ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಸಲಹೆ ನೀಡಿದರು. ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಜಿಲ್ಲಾ ಚಿತ್ರಕಲಾವಿದರ ಸಂಘ, ಡಾ. ಬಿ.ಆರ್.ಅಂಬೇಡ್ಕರ್ ಸಂಘಗಳ ಒಕ್ಕೂಟ ಹಾಗೂ ಪವನ್ ಸೇವಾ ಟ್ರಸ್ಟ್ ಇವರ ವತಿಯಿಂದ ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ೨ ದಿನಗಳ ಕಾಲ ಹಮ್ಮಿಕೊಂಡಿರುವ ಚಿತ್ರಕಲಾ ಶಿಬಿರಕ್ಕೆ ಬುದ್ದ, ಡಾ.ಬಿ.ಆರ್. ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಷಾರ್ಚನೆ ಮಾಡಿ ಮಾತನಾಡಿದರು. ನ. ೨೬ ರಂದು ಸಂವಿಧಾನ ದಿನವನ್ನು ಆಚರಣೆ ಮಾಡಲಾಯಿತು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ, ನಗರಸಭೆ ಹಾಗೂ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಮತ್ತು ಸರ್ಕಾರಿ ಕಚೇರಿಗಳಲ್ಲಿ, ಶಾಲಾ-ಕಾಲೇಜು, ವಿದ್ಯಾರ್ಥಿ ನಿಲಯಗಳಲ್ಲಿ ಸಂವಿಧಾನದ ಪೀಠಿಕೆ ಓದುವ ಮೂಲಕ ಅರಿವು ಮೂಡಿಸಲಾಯಿತು. ಅಂಬೇಡ್ಕರ್‌ರವರ ತುಂಬಾ ಹೆಮ್ಮೆಯ ಸಂವಿಧಾನವನ್ನು ರಚಿಸಿಕೊಟ್ಟಿರುವ ಕಾರಣದಿಂದ ದೇಶದಲ್ಲಿ ಎಲ್ಲರೂ ತಲೆಎತ್ತಿ ನೆಮ್ಮದಿಯಿಂದ ಸ್ವಾತಂತ್ರ್ಯವಾಗಿ ಬದುಕುತ್ತಿದ್ದೇವೆ ಎಂದರು. ಜ. ೨೬ ರಂದು ಗಣರಾಜ್ಯೋತ್ಸವ ದಿನ ಸಂವಿಧಾನ ಜಾಗೃತಿ ವಾಹನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿದರು. ಅದರಲ್ಲಿ ಸಂವಿಧಾನದ ಬಗ್ಗೆ, ಡಾ.ಬಿ.ಆರ್.ಅಂಬೇಡ್ಕರ್‌ರವರ ಜೀವನದ ಬಗ್ಗೆ ಎಲ್ಲ ಜನರಲ್ಲೂ ಅರಿವು ಮೂಡಿಸುವಂತದ್ದು, ಇದು ರಾಷ್ಟ್ರೀಯ ಹಬ್ಬ. ಇದು ಯಾವುದೇ ಜಾತಿ, ಧರ್ಮ, ಸಮುದಾಯಕ್ಕೆ ಸೀಮಿತವಲ್ಲ. ಸಂವಿಧಾನ ನಮ್ಮೆಲ್ಲರ ರಕ್ಷಕವಚ. ಸರ್ವರಿಗೂ ಸಮಾನತೆ ಇರುವ ಸಂವಿಧಾನ ಬಗ್ಗೆ ಮಾತನಾಡುವುದರಿಂದ ಒಳಿತಾಗುವುದಿಲ್ಲ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಪ್ರೀತಿ, ಭಾತೃತ್ವದಿಂದ ಒಂದು ಸಮಾಜ ನಿರ್ಮಾಣ ಮಾಡಬೇಕು. ಯಾವುದೇ ದ್ವೇಶ, ಅಸೂಯೆ, ಬೇರೆಬೇರೆ ರೀತಿ ಗುಂಪುಗಾರಿಕೆ ಮಾಡದೆ ಸಮಾನತೆಯಿಂದ ಬದುಕಬೇಕು. ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮ ತುಂಬಾ ಯಶ್ವಸಿಯಾಗಿದೆ. ಜಾಥಾಯು ಫೆ. ೨೫ಕ್ಕೆ ಮುಕ್ತಾಯವಾಗಬೇಕು. ಆದರೂ ಕೂಡ ತುಂಬಾ ಚೆನ್ನಾಗಿ ನಡೆಯುತ್ತಿರುವುದದಿಂದ ಮಾ. ೭ರವರಗೆ ವಿಸ್ತರಿಸಲಾಗಿದೆ ಎಂದರು. ಜಿಲ್ಲಾ ಚಿತ್ರಕಲಾವಿದರ ಸಂಘ, ಡಾ.ಬಿ.ಆರ್.ಅಂಬೇಡ್ಕರ್ ಸಂಘಗಳ ಒಕ್ಕೂಟ, ಪವನ್ ಸೇವಾ ಟ್ರಸ್ಟ್ ವತಿಯಿಂದ ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಚಿತ್ರಕಲಾ ಶಿಬಿರವನ್ನು ಅಯೋಜಿಸಿ ಸಂವಿಧಾನಕ್ಕೆ ಸಂಬಂಧಪಟ್ಟ ಚಿತ್ರಗಳನ್ನು ಮೂಡಿಸಿ ವಸ್ತುವಸ್ತುಪ್ರದರ್ಶನ ಅಯೋಜನೆ ಮಾಡುತ್ತಿರುವುದು ಒಂದು ಒಳ್ಳೆಯ ಕಾರ್ಯಕ್ರಮವಾಗಿದೆ. ಕಲಾವಿದರು ಕಲೆಯನ್ನು ಜೀವನ ಭಾಗವಾಗಿ ಮಾಡಬೇಕು ಎಂದರು. ಸಂವಿಧಾನ ಪುಸ್ತಕ ಓದಿದ್ದರೆ ಬದುಕು ಕಟ್ಟಿಕೊಳ್ಳಬಹುದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ.ಮಲ್ಲಿಕಾರ್ಜುನ ಮಾತನಾಡಿ, ರಾಜ್ಯದ ೩೧ ಜಿಲ್ಲೆಗಳ ಪೈಕಿಯಲ್ಲಿ ನಮ್ಮ ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಬಹಳ ಯಶ್ವಸಿಯಾಗಿ ನಡೆಯುತ್ತಿದೆ. ರಾಜ್ಯದಲ್ಲಿ ೩ನೇ ಸ್ಥಾನ ಪಡೆದಿದೆ. ಜಾಥಾದಲ್ಲಿ ೩ ಲಕ್ಷ ಜನರು ಸ್ವಯಂಪೇರಿತವಾಗಿ ಭಾಗವಹಿಸಿದ್ದಾರೆ. ಸಂವಿಧಾನ ಪುಸ್ತಕ ಓದಿದರೆ ಬದುಕು ಕಟ್ಟಿಕೊಳ್ಳಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅನುಕೂಲವಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ.ಮಂಜುನಾಥ್, ಶಿಕ್ಷಕಿ ಎಸ್. ಇಂದಿರಾ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಎಂ.ಕೃಷ್ಣಮೂರ್ತಿ ಮಾತನಾಡಿದರು. ಪುಟಾಣಿ ಚಾರಿತ್ರ್ಯ ಸಂವಿಧಾನ ಪೀಠಿಕೆ ಭೋದಿಸಿ ಗಮನ ಸೆಳೆದಳು.ಜಿಲ್ಲಾ ಚಿತ್ರಕಲಾವಿದರ ಸಂಘದ ಅಧ್ಯಕ್ಷ ರವಿತೇಜ್ ಪ್ರಾಸ್ತಾವಿಕ ಭಾಷಣ ಮಾಡಿದರು, ಪವನ್ ಸೇವಾ ಸಂಸ್ಥೆ ಅಧ್ಯಕ್ಷ ಸಂಪತ್ ಕುಮಾರ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಶ್ರೀರಾಮಚಂದ್ರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಮಾದಯ್ಯ, ನಗರಸಭಾ ಸದಸ್ಯ ಎಂ.ಮಹೇಶ್, ಚಿತ್ರಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಅನಿಲ್ ಕುಮಾರ್ ರಾಮಸಮುದ್ರ ಸುರೇಶ್, ಚಿತ್ರಕಲಾವಿದರು, ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.