ಭಗವದ್ಗೀತೆಯಲ್ಲಿನ ಜೀವನ ಮೌಲ್ಯಗಳನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಿ: ಭವಾನಿ ಶಂಕರ್ ಬೋರ್ಕಾರ್

| Published : May 20 2025, 01:28 AM IST

ಭಗವದ್ಗೀತೆಯಲ್ಲಿನ ಜೀವನ ಮೌಲ್ಯಗಳನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಿ: ಭವಾನಿ ಶಂಕರ್ ಬೋರ್ಕಾರ್
Share this Article
  • FB
  • TW
  • Linkdin
  • Email

ಸಾರಾಂಶ

ಭಗವದ್ಗೀತೆಯಲ್ಲಿನ ಜೀವನ ಮೌಲ್ಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಬಿ.ವಿ. ಭವಾನಿ ಶಂಕರ್‌ ಬೋರ್ಕಾರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಭಗವದ್ಗೀತೆಯಲ್ಲಿನ ಜೀವನ ಮೌಲ್ಯ ಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಭಾರತೀಯ ಭೂ ಸೇನೆಯ ನಿವೃತ್ತ ಕ್ಯಾಪ್ಟನ್ ಬಿ. ವಿ. ಭವಾನಿ ಶಂಕರ್ ಬೋರ್ಕಾರ್ ಅವರು ಅಭಿಪ್ರಾಯಪಟ್ಟರು.

ಬೇಟೋಳಿ ರಾಮನಗರದ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಸಭಾಂಗಣದಲ್ಲಿ ಜರುಗಿದ ಕೊಡಗು ಬಾಲವಲೀಕಾರ್ ರಾಜಾಪುರ ಸಾರಸ್ವತ ಬ್ರಾಹ್ಮಣ ಸಮಾಜದ ಮಕ್ಕಳ ವೈದಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಏನನ್ನಾದರೂ ಕಲಿಯಬೇಕಾದರೆ ಮೊದಲು ಆತನಲ್ಲಿ ಶ್ರದ್ಧೆ ಹಾಗೂ ಕಲಿಯುವ ಆಸಕ್ತಿ ಇರಬೇಕು. ಇದರೊಂದಿಗೆ ಕಲಿಯುವ ಸಂದರ್ಭ ದಲ್ಲಿ ಏಕಾಗ್ರತೆಯು ಅತಿ ಮುಖ್ಯವಾಗಿದ್ದು. ಗುರುಗಳು ಬೋಧಿಸಿದ್ದನ್ನು ಉತ್ತಮ ರೀತಿಯಲ್ಲಿ ಶ್ರವಣ ಮಾಡಿಕೊಳ್ಳಬೇಕು ಎಂದರು.

ಭಗವದ್ಗೀತೆ ಪಠಣದಿಂದ ಮನಃಶಾಂತಿ:

ಶ್ರವಣ ಮಾಡಿಕೊಂಡದ್ದನ್ನು ಮನದಲ್ಲಿ ಮೇಲಿಂದ ಮೇಲೆ ಮನನ ಮಾಡಿಕೊಳ್ಳಬೇಕು. ಮನನ ಮಾಡಿಕೊಂಡ ನಂತರ ಅದನ್ನು ಅನುಷ್ಠಾನಗೊಳಿಸಬೇಕು. ಈ ರೀತಿ ಕಲಿತಂತಹ ಸಂದರ್ಭದಲ್ಲಿ ಮಾತ್ರ ಕಲಿತಂತಹ ವಿಚಾರವೂ ನಮ್ಮಲ್ಲಿ ಉಳಿಯುತ್ತದೆ. ಕಲಿಕೆಯ ಮೊದಲ ಹಂತವೇ ಏಕಾಗ್ರತೆ. ಮನಸ್ಸು ಚಂಚಲವಾಗಿದ್ದರೆ ಏನನ್ನು ಕಲಿಯಲು ಸಾಧ್ಯವಿಲ್ಲ. ಒಂದು ವೇಳೆ ಕಲಿತರು ಅದು ದೀರ್ಘಕಾಲದವರೆಗೆ ಯೋಚನೆಯಲ್ಲಿ ಉಳಿಯಲು ಸಾಧ್ಯವಿಲ್ಲ. ಆದ್ದರಿಂದ ಮನಸ್ಸಿನ ಏಕಾಗ್ರತೆಗೆ ಯೋಗ ಹಾಗೂ ಧ್ಯಾನ ಅತಿ ಮುಖ್ಯ. ಇದರೊಂದಿಗೆ ಭಗವದ್ಗೀತೆ ಉಪನಿಷತ್ತು ಹಾಗೂ ಇನ್ನಿತರ ಶ್ಲೋಕಗಳನ್ನು ಪಠಣದಿಂದ ಮನಸ್ಸು ಹಾಗೂ ದೇಹದ ನಡುವೆ ಏಕಾಗ್ರತೆಯನ್ನು ಸಾಧಿಸುವುದರೊಂದಿಗೆ ಮನಶಾಂತಿ ಲಭಿಸುತ್ತದೆ. ಭಗವತ್ ಗೀತೆ ಪಠಣದಿಂದ ಕೃಷ್ಣನು ಬೋಧಿಸಿದ ಅಮೂಲ್ಯ ಸಂದೇಶ ದೊಂದಿಗೆ ಜೀವನ ಮೌಲ್ಯವನ್ನು ಅರ್ಥೈಸಿ ಜೀವನದಲ್ಲಿ ರೂಢಿಸಿಕೊಳ್ಳ ಬೇಕೆಂದರು.

