ಪರಿಶುದ್ಧ ಪರಿಸರ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರದು: ಹಿರಿಯ ಸಿವಿಲ್ ನ್ಯಾಯಾಧೀಶ ಯೋಗೇಶ್

| Published : Apr 27 2025, 01:30 AM IST / Updated: Apr 27 2025, 01:31 AM IST

ಪರಿಶುದ್ಧ ಪರಿಸರ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರದು: ಹಿರಿಯ ಸಿವಿಲ್ ನ್ಯಾಯಾಧೀಶ ಯೋಗೇಶ್
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳಿಗೆ ಪಾಠ, ಪ್ರವಚನದ ಜೊತೆಗೆ ಅವರ ಮೌಲ್ಯಯುತ ಬದುಕಿಗೆ ದಾರಿದೀಪವಾಗುವಂತಹ ಕಾರ್ಯಕ್ರಮಗಳು ಕೂಡ ಅತ್ಯವಶ್ಯಕ. ಇನ್ನು ಮುಂದಾದರೂ ಪರಿಸರ ಸಂರಕ್ಷಣೆ ವಿಚಾರದಲ್ಲಿ ಧನಾತ್ಮಕ ಕೊಡುಗೆ ನಮ್ಮೆಲ್ಲರದ್ದಾಗಬೇಕಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಪರಿಶುದ್ಧ ಪರಿಸರ ಉಳಿಸಿ, ಸಮಾಜಕ್ಕೆ ಬಳುವಳಿಯಾಗಿ ನೀಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಯೋಗೇಶ್ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಕಾಲೇಜಿನ ಐಕ್ಯೂಎಸಿ ಮತ್ತು ಭಾರತೀಯ ರೆಡ್ ಕ್ರಾಸ್ ಘಟಕ ವತಿಯಿಂದ ಗುರುವಾರ ಆಯೋಜಿಸಿದ್ದ ಭೂಮಿ ದಿನ ಮತ್ತು ಉದ್ದೀಪನ ಮದ್ದು ಸೇವನೆ ದುಷ್ಪರಿಣಾಮಗಳು ಹಾಗೂ ನಿರ್ಮೂಲನೆ ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದು ಮನುಷ್ಯನ ದುರಾಸೆ ಮಿತಿ ಮೀರುತ್ತಿದೆ. ಪ್ರಕೃತಿಯಿಂದ ಎಲ್ಲವನ್ನೂ ಪಡೆದುಕೊಂಡು ಕೊನೆಗೆ ಪ್ರಕೃತಿಯನ್ನೇ ಮಲೀನಗೊಳಿಸುತ್ತಿರುವ ವಿಕೃತ ಮನಸ್ಥಿತಿಗೆ ತಲುಪಿದ್ದಾನೆ. ಪ್ರಕೃತಿಗೆ ನಾವು ಬೇರೇನೂ ಕೊಡದಿದ್ದರೂ ಪರವಾಗಿಲ್ಲ. ಇರುವ ಪ್ರಕೃತಿಯನ್ನು ನಾಶಮಾಡದೆ ಉಳಿಸುವ ಪ್ರಯತ್ನ ಮಾಡಬೇಕು ಎಂದರು.

ಸಿವಿಲ್ ನ್ಯಾಯಾಧೀಶ ಎಚ್.ಎಸ್.ಶಿವರಾಜ್ ಮಾತನಾಡಿ, ಪ್ರತಿಯೊಬ್ಬ ಮನುಷ್ಯನಿಗೂ ಕಾನೂನಿನ ಅರಿವಿರಬೇಕು. ಮೊದಲ ಉಸಿರಾಟದಿಂದ ಕೊನೆ ಉಸಿರಿನವರೆಗೆ ನಾವೆಲ್ಲರೂ ಕಾನೂನಿನ ಛಾಯೆಯಲ್ಲಿಯೇ ಬದುಕುತ್ತೇವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಕಾನೂನಿಗೆ ಗೌರವ ಕೊಡಬೇಕು ಎಂದರು. ನಂತರ ಮಾದಕವಸ್ತು ವ್ಯಸನ ಅದರ ದುಷ್ಪರಿಣಾಮ, ತಡೆಗಟ್ಟುವಿಕೆ ಮತ್ತು ಮಾದಕವಸ್ತು ಮಾರಾಟ, ಸಾಗಣೆ ಬಗ್ಗೆ ಇರುವ ಕಾನೂನು ಕ್ರಮಗಳ ಕುರಿತು ಜಾಗೃತಿ ಮೂಡಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಶ್ರೇಯಸ್ ಕೃಷ್ಣನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪಾಠ, ಪ್ರವಚನದ ಜೊತೆಗೆ ಅವರ ಮೌಲ್ಯಯುತ ಬದುಕಿಗೆ ದಾರಿದೀಪವಾಗುವಂತಹ ಕಾರ್ಯಕ್ರಮಗಳು ಕೂಡ ಅತ್ಯವಶ್ಯಕ. ಇನ್ನು ಮುಂದಾದರೂ ಪರಿಸರ ಸಂರಕ್ಷಣೆ ವಿಚಾರದಲ್ಲಿ ಧನಾತ್ಮಕ ಕೊಡುಗೆ ನಮ್ಮೆಲ್ಲರದ್ದಾಗಬೇಕಿದೆ ಎಂದರು.

ಭೂಮಿ ದಿನದ ಮಹತ್ವ ಕುರಿತು ವಕೀಲೆ ಶಿಲ್ಪ, ವಕೀಲರ ಸಂಘದ ಅಧ್ಯಕ್ಷ ಮಹದೇವ ಹಾಗೂ ನಾಗಮಂಗಲ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಿವಕುಮಾರ್ ಮಾತನಾಡಿದರು. ಸಹಾಯಕ ಸರ್ಕಾರಿ ಅಭಿಯೋಜಕಿ ಟಿ.ಆರ್. ಶ್ರೀದೇವಿ, ಸರ್ಕಾರಿ ವಕೀಲ ಎಲ್.ಎಸ್.ಶಿವಲಿಂಗೇಗೌಡ, ಕಾನೂನು ಸೇವಾ ಸಮಿತಿ ಸಿಬ್ಬಂದಿ ಸೋನುಮೂರ್ತಿ, ರಮೇಶ್, ಕಾಲೇಜಿನ ಐಕ್ಯೂಎಸಿ ಸಂಯೋಜಕ ಹಾಗೂ ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಡಾ.ಎಂ.ರವಿಕುಮಾರ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಟಿ.ಎಂ.ಮೋಹನ್ ಕುಮಾರ್ ನಾಯಕ್, ಉಪನ್ಯಾಸಕ ಪ್ರೊ.ಮೋಹನ್ ಕುಮಾರ್ ಸೇರಿದಂತೆ ಹಲವರು ಇದ್ದರು.