ಸಾರಾಂಶ
ಲಕ್ಷೇಶ್ವರ: ಪರಿಸರ ರಕ್ಷಣೆ ಮಾಡುವ ಕಾಳಜಿ ಪ್ರತಿಯೊಬ್ಬ ನಾಗರಿಕರಲ್ಲಿ ಬಂದಾಗ ಮಾತ್ರ ಸಮಾಜದಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಭೂಮಿ ಮತ್ತು ಪರಿಸರ ಕಾಳಜಿಯನ್ನು ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ಚಿಕ್ಕಂದಿನಿಂದಲೇ ಬೆಳೆಸುವ ಕಾರ್ಯ ಮಾಡಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಭರತ್ ಯೋಗೀಶ್ ಕರಗುದರಿಯವರು ಅಭಿಪ್ರಾಯಪಟ್ಟರು.
ಅವರು ಮಂಗಳವಾರ ತಾಲೂಕು ಕಾನೂನು ಸೇವಾ ಸಮಿತಿ ಲಕ್ಷೇಶ್ವರ, ವಕೀಲರ ಸಂಘ ಲಕ್ಷೇಶ್ವರ ಮತ್ತು ಶಿರಹಟ್ಟಿ ಹಾಗೂ ಅರಣ್ಯ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಭೂ ದಿನದ ಪ್ರಯುಕ್ತ ನ್ಯಾಯಾಲಯದ ಆವರಣದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.ಭೂಮಿಯೊಂದಿಗೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅವಿನಾಭಾವ ಸಂಬಂಧವಿದ್ದು ಪಾಶ್ಚಾತ್ಯ ಸಂಸ್ಕೃತಿಯಿಂದ ಅದರ ಕೊಂಡಿ ಕಳಚಿದೆ. ಅದನ್ನು ಮತ್ತೆ ಕೂಡಿಸುವುದರ ಜೊತೆಗೆ ಪರಿಸರವನ್ನು ಉಳಿಸೋಣ. ಪ್ರತಿಯೊಬ್ಬ ವಕೀಲರು, ಸಿಬ್ಬಂದಿಗಳು ತಮ್ಮ ಹೆಸರಿನಲ್ಲಿ ಒಂದು ಗಿಡ ನೆಟ್ಟು ಅದನ್ನು ಕಾಪಾಡುವ ಸಂಕಲ್ಪ ಕೈಗೊಂಡು ನ್ಯಾಯಾಲಯ ಆವರಣವನ್ನು ಸುಂದರ ಪರಿಸರವಾಗಿಸೋಣ ಎಂದು ಕರೆ ನೀಡಿದರು.ಹಿರಿಯ ವಕೀಲ ಎಸ್.ಪಿ. ಬಳಿಗಾರ ಮಾತನಾಡಿ, ಏಪ್ರಿಲ್ ೨೨ನ್ನು ವಿಶ್ವ ಭೂ ದಿನ ಎಂದು ೧೯೭೦ರಿಂದ ಆಚರಿಸಲಾಗುತ್ತಿದೆ. ನಮಗೆ ಭೂಮಿ ತಾಯಿ ಇದ್ದಂತೆ, ನಾವು ಏನನ್ನು ಪಡೆದರೂ ಭೂಮಿ ತಾಯಿ ಕೊಟ್ಟಳು ಎಂದು ಗೌರವದಿಂದ ಭೂಮಿಯನ್ನು ಕಾಣುತ್ತೇವೆ, ಅದನ್ನು ರಕ್ಷಿಸುವದು ನಮ್ಮೆಲ್ಲರ ಕರ್ತವ್ಯ ಎಂದರು.ಅದೇ ರೀತಿ ಸಹಾಯಕ ಅರಣ್ಯ ಅಧಿಕಾರಿ ಮೇಘನಾ ಮಾತನಾಡಿ, ನಮ್ಮ ನೆಲದ ಅರಣ್ಯ ಕಾಯ್ದೆಯ ಪ್ರಕಾರ ೩೩ ರಷ್ಟು ಭೂ ಭಾಗ ಅರಣ್ಯದಿಂದ ಕೂಡಿರಬೇಕು ಆದರೆ ಅಷ್ಟು ಭಾಗ ಅರಣ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಎಲ್ಲರೂ ಪ್ರಯತ್ನಿಸೋಣ, ಗದಗ ನಗರದಲ್ಲಿ ಅರಣ್ಯ ಭಾಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸಾರ್ವಜನಿಕರೊಂದಿಗೆ ಪ್ರಯತ್ನಿಸುತ್ತಿದೆ ಎಂದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಬಿ.ವಿ. ನೇಕಾರ, ಪ್ರ.ಕಾರ್ಯದರ್ಶಿ ವಿ.ಎಸ್. ಪಶುಪತಿಹಾಳ, ಹಿರಿಯ ವಕೀಲರುಗಳಾದ ಬಿ.ಎಸ್. ಬಾಳೇಶ್ವರಮಠ, ವಿ.ಆರ್. ಪಾಟೀಲ್, ಎ.ಟಿ. ಕಟ್ಟಿಮನಿ, ಎಸ್.ಡಿ. ಕಮತದ, ಆರ್.ಎಂ.ಪೂಜಾರ್, ಪಿ.ಎಂ.ವಾಲಿ, ಎ.ಎ. ಬೇವಿನಗಿಡದ, ಎಸ್.ವೈ. ಗೊಬ್ಬರಗುಂಪಿ, ಆರ್.ಎಂ.ಕುರಿ. ಎಸ್. ಎಚ್.ಮುಳಗುಂದ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಚೌಹಾಣ್ ಉಪಸ್ಥಿತರಿದ್ದರು.