ಪ.ಪಂಗಡ ಒಳಮೀಸಲಾತಿ ಸಮೀಕ್ಷೆಗೆ ಎಲ್ಲರ ಸಹಕಾರ ಅಗತ್ಯ: ಜಿಲ್ಲಾಧಿಕಾರಿ

| Published : May 20 2025, 11:48 PM IST

ಪ.ಪಂಗಡ ಒಳಮೀಸಲಾತಿ ಸಮೀಕ್ಷೆಗೆ ಎಲ್ಲರ ಸಹಕಾರ ಅಗತ್ಯ: ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತು ಮಂಗಳವಾರಒಂದು ದಿನದ ಅರಿವು ಕಾರ್ಯಾಗಾರ ನಡೆಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ತಿಳಿಸಿದರು.

ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತು ಮಂಗಳವಾರ ಹಮ್ಮಿಕೊಂಡ ಒಂದು ದಿನದ ಅರಿವು ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಅವರು, ನಮ್ಮೆಲ್ಲರ ಮೇಲೆ ಸಾಮಾಜಿಕ ಜವಾಬ್ದಾರಿ ಇದ್ದು, ಸಮೀಕ್ಷೆಯಲ್ಲಿ ನೈಜ ಮಾಹಿತಿ ಕಲೆ ಹಾಕಬೇಕಿದೆ. ಈ ಕಾರ್ಯದಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.

ನ್ಯಾಯಮೂರ್ತಿ ಡಾ.ಎಚ್.ಎನ್. ನಾಗಮೋಹನದಾಸ್ ಏಕಸದಸ್ಯ ವಿಚಾರಣೆ ಆಯೋಗ ಪರಿಶಿಷ್ಟ ಜಾತಿಯ ಒಳಮೀಸಲಾತಿಯ ವರ್ಗೀಕರಣಕ್ಕೆ ನೈಜ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಮೀಕ್ಷೆ ಹಮ್ಮಿಕೊಂಡಿದೆ. ಸರಕಾರದ ಇಂತಹ ಉದ್ದೇಶ ಸಾರ್ಥಕ ಆಗಬೇಕಾದರೆ ಪ್ರತಿಯೊಬ್ಬರು ತಮ್ಮ ತಮ್ಮ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕಿದೆ. ಸಮೀಕ್ಷೆಯಲ್ಲಿ ಯಾವುದೇ ರೀತಿಯ ತಪ್ಪು ಆಗದಂತೆ ಮುತುವರ್ಜಿ ವಹಿಸಬೇಕಾಗಿರುವುದರಿಂದ ಸಮುದಾಯದ ಮುಖಂಡರಿಗೆ ಈ ಕುರಿತು ಅರಿವು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸಮೀಕ್ಷೆ ಕೈಗೊಳ್ಳಲು ಜಿಲ್ಲೆಯ ಇಬ್ಬರು ಮಾಸ್ಟರ್‌ ಟ್ರೈನರ್‌ ಗಳನ್ನು ಬೆಂಗಳೂರಿಗೆ ಕಳುಹಿಸಿ ತರಬೇತಿ ಪಡೆದುಕೊಂಡಿದ್ದಾರೆ. ಮಾಸ್ಟರ್‌ ಟ್ರೈನರ್‌ಗಳ ಮೂಲಕ ಆಯಾ ತಾಲೂಕಿನ ಟ್ರೈನರ್‌ ಗಳಿಗೆ ತರಬೇತಿ ನೀಡಿ ಆಯಾ ತಾಲೂಕಿನ ಗಣತಿದಾರರಿಗೆ ಸಂಪೂರ್ಣ ತರಬೇತಿ ನೀಡಲಾಗಿದೆ. ಸಮೀಕ್ಷೆ ಕಾರ್ಯದಲ್ಲಿಯೇ ಕೆಲವು ಕಾಲಂ ಭರ್ತಿ ಮಾಡಲು ಮಾಹಿತಿ ದೊರಯದೇ ಇರುವುದು ಕಂಡುಬಂದಿದೆ. ಸಮೀಕ್ಷೆಯಲ್ಲಿ ಪ್ರತಿಯೊಂದು ಅಂಶಗಳನ್ನು ಗಣನೆಗೆ ತೆಗೆದುಕೊಂಡು ಕಾರ್ಯ ನಿರ್ವಹಿಸಲು ಗಣತಿದಾರರಿಗೆ ತಿಳಿಸಲಾಗಿದೆ. ಸಮೀಕ್ಷೆಯ ಬಗ್ಗೆ ದೂರುಗಳು ಇದ್ದಲ್ಲಿ ಜಿಲ್ಲೆಯಲ್ಲಿ ಸ್ಥಾಪಿಸಲಾದ ಹೆಲ್ಪಲೈನ್‌ ಗಳಿಗೆ ಇಲ್ಲವೇ ರಾಜ್ಯ ಮಟ್ಟದ ಸಹಾಯವಾಣಿ ಅಥವಾ ಜಿಲ್ಲಾಧಿಕಾರಿಗಳಿಗಾದರೂ ಕರೆ ಮಾಡಬಹುದಾಗಿದೆ ಎಂದರು. ಕಾರ್ಯಾಗಾರದಲ್ಲಿ ಸಮುದಾಯದ ಮುಂಖಂಡರ ಸಲಹೆಗಳನ್ನು ಆಲಿಸಿದ ಅವರು, .

