನ ಅಧ್ಯಕ್ಷ ನಾಗರಾಜ ಬೊನಗೇರಿ, ಜೈಂಟ್ಸ್ ಗ್ರುಪ ರೇಣುಕಾ ಸಹೇಲಿಯ ಅಧ್ಯಕ್ಷ ಹಸೀನಾ ಯಲಿಗಾರ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಎಂ.ಬಿ.ದ್ಯಾಮನಗೌಡರ ಸ್ವಾಗತಿಸಿದರು. ಎಸ್.ಎಸ್.ಕಾಳಪ್ಪನವರ ನಿರೂಪಿಸಿ, ವಂದಿಸಿದರು.ಬಿಎಂಡಿ ಅಥವಾ ಮೂಳೆ ಖನಿಜ ಸಾಂದ್ರತೆ ಪರೀಕ್ಷೆಯು ಜನರು ತಮ್ಮ ಮೂಳೆಯ ಪ್ರದೇಶದಲ್ಲಿ ಹೊಂದಿರುವ ಕ್ಯಾಲ್ಸಿಯಂ ಮತ್ತು ಇತರ ರೀತಿಯ ಖನಿಜಗಳ ಪ್ರಮಾಣವನ್ನು ಮೌಲ್ಯಮಾಪನ ಮಾಡಲು ಒಂದು ರೋಗ ನಿರ್ಣಯ ವಿಧಾನವಾಗಿದೆ. ಈ ಪರೀಕ್ಷೆಯು ಒಬ್ಬ ವ್ಯಕ್ತಿಗೆ ಆಸ್ಟಿಯೊಪೊರೋಸಿಸ್ ಇದೆಯೇ ಎಂದು ಕಂಡುಹಿಡಿಯಲು ಸಹಾಯ ಮಾಡುತ್ತದೆ ಮತ್ತು ಮೂಳೆ ಮುರಿತದ ಅಪಾಯ ಊಹಿಸುತ್ತದೆ.
-ಡಾ.ಹೇಮಂತ ಭಸ್ಮೆ, ಅರ್ಥೋಪೇಡಿಕ್ ಆಸ್ಪತ್ರೆಯ ಎಲುಬು ಮತ್ತು ಕೀಲು ತಜ್ಞರು.