ಕಾರ್ಯಕ್ರಮದ ಮತ್ತೋರ್ವ ಅತಿಥಿಗಳಾದ ಪ್ರವೀಣ್ ಭಟ್ ಮಾತನಾಡಿ ಶಿಬಿರದಲ್ಲಿ ಪಾಲ್ಗೊಂಡಂತಹ ಶಿಬಿರಾರ್ಥಿಗಳು ಶಿಬಿರದಲ್ಲಿ ಕಲಿತಂತಹ ವಿಚಾರಗಳನ್ನು ತಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಹಾಗೂ ಶಿಬಿರದಲ್ಲಿ ಕಲಿತ ವಿಚಾರ ಶಿಬಿರಕ್ಕೆ ಮಾತ್ರ ಸೀಮಿತವಾಗದೆ ಜೀವನದ ಉದ್ದಕ್ಕೂ ಪಾಲಿಸಬೇಕೆಂದರು.

15 ವಟುಗಳು ಭಾಗಿ:

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪುದುಪಾಡಿ ಅಯ್ಯಪ್ಪ ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶೈಲೇಶ್ ಕಾಮತ್ ಕೊಡಗಿನಲ್ಲಿ ಇದೇ ಮೊದಲ ಬಾರಿ ಕೊಡಗು ಬಾಲವಳಿಕಾರ್ ರಾಜಪುರ ಸಾರಸ್ವತ ಬ್ರಾಹ್ಮಣರ ವೈದಿಕ ಶಿಬಿರವನ್ನು ನಡೆಸಲಾಗಿದ್ದು ಇದರಲ್ಲಿ ಒಟ್ಟು 15 ವಟುಗಳು ಪಾಲ್ಗೊಂಡಿದ್ದರು. ಮೂರು ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ರಾಜೇಶ್ ಭಟ್ ಹಾಗೂ ಶ್ರೇಯಸ್ ಭಟ್ ನೇತೃತ್ವದಲ್ಲಿ ಶಿಬಿರಾರ್ಥಿಗಳಿಗೆ ಕುಲದೇವರ ಪೂಜೆ, ಸಂಧ್ಯಾವಂದನೆ, ಯೋಗ, ಭೋಜನ ವಿಧಿ , ಜನಿವಾರ ದಾರಣೆ ಹಾಗೂ ಭಗವತ್ ಗೀತೆ ಪಠಣ ವನ್ನು ಕಲಿಸಲಾಗಿದ್ದು ಮುಂದಿನ ವರ್ಷ ಇನ್ನು ಹೆಚ್ಚಿನ ವಟುಗಳೊಂದಿಗೆ 7 ದಿನಗಳ ಶಿಬಿರ ನಡೆಸುವ ಕುರಿತು ಚಿಂತನೆ ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶ್ರೇಯಸ್ ಭಟ್, ವೇಣುಗೋಪಾಲ್ ಭಟ್ ಹಾಜರಿದ್ದರು. ಕಾರ್ಯಕ್ರಮದ ನಂತರ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಗೀತ , ರಾಮಶರ್ಮ , ಜ್ಯೋತಿ , ಸುಮನ ಹಾಗೂ ಪೋಷಕರು‌ ಹಾಜರಿದ್ದರು.