ಸಾರಾಂಶ
ಕನ್ನಡಪ್ರಭ ವಾರ್ತೆ ಹುಮನಾಬಾದ್
ಪ್ರಕೃತಿ ನಮಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶುದ್ಧ ನೀರು, ಗಾಳಿ, ಆಹಾರ ಸೇರಿದಂತೆ ಇನ್ನು ಅನೇಕ ಅಗತ್ಯ ವಸ್ತುಗಳನ್ನು ನೀಡುತ್ತಿದೆ. ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸ್ವ ಇಚ್ಛೆಯಿಂದ ಗಿಡ, ಮರಗಳನ್ನು ಬೆಳೆಸಿ, ಪರಿಸರ ಸಂರಕ್ಷಿಸಬೇಕೆಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಅಲ್ತಾಫ್ ಖನಗಾಂವಿ ತಿಳಿಸಿದರು.ಪಟ್ಟಣದ ಸರ್ಕಾರಿ ಬಾಲಕರ ಸಂಯುಕ್ತ ಪ್ರೌಢಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಪ್ರಯುಕ್ತ ಗೀಡಕ್ಕೆ ನೀರು ಎರೆಯುವ ಮೂಲಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಕೃತಿಯಲ್ಲಿನ ಏರುಪೇರುಗಳಿಂದ ಭೂಮಿಯ ತಾಪಮಾನ ಹೆಚ್ಚಾಗಿದ್ದು ಅದರಿಂದ ಪ್ರಾಕೃತಿಕ ಅಸಮತೋಲನ ಏರ್ಪಟ್ಟಿದೆ. ತಾಪಮಾನವನ್ನು ನಿಯಂತ್ರಿಸಿ ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರತಿಯೊಬ್ಬರೂ ಮರಗಿಡಗಳನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಬಸವಕಲ್ಯಾಣ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜೇಂದ್ರ ಡೈಜೋಡೆ ಮಾತನಾಡಿ, ಕಾಡನ್ನು ಉಳಿಸಿ, ಬೆಳೆಸಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಶಾಲಾ ಆವರಣದಲ್ಲಿ ಇಂದು ನೆಟ್ಟಿರುವ ಗಿಡಗಳನ್ನು ಸೂಕ್ತವಾಗಿ ಆರೈಕೆ ಮಾಡಿ ಅವುಗಳನ್ನು ಉಳಿಸಿ ಬೆಳೆಸಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ವಲಯ ಅರಣ್ಯಾಧಿಕಾರಿ ಶಿವಕುಮಾರ ರಾಠೋಡ ಮಾತನಾಡಿ, ಗಿಡ, ಮರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸುವುದರಿಂದ ಸ್ವಚ್ಚ ಗಾಳಿಯನ್ನು ಪಡೆಯಲು ಸಾಧ್ಯವಾಗುತ್ತದೆ. ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನ ಹಾಗೂ ಜನಸಂಖ್ಯೆ ಕಾರಣದಿಂದ ಮನುಷ್ಯ ತನ್ನ ವಸತಿ ಹಾಗೂ ಇತರ ವಿವಿಧ ಉದ್ದೇಶಗಳಿಗಾಗಿ ಗಿಡ ಮರಗಳನ್ನು ಕಡಿಯುತ್ತಿದ್ದಾನೆ. ಇದರಿಂದ ಪರಿಸರದಲ್ಲಿ ಅಸಮತೋಲನೆ ಉಂಟಾಗಿದೆ ಎಂದರು.
ಇಂದು ನಾವು ಉಸಿರಾಟ ತೊಂದರೆ, ಹೃದಯಾಘಾತದಂತಹ ವಿವಿಧ ತೊಂದರೆಗಳನ್ನು ಅನುಭವಿಸುವ ದುಃಸ್ಥಿತಿ ಬಂದೊದಗಿದೆ. ಅದನ್ನು ತಪ್ಪಿಸಿ ಎಲ್ಲರು ಆರೋಗ್ಯವಂತರಾಗಲು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರು ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.ಸಾಮಾಜಿಕ ವಲಯ ಅರಣ್ಯಾಧಿಕಾರಿ ಉಮಾ ನಾಯಕ್, ಉಪವಲಯ ಅರಣ್ಯಾಧಿಕಾರಿಗಳಾದ ಸಂತೋಷ ನಾಯಕೋಡ, ಅಂಬಾದಾಸ ಪಾಲಾಡೆ, ರೌಫಖಾನ್, ಪರಿಸರ ವಾದಿ ಶೈಲೇಂದ್ರ ಕಾವಡಿ, ಉಮಾಕಾಂತ, ಪ್ರಕಾಶ, ಶರಣಬಸಪ್ಪಾ ಭರಶಟ್ಟಿ, ಅರಣ್ಯಪಾಲಕರಾದ ಸಂಜು, ಸದಾನಂದ ಮಾಳಪ್ಪಾ, ಸರ್ವೋದಯ ಶಾಲೆ ಪ್ರಾಚಾರ್ಯ ಶಾಂತವೀರ ಯಲಾಲ, ಉಪ ಪ್ರಾಚಾರ್ಯ ಸಂತು ದೇವೆಂದ್ರ, ವೀರಾರೆಡ್ಡಿ ಜಂಪಾ, ಮೇಹಬೂಬ್ ಪಟೇಲ್ ಸೇರಿದಂತೆ ಅನೇಕರಿದ್ದರು.ಚಿತ್ರ 5ಬಿಡಿಆರ್52
ಹುಮನಾಬಾದ ಪಟ್ಟಣದ ಸರ್ಕಾರಿ ಬಾಲಕರ ಸಂಯುಕ್ತ ಪ್ರೌಢಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಜರುಗಿತು.