ದಸರಾ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಅಗತ್ಯ: ಮಹೇಶ್ ಜೈನಿ

| Published : Sep 27 2025, 12:02 AM IST

ದಸರಾ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಅಗತ್ಯ: ಮಹೇಶ್ ಜೈನಿ
Share this Article
  • FB
  • TW
  • Linkdin
  • Email

ಸಾರಾಂಶ

ದಸರಾ ಹಿನ್ನೆಲೆ ನಗರದ ಮುಖ್ಯಬೀದಿಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರ, ವೇದಿಕೆ ನಿರ್ಮಾಣ, ಡ್ರೋನ್, ಗ್ಯಾಲರಿ ನಿರ್ಮಾಣವನ್ನು ಒಟ್ಟು ೫೮ ಲಕ್ಷ ರು. ವೆಚ್ಚದಲ್ಲಿ ಮಾಡಲಾಗಿದೆ. ಶಾಸಕರ ಸಹಕಾರದೊಂದಿಗೆ ವ್ಯವಸ್ಥಿತವಾಗಿ ದಸರಾ ಆಚರಣೆಗೆ ದಸರಾ ಸಮಿತಿ ಸಿದ್ಧತೆ ಮಾಡುತ್ತಿದೆ. ಅಲ್ಲದೇ, ನಗರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಿದ ಪರಿಣಾಮ ಮೈಸೂರಿನ ದಸರಾ ವಾತಾವರಣ ಕಂಡುಬರುತ್ತಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿ ದಸರಾ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಅಗತ್ಯ ಎಂದು ನಗರಸಭೆ ಹಾಗೂ ನಗರ ದಸರಾ ಸಮಿತಿ ಉಪಾಧ್ಯಕ್ಷ ಮಹೇಶ್ ಜೈನಿ ಮನವಿ ಮಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ಹಿನ್ನೆಲೆ ನಗರದ ಮುಖ್ಯಬೀದಿಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರ, ವೇದಿಕೆ ನಿರ್ಮಾಣ, ಡ್ರೋನ್, ಗ್ಯಾಲರಿ ನಿರ್ಮಾಣವನ್ನು ಒಟ್ಟು ೫೮ ಲಕ್ಷ ರು. ವೆಚ್ಚದಲ್ಲಿ ಮಾಡಲಾಗಿದೆ. ಶಾಸಕರ ಸಹಕಾರದೊಂದಿಗೆ ವ್ಯವಸ್ಥಿತವಾಗಿ ದಸರಾ ಆಚರಣೆಗೆ ದಸರಾ ಸಮಿತಿ ಸಿದ್ಧತೆ ಮಾಡುತ್ತಿದೆ. ಅಲ್ಲದೇ, ನಗರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಿದ ಪರಿಣಾಮ ಮೈಸೂರಿನ ದಸರಾ ವಾತಾವರಣ ಕಂಡುಬರುತ್ತಿದೆ. ದಸರಾ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.

ಅ.೧ರಂದು ಆಯುಧ ಪೂಜೆ ನಡೆಯಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರನ್ನು ಆಹ್ವಾನಿಸಲಾಗಿದೆ. ಅಂದು ಖ್ಯಾತ ಗಾಯಕ ರಘು ದೀಕ್ಷಿತ್ ಆಗಮಿಸಲಿದ್ದು, ಗಾಯನದ ಮೂಲಕ ರಂಜಿಸಲಿದ್ದಾರೆ. ವಿಜಯದಶಮಿಯಂದು ದಕ್ಷಿಣ ಕನ್ನಡ ಜಿಲ್ಲೆಯ ಶೇಡ್ಸ್ ತಂಡದಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.

ನಗರ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ ಮಾತನಾಡಿ, ಪ್ರಸಕ್ತ ಸಾಲಿನ ದಸರಾ ಉತ್ಸವಕ್ಕೆ ೧.೫೦ ಕೋಟಿ ಸರ್ಕಾರದಿಂದ ಅನುದಾನ ನೀಡಲಾಗುತ್ತಿದೆ. ದಶಮಂಟಪ, ಕರಗ, ವಿವಿಧ ಕಾರ್ಯಕ್ರಮಗಳಿಗೆ ಸಾಕಷ್ಟು ವೆಚ್ಚವಾಗುತ್ತಿದೆ. ಆದ್ದರಿಂದ ಮುಂದಿನ ವರ್ಷದಿಂದ ೨ ಕೋಟಿ ನೀಡುವಂತೆ ಬೇಡಿಕೆ ಇಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಮತ್ತು ನಗರ ದಸರಾ ಸಮಿತಿ ಅಧ್ಯಕ್ಷೆ ಕಲಾವತಿ, ಖಜಾಂಚಿ ಸಬಿತಾ, ಕಾರ್ಯದರ್ಶಿ ಕಾನೇಹಿತ್ಲು ಮೊಣ್ಣಪ್ಪ ಇದ್ದರು.