ಸಾರಾಂಶ
ಕಣ್ಣಿನ ನಿರ್ಲಕ್ಷ್ಯ ಮಾಡಬಾರದು. ಸಣ್ಣಪುಟ್ಟ ತೊಂದರೆ, ಕಾಯಿಲೆ ಕಂಡುಬಂದಲ್ಲಿ ಉದಾಸೀನ ಮಾಡದೇ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಸಲಹೆ, ಚಿಕಿತ್ಸೆ ಪಡೆಯುವುದು ಅತಿ ಮುಖ್ಯವಾಗಿದೆ
ರೋಣ: ಮನುಷ್ಯನ ಪಂಚೇಂದ್ರಿಯಗಳಲ್ಲಿ ಪ್ರಮುಖ ಅಂಗವಾದ ನೇತ್ರ ಅತ್ಯಂತ ಶ್ರೇಷ್ಠವಾದುದು. ಅದರ ರಕ್ಷಣೆ ಅತಿ ಅವಶ್ಯವಾಗಿದ್ದು, ಯಾವುದೇ ಕಾರಣಕ್ಕೂ ನಿಷ್ಕಾಳಜಿ ಮಾಡಬಾರದು ಎಂದು ಭಾರತೀಯ ವೈದ್ಯಕೀಯ ಸಂಘದ ಮಾಜಿ ರಾಜಾಧ್ಯಕ್ಷ ಡಾ. ಎಸ್.ಬಿ. ಲಕ್ಕೋಳ ಹೇಳಿದರು.
ಪಟ್ಟಣದ ರಾಜೀವಗಾಂಧಿ ಆಯುರ್ವೇದಿಕ್ ಆಸ್ಪತ್ರೆ ಆವರಣದಲ್ಲಿ ಮಾತೋಶ್ರೀ ಬಸಮ್ಮ ಎಸ್. ಪಾಟೀಲ ಅವರ 21ನೇ ಪುಣ್ಯಸ್ಮರಣೆ ಅಂಗವಾಗಿ ಮಾತೋಶ್ರೀ ಬಸಮ್ಮ ಎಸ್. ಪಾಟೀಲ ಪುಣ್ಯಸ್ಮರಣೋತ್ಸವ ಸಮಿತಿ, ಆರ್.ಎಸ್. ಪಾಟೀಲ ಪ್ರತಿಷ್ಠಾನ, ರಾಜೀವಗಾಂಧಿ ಆಯುರ್ವೇದಿಕ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಜರುಗಿದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ, ಗಾಜು ಬಿಂದು ಅಳವಡಿಕೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಜಾಗತಿಕ ಸೌಂದರ್ಯ ನೋಡಿ ಆನಂದಿಸಲು, ನಿತ್ಯ ಬದುಕಿನ ಅವಿಭಾಜ್ಯ ಅಂಗವಾಗಿ ಕಣ್ಣುಗಳು ಪ್ರಮುಖವಾಗಿದೆ. ಕಣ್ಣಿನ ನಿರ್ಲಕ್ಷ್ಯ ಮಾಡಬಾರದು. ಸಣ್ಣಪುಟ್ಟ ತೊಂದರೆ, ಕಾಯಿಲೆ ಕಂಡುಬಂದಲ್ಲಿ ಉದಾಸೀನ ಮಾಡದೇ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಸಲಹೆ, ಚಿಕಿತ್ಸೆ ಪಡೆಯುವುದು ಅತಿ ಮುಖ್ಯವಾಗಿದೆ ಎಂದು ಹೇಳಿದರು.ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ನಮ್ಮ ಮಾತೋಶ್ರೀ ಸ್ಮರಣಾರ್ಥವಾಗಿ 21 ವರ್ಷಗಳಿಂದ ಆರೋಗ್ಯ ತಪಾಸಣೆ, ನೇತ್ರ ತಪಾಸಣೆ, ಸಕ್ಕರೆ ಕಾಯಿಲೆ, ರಕ್ತದೊತ್ತಡ ಕಾಯಿಲೆ ಪರೀಕ್ಷೆ ಮತ್ತು ಚಿಕಿತ್ಸೆ ಶಿಬಿರ ಹಮ್ಮಿಕೊಳ್ಳುತ್ತಾ ಬಂದಿದ್ದು, ಈ ಬಾರಿ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ ಶಿಬಿರದ ಜತೆಗೆ ಹೃದಯ ಸಂಬಂಧಿ ಕಾಯಿಲೆ ತಪಾಸಣೆ, ಚಿಕಿತ್ಸೆ ಹಾಗೂ ಮಹಿಳೆಯರಲ್ಲಿ ಕಂಡುಬರುವ ಗರ್ಭಕೋಶ ಕ್ಯಾನ್ಸರ್ ತಡೆಗೆ 9 ವರ್ಷದಿಂದ 14 ವರ್ಷದೊಳಗಿನ ಹೆಣ್ಣು ಮಕ್ಕಳಿಗ ಉಚಿತವಾಗಿ ಎಚ್‌ವಿಪಿ ಲಸಿಕೆ ಹಾಕಿಸಲು ಮುಂದಾಗಿದೆ. ಎಚ್‌ವಿಪಿ ಲಸಿಕೆ ಅತ್ಯಂತ ಸುರಕ್ಷಿತವಾಗಿದ್ದು, ಭಯಪಡದೆ ಹೆಣ್ಣು ಮಕ್ಕಳಿಗೆ ಹಾಕಿಸಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ ಮಾತನಾಡಿದರು. ಮಾಜಿ ಸಂಸದ ಆರ್.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ, ಡಾ. ಕೆ.ಬಿ. ಧನ್ನೂರ, ಐ.ಎಸ್. ಪಾಟೀಲ, ವಿ.ಆರ್. ಗುಡಿಸಾಗರ, ದಶರಥ ಗಾಣಿಗೇರ, ಮಿಥುನ ಪಾಟೀಲ, ಪುರಸಭೆ ಅಧ್ಯಕ್ಷೆ ಬಸಮ್ಮ ಕೊಪ್ಪದ, ಉಪಾಧ್ಯಕ್ಷ ಹನುಮಂತಪ್ಪ ತಳ್ಳಿಕೇರಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ರಮೇಶ ಪಲ್ಲೇದ, ಉಪಾಧ್ಯಕ್ಷ ಯಚ್ಚರಗೌಡ ಗೋವಿಂದಗೌಡ್ರ, ಪರಶುರಾಮ ಅಳಗವಾಡಿ, ಸಿದ್ದಣ್ಣ ಬಂಡಿ, ವಿಶ್ವನಾಥ ಜಿಡ್ಡಿಬಾಗೀಲ, ಸುಭಾಸ ಮ್ಯಾಗೇರಿ, ಅಭಿಷೇಕ ನವಲಗುಂದ, ಡಾ. ಎಲ್.ಡಿ. ಬಾಕಳೆ ಉಪಸ್ಥಿತರಿದ್ದರು. ವಿ.ಬಿ. ಸೋಮನಕಟ್ಟಿಮಠ ಸ್ವಾಗತಿಸಿದರು. ಡಾ. ಆನಂದ ಕೇರಿಯವರ ಕಾರ್ಯಕ್ರಮ ನಿರೂಪಿಸಿದರು. ವೀರಭದ್ರಗೌಡ ಪಾಟೀಲ ವಂದಿಸಿದರು.