ಅರಿವು ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಡಿಗೇರ, ಶಾಲಾ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಎಚ್.ಜಿ. ಮೀರ್ಜಿ, ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಕಾಂಬಳೆ ವೇದಿಕೆ ಮೇಲೆ ಉಪಸ್ಥಿತರಿದ್ದರು, ಕಾರ್ಯಾಗಾರದಲ್ಲಿ ಪರಿಶಿಷ್ಟ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.

ಸಮೀಕ್ಷೆ ನೂರಕ್ಕೆ ನೂರರಷ್ಟು ಮಾಹಿತಿ ದೊರೆಯುವಲ್ಲಿ ತಮ್ಮ ಪಾತ್ರ ಮುಖ್ಯವಾಗಿದ್ದು, ಎಲ್ಲರೂ ಸಹಕರಿಸಬೇಕು. ಸಮೀಕ್ಷೆ ಅವಧಿಯನ್ನು ಮೇ 25ರವರೆಗೆ ವಿಸ್ತರಿಸಲಾಗಿದೆ. ಸಮೀಕ್ಷಾ ಬ್ಲಾಕ್ ವ್ಯಾಪ್ತಿಯಲ್ಲಿ ಮೇ 26 ರಿಂದ 28ರವರೆಗೆ ನಡೆಸಲಾಗುತ್ತಿದೆ. ಆನ್ಲೈನ್ ಮೂಲಕ ಸ್ವಯಂ ಘೋಷಣೆ ಮಾಡಿಕೊಳ್ಳಲು ಮೇ 28ರವರೆಗೆ ಅವಧಿ ನಿಗದಿಪಡಿಸಲಾಗಿದೆ. ಸಮೀಕ್ಷೆಗೆ ನೇಮಕಗೊಂಡ ನೋಡಲ್ ಅಧಿಕಾರಿ, ತಹಸೀಲ್ದಾರ ಹಾಗೂ ಉಪವಿಭಾಗಾಧಿಕಾರಿಗಳು ಸಮೀಕ್ಷೆ ಕೈಗೊಂಡ ಮನೆ ಮನೆಗಳ ತೆರಳಿ ಪರಿಶೀಲನೆ ಮಾಡಲಿದ್ದಾರೆ.

- ಜಾನಕಿ ಕೆ.ಎಂ. ಜಿಲ್ಲಾಧಿಕಾರಿ