ಸಾರಾಂಶ
ಶರಣರ ತತ್ವಗಳನ್ನು ಬರೀ ಬೋಧಿಸಿದರೆ ಸಾಲದು, ಅವುಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು
ಗದಗ: ಇಂದಿನ ಸಮಾಜದಲ್ಲಿ ಪ್ರತಿಯೊಬ್ಬರೂ ಸುಖವಾಗಿ ಬದುಕಬೇಕಾದರೆ ಶರಣರು ಬೋಧಿಸಿದ ತತ್ವಸಿದ್ಧಾಂತಗಳಾದ ಕಾಯಕ-ದಾಸೋಹಗಳನ್ನು ಬದುಕಿನಲ್ಲಿ ಪ್ರಾಯೋಗಿಕವಾಗಿ, ಕ್ರಿಯಾತ್ಮಕವಾಗಿ ರೂಢಿಸಿಕೊಳ್ಳಬೇಕು ಎಂದು ತಾಲೂಕಿನ ಹೊಸಹಳ್ಳಿ ಬೂದೀಶ್ವರ ಸಂಸ್ಥಾನಮಠದ ಅಭಿನವ ಬೂದೀಶ್ವರ ಸ್ವಾಮೀಜಿ ಹೇಳಿದರು.
ಗ್ರಾಮದ ಬೂದೀಶ್ವರ ಮಠದಲ್ಲಿ ಬೂದೀಶ್ವರ ಕರ್ತೃ ಗದ್ದುಗೆಗೆ ಬೆಳ್ಳಿಕವಚ ಧಾರಣೆ ಮಾಡುವ ಮೂಲಕ ಆಶೀರ್ವಚನ ನೀಡಿ ಮಾತನಾಡಿದರು.ಶರಣರ ತತ್ವಗಳನ್ನು ಬರೀ ಬೋಧಿಸಿದರೆ ಸಾಲದು, ಅವುಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು, ದುಡಿದುದರಲ್ಲಿ ಸ್ವಲ್ಪಭಾಗ ಸಮಾಜಕ್ಕೆ ಸಮರ್ಪಣೆ ಮಾಡುವುದರಿಂದ ಸಮಾಜ ಕಲ್ಯಾಣವಾಗುತ್ತದೆ ಎಂದರು.
ಶ್ರಾವಣ ಮಾಸದ ಮುಕ್ತಾಯ ಸಮಾರಂಭದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಬೂದೀಶ್ವರ ತಪೋಭೂಮಿಯಾದ ಸಿದ್ಧರಮಟ್ಟಿಯಿಂದ ಭವ್ಯ ಮೆರವಣಿಗೆಯಲ್ಲಿ ಭಜನಾ ಮಂಡಳಿಗಳು, ಸುಮಂಗಲೆಯರು ಕುಂಭಮೇಳದೊಂದಿಗೆ ಬೆಳ್ಳಿಕವಚವನ್ನು ಶ್ರೀಮಠಕ್ಕೆ ತರಲಾಯಿತು.ಅಭಿಷೇಕ, ಮಹಾಪೂಜೆಯೊಂದಿಗೆ ಗದ್ದುಗೆಗೆ ಬೆಳ್ಳಿಕವಚವನ್ನು ಶ್ರೀಗಳ ಅಮೃತ ಹಸ್ತದಿಂದ ಜೋಡಿಸಲಾಯಿತು.
ಕಾರ್ಯಕ್ರಮದಲ್ಲಿ ಕುರ್ತಕೋಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಪ್ಪಣ್ಣ ಇನಾಮತಿ, ಸದಸ್ಯರಾದ ಚನ್ನಪ್ಪ ಬ್ಯಾಹಟ್ಟಿ, ಬಸವರಾಜ ರೋಣದ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಸಂಗಪ್ಪ ರುದ್ರಪ್ಪ ಬ್ಯಾಹಟ್ಟಿ, ಪ್ರಗತಿಪರ ರೈತರಾದ ಹನಮರಡ್ಡಿ ಚಾಕಲಬ್ಬಿ, ವಿಶ್ರಾಂತ ಪ್ರಾಧ್ಯಾಪಕ ಡಾ. ಶರಣಬಸವ ವೆಂಕಟಾಪುರ, ಗ್ರಾಮದ ಬೂದೀಶ್ವರ ಭಜನಾ ಸಂಘ ಹಾಗೂ ದುರ್ಗಾದೇವಿ ಭಜನಾ ಸಂಘದ ಗುರು ಹಿರಿಯರು ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಮಹಾದಾನಿಗಳಿಗೆ ಗುರುರಕ್ಷಣೆಯ ಸನ್ಮಾನವನ್ನು ನೆರವೇರಿಸಲಾಯಿತು.