ಪ್ರತಿಯೊಬ್ಬರ ಬಾಳು ಬೆಳಗಲು ಪುಸ್ತಕಗಳು ಬೇಕು: ಆರ್.ಎಲ್. ಪೊಲೀಸ್ ಪಾಟೀಲ

| Published : Mar 13 2025, 12:53 AM IST

ಸಾರಾಂಶ

ಮುಂಡರಗಿಯ ಕ.ರಾ. ಬೆಲ್ಲದ ಮಹಾವಿದ್ಯಾಲಯದ ಸಭಾಭವನದಲ್ಲಿ ದತ್ತಿ ಉಪನ್ಯಾಸ ಮತ್ತು ವಿಜ್ಞಾನ ದಿನಾಚರಣೆ, ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಪ್ರೊ. ಸಿ.ಡಿ. ಪಾಟೀಲ ಅವರ 101 ಸರಳ ಪ್ರಯೋಗಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಮುಂಡರಗಿ: ಪುಸ್ತಕಗಳು ಶಾಶ್ವತ ಸಂಪತ್ತು. ಲೋಕ ಬೆಳಗುವುದಕ್ಕೆ ಸೂರ್ಯ ಬೇಕು, ಪ್ರತಿಯೊಬ್ಬರ ಬಾಳು ಬೆಳಗಲು ಪುಸ್ತಕಗಳು ಬೇಕು ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಆರ್.ಎಲ್. ಪೊಲೀಸ್ ಪಾಟೀಲ ಹೇಳಿದರು.

ಇಲ್ಲಿಯ ಕ.ರಾ. ಬೆಲ್ಲದ ಮಹಾವಿದ್ಯಾಲಯದ ಸಭಾಭವನದಲ್ಲಿ ತಾಲೂಕು ಕಸಾಪ, ಸಾವಿತ್ರಮ್ಮ ಚಾರಿಟೇಬಲ್ ಟ್ರಸ್ಟ್, ಭಾರತೀಯ ವಿಜ್ಞಾನ ಕೇಂದ್ರ, ಎಂ.ಎಸ್. ಡಂಬಳ ಬಾಲಕಿಯರ ಪ್ರೌಢಶಾಲೆ ಇತ್ತೀಚೆಗೆ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಮತ್ತು ವಿಜ್ಞಾನ ದಿನಾಚರಣೆ, ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಪ್ರೊ. ಸಿ.ಡಿ. ಪಾಟೀಲ ಅವರ 101 ಸರಳ ಪ್ರಯೋಗಗಳು ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಮಕ್ಕಳು ವೈಜ್ಞಾನಿಕ ಆವಿಷ್ಕಾರಗಳನ್ನು ಅರಿಯಲು ಮತ್ತು ಸರಳ ಪ್ರಯೋಗಗಳನ್ನು ಮಾಡಲು ಈ ಸರಳ ಪ್ರಯೋಗಗಳ ಕೃತಿ ಉಪಯುಕ್ತವಾಗಿದೆ ಎಂದರು.

ಜ.ಅ. ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಜ.ಅ. ವಿದ್ಯಾ ಸಮಿತಿ ಶತಮಾನೋತ್ಸವದ ನಿಮಿತ್ತ ವಿಜ್ಞಾನಕ್ಕೆ ಸಂಬಂಧಿಸಿದಂತೆ ಒಂದು ವಾರದ ಕಾರ್ಯಕ್ರಮಗಳನ್ನು ಆಯೋಜಿಸಲು ಚಿಂತನೆ ನಡೆಸಿದೆ. ಬದುಕಿನಲ್ಲಿ ವೈಜ್ಞಾನಿಕ ಯುಗದಲ್ಲಿ ಹೊಸ ಆವಿಷ್ಕಾರಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ದಿಸೆಯಲ್ಲಿ ಪ್ರಕೃತಿಗೆ ಪೂರಕ ಬದುಕು ಸಾಗಿಸಬೇಕೆ ಹೊರತು ಮಾರಕವಾಗಿರಬಾರದು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಫಡ್ನೇಶಿ ಮಾತನಾಡಿ, ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ವಿಜ್ಞಾನ ತಂತ್ರಜ್ಞಾನ ಕುರಿತು ಹೆಚ್ಚು ಮಾಹಿತಿ ಪಡೆಯಬೇಕು ಎಂದರು. ವೈಜ್ಞಾನಿಕ ವಿಷಯಗಳ ಅರಿಕೆ ಮತ್ತು ಮೌಲ್ಯಗಳ ಕುರಿತು ಮಕ್ಕಳಿಗೆ ತಿಳಿಸಿದರು.

ದತ್ತಿ ದಾನಿ ಪ್ರೊ. ಸಿ.ಡಿ. ಪಾಟೀಲ ಮಾತನಾಡಿ, ಪ್ರತಿಯೊಂದು ಮನೆಗೂ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಳ್ಳುವ ಮೂಲಕ ಜಲ ಸ್ವಾವಲಂಬನೆಯನ್ನು, ಸೋಲಾರ್ ಬಳಕೆ ಮಾಡಿಕೊಳ್ಳುವ ಮೂಲಕ ಆರ್ಥಿಕ ಅನುಕೂಲವನ್ನು, ಆರೋಗ್ಯ ಕಾಳಜಿ ಮಾಡಿಕೊಳ್ಳುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ಶಿಕ್ಷಕಿ ದೀಪುಶ್ರೀ ಕಣವಿ, ತಾಲೂಕು ಕಸಾಪ ಅಧ್ಯಕ್ಷ ಪ್ರೊ. ಎಂ.ಜಿ. ಗಚ್ಚಣ್ಣವರ ಮಾತನಾಡಿದರು. ವಿಶ್ರಾಂತ ಪ್ರಾಚಾರ್ಯ ಎ.ವಿ. ಹಳ್ಳಿಕೇರಿ ವಿಜ್ಞಾನದ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಅಂತಾರಾಷ್ಟ್ರೀಯ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿರುವ ಸಿಂಗಟಾಲೂರು ಪ್ರೌಢಶಾಲೆಯ ವಿದ್ಯಾರ್ಥಿನಿ ರಕ್ಷಿತಾ ಚುರ್ಚಿಹಾಳ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಸಿ.ಬಿ. ಕಾಟ್ರಳ್ಳಿ ಸ್ವಾಗತಿಸಿದರು. ಎಸ್.ಬಿ. ಗಿಂಡಿಮಠ ಕಾರ್ಯಕ್ರಮ ನಿರೂಪಿಸಿದರು.